ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಅಸ್ಸಾಂ ವ್ಯಾಪಾರಿಗಳಿಗೆ ನಿಷೇಧ

ನಾಪೋಕ್ಲು: ವ್ಯಾಪಾರಿಗಳಿಗೆ ಸ್ಥಳ ನೀಡಿದರೆ ಮಾಲೀಕರಿಗೂ ದಂಡ
Last Updated 8 ಅಕ್ಟೋಬರ್ 2021, 13:17 IST
ಅಕ್ಷರ ಗಾತ್ರ

ನಾಪೋಕ್ಲು: ಪ್ರತಿ ಸೋಮವಾರ ಇಲ್ಲಿ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಅಸ್ಸಾಂ ಕಾರ್ಮಿಕರು ವ್ಯಾಪಾರ ಮಾಡುವುದನ್ನು ಗ್ರಾಮಪಂಚಾಯಿತಿ ಟಾಸ್ಕ್ ಫೋರ್ಸ್ ಸಮಿತಿ ನಿಷೇಧಿಸಿ ತೀರ್ಮಾನ ಕೈಗೊಂಡಿದೆ.

ಒಂದು ವೇಳೆ ಅಸ್ಸಾಂ ಕಾರ್ಮಿಕರು ವ್ಯಾಪಾರ ನಡೆಸುವುದು ಕಂಡು ಬಂದರೆ ಅವರಿಗೆ ಆಶ್ರಯ ನೀಡಿದ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಮಿಕರು ತಿಂಡಿ ತಿನಿಸು ಮಾರುವುದು, ತರಕಾರಿ ಮಾರುವುದನ್ನು ನಿಷೇಧಿಸಲಾಗಿದೆ. ಅದರೊಂದಿಗೆ ಕಂಬಳಿ, ಬೆಡ್ ಶೀಟ್ ಸೇರಿದಂತೆ ಇತರ ವ್ಯಾಪಾರ ನಡೆಸುವ ಹೊರ ರಾಜ್ಯದ ಎಲ್ಲಾ ವ್ಯಾಪಾರಸ್ಥರು ತಮ್ಮ ದಾಖಲಾತಿಗಳನ್ನು ಪಂಚಾಯಿತಿಗೆ ನೀಡಬೇಕು.

ಮಾರುಕಟ್ಟೆ ಆವರಣದಲ್ಲಿ ಕಾಯಂ ಆಗಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ತಮ್ಮ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು. ಅದಕ್ಕೆ ಮಾರುಕಟ್ಟೆ ಸುಂಕ ಹರಾಜು ಪಡೆದವರು ಸಹಕಾರ ನೀಡಬೇಕು ಎಂದು ಸೂಚಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪೂರ್ಣ ವಿವರ ಮತ್ತು ದಾಖಲಾತಿಗಳನ್ನು ಕಡ್ಡಾಯವಾಗಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಗೆ ನೀಡಬೇಕು. ಇಲ್ಲವಾದರೆ ಮುಂದಿನ ಕಾನೂನು ಕ್ರಮಕ್ಕೆ ಬೆಳೆಗಾರರು ಹೊಣೆಯಾಗಬೇಕಾಗುತ್ತದೆ ಎಂದು ಸೂಚನೆ ನೀಡಲಾಯಿತು.

ಸಂತೆ ದಿನವಾದ ಸೋಮವಾರ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾರುಕಟ್ಟೆ ಆವರಣದಲ್ಲಿ ಅಸ್ಸಾಂ ವ್ಯಾಪಾರಸ್ಥರ ತಪಾಸಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್.ಪಾರ್ವತಿ ವಹಿಸಿದ್ದರು.ಉಪಾಧ್ಯಕ್ಷ ಮಹಮ್ಮದ್ ಖುರೇಸಿ, ಪಿಡಿಒ ಚೋಂದಕ್ಕಿ, ನಾಪೋಕ್ಲು ಹೋಬಳಿ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಪೊಲೀಸ್ ಇಲಾಖಾ ಸಿಬ್ಬಂದಿ, ಕಂದಾಯ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT