ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳಿತು ‘ತಾಳ್ಮೆರ ತಾವರೆ’

ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ 3ನೇ ಪುಸ್ತಕ ಲೋಕಾರ್ಪಣೆ
Published 28 ಮೇ 2024, 5:27 IST
Last Updated 28 ಮೇ 2024, 5:27 IST
ಅಕ್ಷರ ಗಾತ್ರ

ಮಡಿಕೇರಿ: ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ 3ನೇ ಪುಸ್ತಕ ‘ತಾಳ್ಮೆರ ತಾವರೆ’ ಸೋಮವಾರ ಲೋಕಾರ್ಪಣೆಗೊಂಡಿತು.

ಹುಟ್ಟಿನಿಂದಲೇ ವಿಶೇಷ ಚೇತನರಾಗಿರುವ ಅವರು ಶಾಲೆಗೆ ತೆರಳಿ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ. ಮನೆಯಲ್ಲೇ ಅಕ್ಷರಭ್ಯಾಸ ಮಾಡಿ ಕಥೆ, ಕವನ, ಚುಟುಕು ಬರೆಯುವ ಮೂಲಕ ಸಾಹಿತಿಯಾಗಿ ಗುರುತಿಸಿಕೊಂಡಿರುವುದು ವಿಶೇಷ.

ಕೊಡವ ಮಕ್ಕಡ ಕೂಟವು ತನ್ನ 91ನೇ ಪುಸ್ತಕವಾಗಿ ಇವರ ಮಹತ್ವದ ‘ತಾಳ್ಮೆರ ತಾವರೆ’ ಪುಸ್ತಕವನ್ನು ಹೊರತಂದಿತು. ಈ ಪುಸ್ತಕವು ಕಾವೇರಿ ಮಾತೆ, ಗಿಡ, ಪ್ರಕೃತಿ, ಪ್ರಾಣಿ, ಪಕ್ಷಿ, ಆಸೆ, ಭಾಷೆ, ಸುಖ, ದುಃಖ, ನೋವು, ನಲಿವು, ತಂದೆ, ತಾಯಿಗೆ ಸಂಬಂಧಿಸಿದಂತೆ 201 ಕವನಗಳನ್ನು ಹೊಂದಿದೆ. 

ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ, ‘ತಾಳ್ಮೆರ ತಾವರೆ’ ಪುಸ್ತಕದ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ವಿಶೇಷ ಚೇತನರಾಗಿ, ಮನೆಯಲ್ಲೇ ಅಕ್ಷರಾಭ್ಯಾಸ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು. 

ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಪುಸ್ತಕಗಳನ್ನು ಮೂಲೆ ಗುಂಪಾಗಿಸದೆ ಪ್ರತಿಯೊಬ್ಬರೂ ಓದಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಸಾಹಿತಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದರು.

ಸಾಹಿತಿ ಪಿ.ಎಸ್.ವೈಲೇಶ್ ಮಾತನಾಡಿ, ‘ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳೇ ಇಲ್ಲ ಎಂಬ ಕಾಲಘಟ್ಟವಿತ್ತು. ಇಂದು ಜಿಲ್ಲೆಯಲ್ಲಿ ಸಾಹಿತ್ಯದ ಸುವರ್ಣಕಾಲ ಆರಂಭವಾಗಿದೆ. ಆದರೆ, ನೈಜ ಸಾಧಕರು ಮೂಲೆ ಗುಂಪಾಗುತ್ತಿದ್ದು, ಎಲ್ಲರನ್ನೂ ಗುರುತಿಸುವ ಕೆಲಸ ಆಗಬೇಕು. ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾರ್ಥ ಸಾಧನೆ ಸೇರಿಕೊಂಡಿರುವುದು ಬೇಸರ ಸಂಗತಿ, ನಿಜವಾದ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ತಿಳಿಸಿದರು. 

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 91 ಕೃತಿಗಳನ್ನು ಬಿಡುಗಡೆ ಮಾಡಿದೆ. 100 ಬರಹಗಾರರ ಲೇಖನವನ್ನೊಳಗೊಂಡ 100ನೇ ಪುಸ್ತಕವನ್ನು ಹೊರ ತರಲು ಕೂಟ ಸಿದ್ಧತೆ ನಡೆಸಿದ್ದು, ಬರಹಗಾರರು ಬರಹ ಕಳುಹಿಸಬೇಕು’ ಎಂದು ಮನವಿ ಮಾಡಿದರು.

ಸಮಾಜ ಸೇವಕರಾದ ಕೂಪದಿರ ಗೊಂಬೆ ಉತ್ತಪ್ಪ ಹಾಗೂ ಕೂಪದಿರ ಜುನಾ ವಿಜಯ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT