ಶನಿವಾರ, ಸೆಪ್ಟೆಂಬರ್ 18, 2021
28 °C
ವಿರಾಜಪೇಟೆಯಲ್ಲಿ ಪಟ್ಟಣ ಪಂಚಾಯಿತಿ ವಾರ್ಡ್ ನಲ್ಲಿ ವಿನಾಂಕ್,

ಉಪ ಚುನಾವಣೆ: ಬಿಜೆಪಿಗೆ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಪಟ್ಟಣ ಪಂಚಾಯಿತಿ 13ನೇ ವಾರ್ಡ್‌‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿನಾಂಕ್ ಕುಟ್ಟಪ್ಪ 60 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಾದಂಡ ತಿಮ್ಮಯ್ಯ 178 ಮತಗಳನ್ನು ಗಳಿಸಿದರೆ, ವಿನಾಂಕ್ 238 ಮತಗಳನ್ನು ಗಳಿಸಿ ವಿಜಯ ಸಾಧಿಸಿದರು. ಸೆ. 3ರಂದು ನಡೆದ ಉಪಚುನಾವಣೆಯಲ್ಲಿ ವಾರ್ಡ್‌‌ನಿಂದ 416 ಮತಗಳು ಚಲಾವಣೆಯಾಗಿದ್ದವು. ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದರಿಂದ ಈ ಇಬ್ಬರ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ಬಿಜೆಪಿಯಿಂದ ಆಯ್ಕೆಯಾಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಕೆ.ಬಿ.ಹರ್ಷವರ್ಧನ್ ಅವರ ಅಕಾಲಿಕ ನಿಧನದಿಂದ ಈ ಸ್ಥಾನ ತೆರವಾಗಿತ್ತು. ವಿನಾಂಕ್ ಕುಟ್ಟಪ್ಪ ಅವರ ಗೆಲುವಿನ ಮೂಲಕ ಬಿಜೆಪಿ ಪಟ್ಟಣದ ಮೀನುಪೇಟೆ ವ್ಯಾಪ್ತಿಯ 13ನೇ ವಾರ್ಡ್‌‌ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಇದೀಗ ಪಂಚಾಯಿತಿಯ ಚುನಾಯಿತ 18 ಸದಸ್ಯರಲ್ಲಿ ಬಿಜೆಪಿಯ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ 3 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಈ ಮೂಲಕ ಬಿಜೆಪಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದೆ. ವಿಜೇತ ಅಭ್ಯರ್ಥಿ ವಿನಾಂಕ್ ಕುಟ್ಟಪ್ಪ ಅವರು ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ ಅವರ ಪುತ್ರ.
ಚುನಾವಣಾಧಿಕಾರಿಯಾಗಿ ಪ್ರದೀಪ್ ಕುಮಾರ್ ಹಾಗೂ ಉಪಚುನಾವಣಾಧಿಕಾರಿಯಾಗಿ ಲಾಲ್ ಕುಮಾರ್ ಕಾರ್ಯನಿರ್ವಹಿಸಿದ್ದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮತಎಣಿಕೆ ಕಾರ್ಯ ನಡೆಯಿತು.

ಸಂಭ್ರಮಾಚರಣೆ: ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಮೂರ್ನಾಡು ರಸ್ತೆಯಿಂದ ಮೀನುಪೇಟೆಯವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭ ಗಡಿಯಾರ ಕಂಬದ ಬಳಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಈ ಸಂದರ್ಭ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ. ಸುಜಾ ಕುಶಾಲಪ್ಪ, ಜಿಲ್ಲಾ ಉಪಾಧ್ಯಕ್ಷ ಎ.ಮಹೇಶ್ ಗಣಪತಿ, ತಾಲ್ಲೂಕು ಅಧ್ಯಕ್ಷ ಎನ್.ಚಲನ್ ಕುಮಾರ್, ನಗರ ಘಟಕದ ಅಧ್ಯಕ್ಷ ಟಿ.ಪಿ.ಕೃಷ್ಣ, ಪಕ್ಷದ ಪ್ರಮುಖರಾದ ರೀನಾ ಪ್ರಕಾಶ್, ಪಿ.ರಘು ನಾಣಯ್ಯ, ಎಂ.ಶಶಾಂಕ್, ಬಿ.ಎಂ.ಗಣೇಶ್, ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.