ಬುಧವಾರ, ಆಗಸ್ಟ್ 17, 2022
25 °C
ಕೂಡುಮಂಗಳೂರು ಗ್ರಾ.ಪಂ: ಕೃಷಿಕ ಸಣ್ಣಪ್ಪಗೆ ಅದೃಷ್ಟ ಪರೀಕ್ಷೆ

ಐದು ಬಾರಿ ಗೆದ್ದರೂ ಸಿಗದ ಅಧ್ಯಕ್ಷ ಸ್ಥಾನ

ರಘುಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಅತಿದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಕೂಡು ಮಂಗಳೂರು ಗ್ರಾ.ಪಂ.ನಲ್ಲಿ ಸತತ ಆರನೇ ಬಾರಿಗೆ ಕೃಷಿಕ ಕೆ.ವಿ.ಸಣ್ಣಪ್ಪ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಗೆದ್ದರೆ ಅಧ್ಯಕ್ಷ ಸ್ಥಾನ ಸಿಗುವ ಮಹದಾಸೆಯೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. 

ಗ್ರಾಮದ ನಿವಾಸಿ ಸಣ್ಣಪ್ಪ 1991ರಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ರೈತರ ಏಳಿಗೆಯೊಂದಿಗೆ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು 1995ನೇ ಇಸವಿಯಲ್ಲಿ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು.

ನಂತರ ನಡೆದ ಎಲ್ಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಎರಡು ಬಾರಿ ಉಪಾಧ್ಯಕ್ಷರಾಗಿ ಹಾಗೂ ಮೂರು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರಿಗೆ ಅಧ್ಯಕ್ಷ ಸ್ಥಾನದ ಭಾಗ್ಯ ದೊರೆತಿಲ್ಲ. ಇದೀಗ 6ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪಂಚಾಯಿತಿಯ 7ವಾರ್ಡ್‌ನ 24 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 4ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಸಣ್ಣಪ್ಪ ಸ್ಪರ್ಧೆ ಮಾಡಿದ್ದಾರೆ. ವಾರ್ಡಿನಲ್ಲಿ 967 ಮತದಾರರು ಇದ್ದು, ಉದ್ಯಮಿ ಶಿವಪ್ಪ, ಉದ್ಯಮಿ ಮಂಜುನಾಥ್, ಮಾಜಿ ಸದಸ್ಯ ಕೆ.ಸಿ.ಸುರೇಶ್, ಉದಯಕುಮಾರ್, ವಿ.ರವಿ ಸ್ಪರ್ಧೆ ಮಾಡಿದ್ದಾರೆ. ಮಂಜುನಾಥ್ ಹಾಗೂ ಸಣ್ಣಪ್ಪ ನಡುವೆ ಪೈಪೋಟಿ ಎದುರಾಗುವ ಲಕ್ಷಣ ಕಂಡುಬರುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ರಹಿತವಾಗಿದ್ದರೂ ಕೂಡ ಮೂರು ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಕಾವು ರಂಗೇರಿದೆ. ಗ್ರಾ.ಪಂ.ನ ಮಾಜಿ ಅಧ್ಯಕ್ಷ ಕೆ.ಕೆ.ಬೋಗಪ್ಪ, ಪುಟ್ಟರಾಜು, ಪಾರ್ವತಮ್ಮ ರಾಮೇಗೌಡ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರಾದ ಜೆ.ಫಿಲೋಮಿನಾ, ಕೆ.ಜೆ.ಮಂಜುನಾಥ್, ಶೀಲಾ, ಶಿಲ್ಪಾ, ನಂದಿನಿ, ಭಾಸ್ಕರ್ ನಾಯಕ್, ಶ್ರೀನಿವಾಸ್, ದೇವರಾಜ್, ಜ್ಯೋತಿಪ್ರಮೀಳಾ ಸೇರಿದಂತೆ ಅನೇಕ ಘಟಾನುಘಟಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು