ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು ಪಟ್ಟಣದಲ್ಲಿ ಬೆಳ್ಳಕ್ಕಿಗಳ ಕಲರವ

ಮಳೆಗಾಲದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಕೊಡಗಿನತ್ತ ಬರುವ ಪಕ್ಷಿಗಳು
Last Updated 3 ಜುಲೈ 2021, 3:23 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಅಪ್ಪಚ್ಚಕವಿ ರಸ್ತೆ ಬದಿಯ ಮರಗಳಲ್ಲಿ ಬೆಳ್ಳಕ್ಕಿಗಳ ಕಲರವ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬೆಳ್ಳಕ್ಕಿಗಳು ಗೂಡು ಕಟ್ಟಿ, ಮೊಟ್ಟೆಯಿಟ್ಟು ಕಾವು ನೀಡುತ್ತಿವೆ. ಮುಂಗಾರು ಪ್ರಾರಂಭ ವಾಗುತ್ತಿದ್ದಂತೆಯೇ ಪಟ್ಟಣ ವ್ಯಾಪ್ತಿಯ ಪರಿಸರದಲ್ಲಿ ಎಲ್ಲಿ ನೋಡಿದರೂ ಬೆಳ್ಳಕ್ಕಿಗಳ ದಂಡು ಕಂಡು ಬರುತ್ತದೆ.

ಹಲವು ವರ್ಷಗಳ ಹಿಂದೆ ಸಮೀಪದ ಚೆರಿಯಪರಂಬುವಿನ ನದಿ ತೀರದ ಬಿದಿರು ಮೆಳೆಗಳಲ್ಲಿ ಆಶ್ರಯ ಪಡೆಯುತ್ತಿದ್ದ ಬೆಳ್ಳಕ್ಕಿಗಳು ಈಚೆಗೆ ನಗರಗಳಲ್ಲಿಯೇ ಬೀಡು ಬಿಡುತ್ತಿವೆ. ಕಾವೇರಿ ನದಿ ತೀರದ ಹೆಮ್ಮರಗಳಲ್ಲಿ ನೆಲೆನಿಂತು ಸಂತಾನೋತ್ಪತ್ತಿಯ ಬಳಿಕ ಹಿಂತಿರುಗುತ್ತವೆ. ಅವುಗಳು ಗೂಡು ಕಟ್ಟುವ, ಮೊಟ್ಟೆಯಿಡುವ ಹಾಗೂ ಕಾವು ನೀಡಿ ಮರಿಗಳಿಗೆ ಗುಟುಕು ನೀಡುವ ಸಂಭ್ರಮದಲ್ಲಿವೆ.

ಸಾಮಾನ್ಯವಾಗಿ ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗಿ ಮಳೆಯ ರಭಸ ಹೆಚ್ಚಾಗುತ್ತಿದ್ದಂತೆಯೇ ಚಳಿ ಗಾಳಿಯ ಹೊಡೆತ ಸಹಿಸಲಾರದ ಕೆಲವು ಪಕ್ಷಿಗಳು ಇತರೆ ಪಕ್ಷಿಧಾಮದತ್ತ ಹಾರುತ್ತವೆ. ಮತ್ತೆ ಬರುವುದು ಮಳೆ ಕಡಿಮೆ ಆದ ಬಳಿಕ. ಆದರೆ, ಬೆಳ್ಳಕ್ಕಿಗಳು ಇವುಗಳಿಗೆ ತದ್ವಿರುದ್ಧ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ನಿಧಾನವಾಗಿ ಕೊಡಗಿನತ್ತ ಬರಲಾರಂಭಿಸುತ್ತವೆ. ಸೂಕ್ತವಾದ ಕೆಲವು ಸ್ಥಳಗಳಲ್ಲಷ್ಟೇ ಇವು ಬೀಡು ಬಿಡುತ್ತವೆ. ಸಂತಾನೋತ್ಪತ್ತಿಯ ಬಳಿಕ ಅಲ್ಲಿಂದ ಹಾರಿ ಹೋಗುತ್ತವೆಯಾದರೂ ಮತ್ತೆ ಮರು ವರ್ಷ ಬಂದಾಗ ಅದೇ ಸ್ಥಳವನ್ನು ಆಶ್ರಯಿಸುತ್ತವೆ.

ಕಾವೇರಿ ತವರಿನಲ್ಲಿ ಮಳೆಯಾದಾಗ ನದಿಗಳು ತುಂಬಿ ಹರಿಯುತ್ತವೆ. ಈ ಸಂದರ್ಭ ಮಳೆಯಿಂದಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ನೀರಿನ ಹರಿವು ಹೆಚ್ಚಾದಾಗ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಸ್ಥಳ ಹುಡುಕಿಕೊಂಡು ಕೊಡಗಿನತ್ತ ಬರುತ್ತವೆ ಎಂದು ಸ್ಥಳೀಯರಾದ ತಿಮ್ಮಯ್ಯ ಹೇಳುತ್ತಾರೆ.

ದೇಶ ವಿದೇಶಗಳಿಂದ ಹಲವು ಬಗೆಯ ಪಕ್ಷಿಗಳು ರಂಗನತಿಟ್ಟಿಗೆ ಬರುವುದರಿಂದ ಅಲ್ಲಿ ಸಂತಾನೋತ್ಪತ್ತಿಗೆ ತೊಂದರೆ ಆಗಬಹುದೆಂದು ಸೂಕ್ತ ಸ್ಥಳಗಳನ್ನು ಅರಸಿಕೊಂಡು ಇಲ್ಲಿಗೆ ಬರುತ್ತವೆ ಎಂದು ಅವರು ತಿಳಿಸುತ್ತಾರೆ.

ನಾಪೋಕ್ಲು ಪಟ್ಟಣದ ಆಸ್ಪತ್ರೆ ಬಳಿ, ಬಸ್ ನಿಲ್ದಾಣದ ತೋಟದ ಮರಗಳಲ್ಲಿ ಬೆಳ್ಳಕ್ಕಿಗಳು ಬೀಡು ಬಿಟ್ಟಿವೆ. ಬೆಳಿಗ್ಗೆ ಗೂಡು ಬಿಟ್ಟು ಹೋದರೆ ಸಂಜೆ ಮರಳಿ ಗೂಡು ಸೇರುತ್ತವೆ. ಹತ್ತಾರು ಕಿ.ಮೀ ವರೆಗೆ ಹಾರಿ ಹೋಗುವ ಇವು ಗದ್ದೆಗಳಲ್ಲಿ, ನದಿ ಬದಿಗಳಲ್ಲಿ ಕಪ್ಪೆ ಹುಳುಗಳನ್ನು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಹಸಿರು ಗದ್ದೆಗಳ ನಡುವೆ ಕತ್ತೆತ್ತಿ ಅತ್ತಿತ್ತ ನೋಡುತ್ತಾ ಹೊಂಚು ಹಾಕಿ ಹುಳು ಹುಪ್ಪಟೆಗಳನ್ನು ಹಿಡಿಯುತ್ತವೆ.

ಪ್ರತಿ ವರ್ಷವೂ ತಪ್ಪದೇ ನಾಪೋಕ್ಲು ಮತ್ತು ಮೂರ್ನಾಡು ತಾಣಗಳಿಗೆ ಬೆಳ್ಳಕ್ಕಿಗಳು ಆಗಮಿಸುತ್ತಿದ್ದು, ಆ ಮೂಲಕ ಕೊಡಗಿನಲ್ಲಿಯೂ ಪಕ್ಷಿಧಾಮದ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT