ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲತೆ ಮೇಲಿನ ಆಸಕ್ತಿ ಅಪಾಯಕಾರಿ: ಬಿ.ಜಿ.ಅನಂತಶಯನ

‘ಅಗ್ನಿಯಾತ್ರೆ’ ಕಾದಂಬರಿ ಬಿಡುಗೊಡೆ ಮಾಡಿದ ಬಿ.ಜಿ.ಅನಂತಶಯನ ಹೇಳಿಕೆ
Last Updated 30 ಮಾರ್ಚ್ 2023, 5:48 IST
ಅಕ್ಷರ ಗಾತ್ರ

ಮಡಿಕೇರಿ: ಅಶ್ಲೀಲತೆಯ ಕಡೆಗಿನ ಆಕರ್ಷಣೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಬಹಳ ದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕೊಡವ ಮಕ್ಕಡ ಕೂಟದ 64ನೇ ಪುಸ್ತಕ ಹಾಗೂ ಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರ ‘ಅಗ್ನಿಯಾತ್ರೆ’ ಕಾದಂಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಾಸ್ತವತೆಯನ್ನು ಮರೆಮಾಚಿ ಭ್ರಮಾಲೋಕವನ್ನು ಸೃಷ್ಟಿಸುವ ಕಾಲ ಇದಾಗಿದೆ. ಗೌರವಯುತ ಸ್ಥಾನದಲ್ಲಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಸ್ತ್ರೀಯ ಬಗ್ಗೆ ಕಾಮನೆಗಳ ವಿಕೃತಿ ಮೆರೆಯುತ್ತಿದೆ. ಇತ್ತೀಚೆಗೆ ಮಕ್ಕಳ ಆಲೋಚನಾ ಲಹರಿ ಕೂಡ ಇದೇ ರೀತಿಯದ್ದಾಗಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ದೇವತೆಯ ಪ್ರತಿರೂಪವಾಗಿರುವ ಸ್ತ್ರೀಕುಲಕ್ಕೆ ತನ್ನದೇ ಆದ ಗೌರವವಿದೆ. ಆದರೆ, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಯುವತಿಯರೇ ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ, ಅಶ್ಲೀಲತೆಗೆ ಮಾರು ಹೋಗುತ್ತಿದ್ದಾರೆ ಎಂದು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎಂ.ಎ.ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ, ‘ಹೆಣ್ಣಿನ ದೌರ್ಬಳತೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಸಾಹಿತಿ ಹಾಗೂ ಮಕ್ಕಳ ತಜ್ಞ ವೈದ್ಯ ಮೇಜರ್ ಕುಶ್ವಂತ್ ಕೋಳಿಬೈಲು ಮಾತನಾಡಿ, ‘ಕೊಡಗಿನ ಗೌರಮ್ಮ, ತ್ರಿವೇಣಿ, ವೈದೇಹಿ ಸೇರಿದಂತೆ ಅನೇಕ ಮಹಿಳಾ ಕಥೆಗಾರ್ತಿಯರು ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಈರಂಡ ಹರಿಣಿ ವಿಜಯ್ ಅವರು ಭರವಸೆಯ ಬರಹಗಾರ್ತಿಯಾಗಿದ್ದಾರೆ’ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 63 ಕೃತಿಗಳನ್ನು ಕೂಟದ ಮೂಲಕ ಬಿಡುಗಡೆ ಮಾಡಲಾಗಿದೆ. 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. 3 ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಇದೀಗ 64 ನೇ ಪುಸ್ತಕವಾಗಿ ‘ಅಗ್ನಿಯಾತ್ರೆ’ ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಬರಹಗಾರ್ತಿ ಈರಂಡ ಹರಿಣಿ ವಿಜಯ್ ಮಾತನಾಡಿ, ‘ಸಣ್ಣ ಕಥೆಯಾಗಿ ಆರಂಭಗೊಂಡ ‘ಅಗ್ನಿಯಾತ್ರೆ’ ದೊಡ್ಡ ಕಾದಂಬರಿಯಾಯಿತು. ಇದನ್ನು ರಚಿಸಲು ಒಂದೂವರೆ ವರ್ಷ ಬೇಕಾಯಿತು. ಹೆಣ್ಣೊಬ್ಬಳು ತಾನು ಅನುಭವಿಸುವ ಸಂಕಷ್ಟದ ಅಗ್ನಿಯಿಂದ ಹೊರ ಬರಲು ನಡೆಸುವ ಹೋರಾಟವನ್ನು ಕಾದಂಬರಿಯಲ್ಲಿ ಕಟ್ಟಿಕೊಡಲಾಗಿದೆ’ ಎಂದು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೊಡವ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT