ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ|ನಾಲೆ ಒತ್ತುವರಿ, ಬೇಲಿ ನಿರ್ಮಾಣ ಆರೋಪ

ತೆರವುಗೊಳಿಸಲು ರೈತ ಸಂಘ ಆಗ್ರಹ
Published 28 ಜೂನ್ 2023, 7:31 IST
Last Updated 28 ಜೂನ್ 2023, 7:31 IST
ಅಕ್ಷರ ಗಾತ್ರ

ಕುಶಾಲನಗರ: ಹೆಬ್ಬಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರುಣಾಕುಮಾರಿ ಹಾಗೂ ಅವರ ಪತಿ ವರೇಂದ್ರ ಅವರು ಹೆಬ್ಬಾಲೆ ಗ್ರಾಮದ ಹೊಸಬೀದಿ ಪಕ್ಕದಲ್ಲಿ ಹಾದು ಹೋಗಿರುವ ನೀರಾವರಿ ಇಲಾಖೆಯ ಕಿರುನಾಲೆಯನ್ನು ಒತ್ತುವರಿ ಮಾಡಿಕೊಂಡು ಜಮೀನಿನ ಸುತ್ತಲು ಬೇಲಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ಗ್ರಾಮದ ಮುಖಂಡ ಲಕ್ಕಪ್ಪ ದೂರಿದ್ದಾರೆ.

ರೈತರ ಹತ್ತಾರು ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶದಿಂದ ಈ ನಾಲೆ ನಿರ್ಮಿಸಲಾಗಿದೆ. ನಾಲೆ ನಿರ್ಮಾಣ ಜಾಗದ‌ ಮಾಲೀಕರಿಗೆ ನೀರಾವರಿ ಇಲಾಖೆಯಿಂದ‌ ಪರಿಹಾರವನ್ನು ಸಹ ನೀಡಲಾಗಿದೆ. ಈ ನಾಲೆಯ ಪಕ್ಕದಲ್ಲಿ ವರೇಂದ್ರ ಅವರ ಜಮೀನು ಇದ್ದು, ಅವರ ಜಮೀನಿಗೆ ಮಾತ್ರ ಬೇಲಿ ಹಾಕದೆ ನಾಲೆಯನ್ನು ಸೇರಿಸಿಕೊಂಡು ಬೇಲಿ ಹಾಕುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ರೈತರು ತಮ್ಮ ಜಾನುವಾರುಗಳಿಗೆ ನೀರು ಕೂಡಿಸಲು ಹೋಗದಂತೆ ಹಾಗೂ ಮಹಿಳೆಯರು ಪಾತ್ರೆ ಮತ್ತು ಬಟ್ಟೆ ತೊಳೆಯಲು ಹೋಗದಂತೆ ಅಡ್ಡಲಾಗಿ ತಂತಿ ಬೇಲಿ ಹಾಕುತ್ತಿದ್ದಾರೆ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಈ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಶ್ರೀನಿವಾಸ್ ಆರೋಪಿಸಿದ್ದಾರೆ. ರೈತರ ಕಾಲುವೆಗೆ ಬೇಲಿ ನಿರ್ಮಿಸಲು ಮುಂದಾಗಿರುವ ಅರುಣಾ ಕುಮಾರಿ ಅವರು ಈ ಕೂಡಲೇ ಬೇಲಿ ತೆರವು ಮಾಡದೆ ಹೋದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಎಸ್.ಆರ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ನಾಲೆ ಒತ್ತುವರಿ ಮಾಡಿಲ್ಲ: ಅರುಣಾ ನಮ್ಮ ಜಮೀನಿನಲ್ಲಿ ಸ್ವಂತ ಹಣದಿಂದ ನಾಲೆ ನಿರ್ಮಿಸಿಕೊಂಡಿದ್ದೇವೆ. ನೀರಾವರಿ ಇಲಾಖೆಗೆ ಸೇರಿದ ನಾಲೆಯನ್ನು ಒತ್ತುವರಿ ಮಾಡಿಲ್ಲ. ನಮ್ಮ ಜಮೀನಿನ ಮೇಲ್ಭಾಗದವರೆಗೆ ಮಾತ್ರ ನೀರಾವರಿ ಇಲಾಖೆ ನಾಲೆ ಬಂದಿದೆ. ಮಳೆಗಾಲದಲ್ಲಿ ನಮ್ಮ ಜಮೀನಿಗೆ ನೀರು ನುಗ್ಗುತ್ತಿದ್ದು ಆ ಹಿನ್ನೆಲೆಯಲ್ಲಿ ಸ್ವಂತ ಹಣದಿಂದ ನಾಲೆ ನಿರ್ಮಿಸಿಕೊಂಡಿದ್ದೇವೆ. ಆದ್ದರಿಂದ ನಾಲೆ ಸೇರಿಸಿಕೊಂಡು ನಮ್ಮ ಜಾಗ ಎಲ್ಲಿವರೆಗೆ ಇದೆಯೋ ಅಲ್ಲಿವರೆಗೆ ಮಾತ್ರ ಬೇಲಿ ನಿರ್ಮಿಸುತ್ತಿದ್ದೇವೆ ಎಂದು ಹೆಬ್ಬಾಲೆ ಗ್ರಾ.ಪಂ ಉಪಾಧ್ಯಕ್ಷೆ ಅರುಣಾ ಕುಮಾರಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT