ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸ್ಪಂದನ’ಕ್ಕೆ ಹರಿದು ಬಂತು ಮನವಿಗಳ ಮಹಾಪೂರ!

ಸಲ್ಲಿಕೆಯಾದವು ಒಂದೇ ದಿನ 161 ಅರ್ಜಿಗಳು, ವಿಲೇವಾರಿಗೆ 15 ದಿನಗಳ ಗಡುವು
Published 10 ಜನವರಿ 2024, 8:36 IST
Last Updated 10 ಜನವರಿ 2024, 8:36 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಮಂಗಳವಾರ ಶಾಸಕ ಎ.ಎಸ್.ಪೊನ್ನಣ್ಣ ಅವರು ನಡೆಸಿದ ‘ಜನಸ್ಪಂದನ’ ಸಭೆಯಲ್ಲಿ 161 ಮಂದಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.

ಕೂಲಿಕಾರ್ಮಿಕರಿಂದ ನಿವೇಶನಕ್ಕೆ ಅರ್ಜಿ, ವೃದ್ಧಾಪ್ಯ ವೇತನ ಬಾರದಿರುವುದು, ಗೃಹಲಕ್ಷ್ಮಿ ಯೋಜನೆಗೆ ಹಣ ಬಾರದಿರುವುದು ಮೊದಲಾದ ಸಮಸ್ಯೆಗಳ ಕುರಿತು ಜನಸಾಮಾನ್ಯರು ಅರ್ಜಿ ಸಲ್ಲಿಸಿದರು.

ಅರ್ಜಿ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ರಾಜ್ಯ ಸರ್ಕಾರದ ಸೂಚನೆಯಂತೆ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಆಲಿಸಲಾಗುತ್ತಿದೆ. ಜತೆಗೆ, 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ನಿರ್ದಿಷ್ಟ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ನೇರವಾಗಿ, ಸಮಾನವಾಗಿ ಸೌಲಭ್ಯ ಹಂಚಿಕೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಚ್ಛೆಯಾಗಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು. ಕಚೇರಿಗೆ ಬರುವ ಜನಸಾಮಾನ್ಯರನ್ನು ಗೌರವದಿಂದ ಕಾಣಬೇಕು. ಕೆಲಸ ಆಗದಿದ್ದರೆ ಕನಿಷ್ಠ ಪಕ್ಷ ಹಿಂಬರಹವನ್ನಾದರೂ ನೀಡಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 1.5 ಲಕ್ಷ ಮಹಿಳೆಯರಿಗೆ ತಲಾ ₹ 2 ಸಾವಿರ ಖಾತೆಗೆ ಜಮೆಯಾಗುತ್ತಿದೆ. ಉಳಿದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಎದುರಾಗಿರುವ ದಾಖಲೆಗಳ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

‘ಯುವ ನಿಧಿ’ ಯೋಜನೆ ಅಡಿ ಹೆಸರು ನೋಂದಾಯಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿ . 50 ಸಾವಿರ ಕುಟುಂಬಗಳು 200 ಯೂನಿಟ್ ಲಾಭ ಪಡೆಯುತ್ತಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ, ‘ಜನತೆಯಿಂದ ಬಂದ ಅರ್ಜಿಗಳನ್ನು ಶೇ 100ರಷ್ಟು ಪ್ರಮಾಣದಲ್ಲಿ 15 ದಿನದ ಒಳಗೆ ವಿಲೇವಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸಭೆಯಲ್ಲಿ ವನ್ಯಜೀವಿಗಳ ಸಮಸ್ಯೆ ಕುರಿತು ಚರ್ಚೆ ನಡೆಯಿತು. ಕಾಡಾನೆ ಹಾವಳಿಯಿಂದ ಬೆಳೆಗೆ ಹಾನಿಯಾಗುತ್ತಿದೆ. ಹುಲಿ ದಾಳಿಯಿಂದ ಜಾನುವಾರು ಹಾಗೂ ಮನುಷ್ಯರು ಬಲಿಯಾಗುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭಿಕರು ದೂರಿದರು.

ಇದಕ್ಕೆ ಪ್ರತಿಕ್ರಿಸಿಯಿಸಿದ ಪೊನ್ನಣ್ಣ, ‘ಇದೊಂದು ಬಹು ದೊಡ್ಡ ಸಮಸ್ಯೆಯಾಗಿದ್ದು, ಅರಣ್ಯಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ವನ್ಯಜೀವಿಗಳ ಉಪಟಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಸ್ತುಪ್ರದರ್ಶನ ಮಳಿಗೆಗಳು ಗಮನ ಸೆಳೆದವು. ಇದೇ ವೇಳೆ ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಅಭಿಯಾನಕ್ಕೂ ಚಾಲನೆ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಪಟ್ಟು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ತಹಶೀಲ್ದಾರ್ ರಾಮಚಂದ್ರ ಪೊನ್ನಂಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೀದೇರಿರಿ ನವೀನ್, ಮುಖಂಡ ಎರ್ಮು ಹಾಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT