ಗುರುವಾರ , ಮಾರ್ಚ್ 23, 2023
30 °C

ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರು, ಹೋರಾಟಗಾರರ ನಡುವೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ (ಕೊಡಗು ಜಿಲ್ಲೆ): ಎರಡು ದಶಕಗಳಿಂದ ಕುಶಾಲನಗರ ತಾಲ್ಲೂಕು ರಚನೆಗೆ ಹೋರಾಟ ಮಾಡಿದ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಹೋರಾಟಗಾರರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಹೋರಾಟಗಾರರು ಕಂದಾಯ ಸಚಿವ ಆರ್‌.ಅಶೋಕ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ಸಮಿತಿ ಮುಖಂಡರಾದ ಕೆ.ಪಿ.ಚಂದ್ರಕಲಾ ವೇದಿಕೆ ಮುಂಭಾಗಕ್ಕೆ ಬಂದು, ‘ನೂತನ ತಾಲ್ಲೂಕು ಉದ್ಘಾಟನಾ ಕಾರ್ಯಕ್ರಮಕ್ಕೆ ಸೌಜನ್ಯಕ್ಕಾದರೂ ಹೋರಾಟ ಕೇಂದ್ರ ಸಮಿತಿಗೆ ಆಹ್ವಾನ ನೀಡಬೇಕಾಗಿತ್ತು. ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಆಹ್ವಾನ ಪತ್ರಿಕೆಯಲ್ಲಿ ಕೈಬಿಟ್ಟು ಅವಮಾನಿಸಲಾಗಿದೆ. ಇದು ಬಿಜೆಪಿ ಕಾರ್ಯಕ್ರಮದಂತೆ ನಡೆಸಲಾಗುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.

ಸಚಿವ ಅಶೋಕ್ ಅವರು ಚಂದ್ರಕಲಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಜಿಲ್ಲಾಡಳಿತದ ಕ್ರಮ ಖಂಡಿಸಿ, ಧಿಕ್ಕಾರ ಕೂಗಿದರು.

ಇದಕ್ಕೆ ವಿರುದ್ಧವಾಗಿ ಬಿಜೆಪಿ ಕಾರ್ಯಕರ್ತರೂ ಚಂದ್ರಕಲಾ, ಶಶಿಧರ್ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಪರಸ್ಪರ ಮಾತಿನ ಚಕಮುಕಿ ನಡೆಯಿತು. ಸಂಸದ ಪ್ರತಾಪ ಸಿಂಹ ವೇದಿಕೆಯಿಂದ ಕೆಳಗಿಳಿದು ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ಪೊಲೀಸರು, ಶಶಿಧರ್ ಹಾಗೂ ಇತರೆ ಹೋರಾಟಗಾರರನ್ನು ಹೊರ ಕಳುಹಿಸಿಲು ಯತ್ನಿಸಿದರು.

ಹೆಚ್ಚಿನ ಸಂಖ್ಯೆಯ ಪೊಲೀಸರು ಆಗಮಿಸಿ ಬಲವಂತವಾಗಿ ಶಶಿಧರ್ ಹಾಗೂ ಸಮಿತಿ ಮುಖಂಡರನ್ನು ಹೊರ ಹಾಕಿದರು. ಸಮಾರಂಭದ ಹೊರಗೆ ಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗೊಂದಲದಿಂದಾಗಿ ಸಚಿವ ಆರ್.ಅಶೋಕ್ ಅವರ ಭಾಷಣಕ್ಕೆ ಕೆಲಕಾಲ ಅಡ್ಡಿಯುಂಟಾಯಿತು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿ, ‘ತಾಲ್ಲೂಕು ರಚನೆಯ ಹೋರಾಟಕ್ಕೆ ಸಹಕಾರ ನೀಡಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭಯೂ ತಾಲ್ಲೂಕು ನಿಯೋಗವನ್ನು ಬೆಳಗಾವಿ ಹಾಗೂ ಬೆಂಗಳೂರಿಗೆ ಕೊರೆದೊಯ್ದು ಮುಖ್ಯಮಂತ್ರಿ ಭೇಟಿ ಮಾಡಿಸಿದ್ದೇನೆ. ಎಂ.ಆರ್.ಸೀತಾರಾಂ, ದಿನೇಶ್ ಗುಂಡೂರಾವ್ ಅವರು ಉಸ್ತುವಾರಿ ಸಚಿವರಾಗಿದ್ದಲೂ ತಾಲ್ಲೂಕು ನಿಯೋಗ ಹೋದಾಗ ಕುಶಾಲನಗರ ತಾಲ್ಲೂಕು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಶಶಿಧರ್ ಸತ್ಯಾಗ್ರಹ ನಡೆಸಿದಾಗ ಉಸ್ತುವಾರಿ ಸಚಿವರಾಗಿದ್ದ ಸೀತಾರಾಂ ಅವರು ತಿರುಗಿಯೂ ನೋಡಲಿಲ್ಲ’ ಎಂದರು.

‘ಆಗ ನಾನು ತಾಲ್ಲೂಕು ರಚನೆಗೆ ಬೆಂಬಲಿಸಿದ್ದೇನೆ. ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಕುಶಾಲನಗರ ನೂತನ ತಾಲ್ಲೂಕು ಆಗಿ ಆದೇಶ ಹೊರಡಿಸಿತು. ಅಲ್ಲದೇ ಈಗ ಅಧಿಕೃತವಾಗಿ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗಿದೆ. ಜೊತೆಗೆ ತಾಲ್ಲೂಕು ರಚನೆ ಕಾರ್ಯಕ್ರಮಕ್ಕೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ರಚನೆ ಇಷ್ಟವಿಲ್ಲದ ಕೆಲವರು ಕಾರ್ಯಕ್ರಮದಲ್ಲಿ ಗೊಂದಲ ಮೂಡಿಸಿದ್ದಾರೆ’ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು