ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ | ಐದು ವರ್ಷವಾದರೂ ಸಿಗದ ನಿವೇಶನ: ನದಿ ತೀರದ ಸಂತ್ರಸ್ತರ ಆತಂಕ

Published 1 ಜುಲೈ 2024, 7:23 IST
Last Updated 1 ಜುಲೈ 2024, 7:23 IST
ಅಕ್ಷರ ಗಾತ್ರ

ಸಿದ್ದಾಪುರ: ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡು 5 ವರ್ಷ ಕಳೆದರೂ, ಸಂತ್ರಸ್ತರಿಗೆ ಇನ್ನೂ ನಿವೇಶನ ಹಂಚಿಕೆಯಾಗದೆ ಅವರು ಸಂಕಷ್ಟದ ಸ್ಥಿತಿಯಲ್ಲಿ ದಿನ ದೂಡುವಂತಾಗಿದೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ, ಬರಡಿ ವ್ಯಾಪ್ತಿಯಲ್ಲಿ 2019ರ ಪ್ರವಾಹದಲ್ಲಿ ನೂರಾರು ಮನೆಗಳು ನೆಲಕ್ಕುರುಳಿದ್ದು, ನೂರಾರು ಮಂದಿ ಮನೆ ಕಳೆದುಕೊಂಡು, ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ಸಂತ್ರಸ್ತರು ನಿವೇಶನಕ್ಕಾಗಿ ಹೋರಾಟ ನಡೆಸಿದ್ದು, ಜಿಲ್ಲಾಡಳಿತ ಕುಶಾಲನಗರ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದ ಸರ್ವೆ ನಂಬರ್ 87/2 ರಲ್ಲಿ ಒತ್ತುವರಿಯಾಗಿದ್ದ ಒಟ್ಟು 8.22 ಎಕರೆ ಜಾಗ ತೆರವುಗೊಳಿಸಿ, ಸಂತ್ರಸ್ತರಿಗೆ ನಿವೇಶನ ನೀಡುವ ಉದ್ದೇಶಕ್ಕೆ ಕಾಯ್ದಿರಿಸಲಾಗಿತ್ತು. ತದನಂತರ, ಕಂದಾಯ ಇಲಾಖೆ ಜಾಗವನ್ನು ಆಶ್ರಯ ಯೋಜನೆ ಕಾರ್ಯನಿರ್ವಾಹಕ ಅಧಿಕಾರಿಯ ಹೆಸರಿಗೆ ವರ್ಗಾಯಿಸಿತು. ಜಾಗದಲ್ಲಿದ್ದ ಮರಗಳ ತೆರವಿಗಾಗಿ ಅರಣ್ಯ ಇಲಾಖೆ, ಸರ್ಕಾರದ ಅನುಮತಿಯನ್ನು ಪಡೆದು, ಮರ ತೆರವುಗೊಳಿಸಲು ಹಲವು ತಿಂಗಳು ತೆಗೆದುಕೊಂಡಿತ್ತು. ಜಾಗಕ್ಕೆ ತೆರಳುವಲ್ಲಿ ತೋಡು ಇದ್ದು, ಸೇತುವೆ ನಿರ್ಮಾಣಕ್ಕೆ ಹಲವು ತಿಂಗಳು ಬೇಕಾಯಿತು. ಇದೀಗ ಒತ್ತುವರಿ ತೆರವುಗೊಂಡಿರುವ ಜಾಗದಲ್ಲಿ ನಿವೇಶನಕ್ಕಾಗಿ ಜಾಗವನ್ನು ಅಳತೆ ಮಾಡಿ, ಕಲ್ಲು ಹಾಕಲಾಗಿದೆ.

ಸಮತಟ್ಟು ಮಾಡಿಲ್ಲ:

ಪ್ರವಾಹ ಸಂತ್ರಸ್ತರಿಗೆ ನೀಡಲು ಗುರುತಿಸಿರುವ ಜಾಗ ಎತ್ತರದ ಜಾಗವಾಗಿದ್ದು, ಇನ್ನೂ ಕೂಡ ಸಮತಟ್ಟು ಮಾಡಿಲ್ಲ. ಜಾಗಕ್ಕೆ ತೆರಳಲು ಬೇಕಾದ ರಸ್ತೆಯನ್ನು ಗುರುತಿಸಿದ್ದು, ಅಳತೆ ಮಾಡಲಾಗಿದೆ. ಆದರೆ, ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆಗೆದು ಸಮತಟ್ಟು ಮಾಡಬೇಕಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಕಾಮಗಾರಿ ಮಾಡಬೇಕಾಗಿದ್ದು, ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ.

ಸಿದ್ದಾಪುರ ಭಾಗದಲ್ಲಿ ಸಿಗದ ನಿವೇಶನ: ಸಂಕಷ್ಟದಲ್ಲಿ ಸಂತ್ರಸ್ತರು

2019ರಲ್ಲಿ ಸಿದ್ದಾಪುರ ಭಾಗದ ಕಕ್ಕಟ್ಟುಕಾಡು, ಗುಹ್ಯ, ಕರಡಿಗೋಡು ಹಾಗೂ ಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಸಿದ್ದಾಪುರ ವ್ಯಾಪ್ತಿಯ ಸುಮಾರು 120 ಮನೆಗಳು ನೆಲಸಮವಾಗಿತ್ತು. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಶಾಶ್ವತ ನಿವೇಶನಕ್ಕಾಗಿ ಹೋರಾಟ ನಡೆಸಿದ್ದರು. ಸಂತ್ರಸ್ತರಿಗೆ ಶಾಶ್ವತ ಸೂರು ನೀಡುವುದಾಗಿ ಜಿಲ್ಲಾಡಳಿತ ಭರವಸೆಯನ್ನು ನೀಡಿದ್ದು, 5 ವರ್ಷವಾದರೂ ಸಂತ್ರಸ್ತರು ಶಾಶ್ವತ ಸೂರಿಲ್ಲದೇ ನದಿ ದಡದ ಗುಡಿಸಲಿನಲ್ಲೇ ವಾಸವಾಗಿದ್ದಾರೆ.

ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸಾಕಷ್ಟು ಪೈಸಾರಿ ಜಾಗವಿದ್ದು, ಕಂದಾಯ ಇಲಾಖೆ ಹಲವೆಡೆ ಸರ್ವೆ ನಡೆಸಿತ್ತು. ಕೊಡಗು ಶ್ರೀರಂಗಪಟ್ಟಣ ಗ್ರಾಮದಲ್ಲಿ 5 ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದ ಜಿಲ್ಲಾಡಳಿತ, ಸಂತ್ರಸ್ತರಿಗೆ ಜಾಗ ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇರುವ ಕಾರಣ ಯೋಜನೆ ಸ್ಥಗಿತಗೊಂಡಿತ್ತು. ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಜಾಗ ನೀಡುವ ಬಗ್ಗೆ ಜಿಲ್ಲಾಡಳಿತ ತಿಳಿಸಿದ್ದು, ಸಿದ್ದಾಪುರ ವ್ಯಾಪ್ತಿಯಲ್ಲೇ ನಿವೇಶನ ನೀಡುವಂತೆ ಸಂತ್ರಸ್ಥರು ಮನವಿ ಮಾಡಿದ್ದರು. ಮಾಲ್ದಾರೆ ವ್ಯಾಪ್ತಿಯ ಆಸ್ತಾನ ಹಾಡಿಯಲ್ಲಿ ಸುಮಾರು 10 ಎಕರೆ ಖಾಸಗಿ ಜಾಗವನ್ನು ಖರೀದಿಸಿ ಸಂತ್ರಸ್ತರಿಗೆ ನಿವೇಶನ ನೀಡುವ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಕಾರಣಾಂತರಗಳಿಂದ ಈವರೆಗೂ ಜಾಗ ಖರೀದಿಸಿಲ್ಲ.

ಪ್ರವಾಹ ಎದುರಿಸಲು ಕಂದಾಯ ಇಲಾಖೆ ಸಜ್ಜು

ಈಗಾಗಲೇ ಜಿಲ್ಲಾದ್ಯಂತ ಮಳೆ ಹೆಚ್ಚಾಗಿದ್ದು, ಕಾವೇರಿ ನದಿ ನೀರು ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಉಂಟಾಗುತ್ತಿದ್ದು, ಕಂದಾಯ ಇಲಾಖೆ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದವಾಗಿದೆ. ಈಗಾಗಲೇ ನದಿ ದಡದಲ್ಲಿ ವಾಸವಾಗಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟೀಸ್ ನೀಡಲಾಗಿದೆ. ಪ್ರವಾಹ ಎದುರಾದರೇ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪ, ಸೆಂಟನರಿ ಚರ್ಚ್ ಹಾಲ್ ನಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ.

ನಿರ್ವಹಣೆ: ಕೆ.ಎಸ್.ಗಿರೀಶ.

ಭರವಸೆ ಹಾಗೆಯೇ ಉಳಿದಿದೆ

ಕಳೆದ ನಾಲ್ಕು ವರ್ಷಗಳಿಂದ ಮನೆ ಬಿದ್ದ ಜಾಗದಲ್ಲೇ ಗುಡಿಸಲು ನಿರ್ಮಿಸಿ ವಾಸವಾಗಿದ್ದೇವೆ. ಮತ್ತೆ ಮಳೆಗಾಲ ಆರಂಭವಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿದ ಭರವಸೆ ಹಾಗೇಯೇ ಉಳಿದಿದ್ದು, ನಾವು ಸಂಕಷ್ಟದಲ್ಲಿ ಬದುಕುವಂತಾಗಿದೆ. ಶೀಘ್ರದಲ್ಲಿ ಶಾಶ್ವತ ನಿವೇಶನ ಕಲ್ಪಿಸಬೇಕು.

- ಹಬೀಬ್, ಸಂತ್ರಸ್ತರು, ಬೆಟ್ಟದಕಾಡು.

ಹೋರಾಟ ತೀವ್ರಗೊಳಿಸಲಾಗುವುದು

ಸಂತ್ರಸ್ತರ ನಿವೇಶನಕ್ಕಾಗಿ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಹೋರಾಟದ ಬಳಿಕ ತಡವಾಗಿ ಎಚ್ಚೆತ್ತು ಸೇತುವೆ ನಿರ್ಮಿಸಿದ್ದಾರೆ. ಜಾಗ ಗುರುತಿಸಿ ವರ್ಷಗಳು ಕಳೆದರೂ, ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ನಿವೇಶನ ಹಂಚಿಕೆ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು.

-ಪಿ.ಆರ್.ಭರತ್, ಸಂಚಾಲಕರು, ಪ್ರವಾಹ ಸಂತ್ರಸ್ತರ ಹೋರಾಟ ಸಮಿತಿ.

ಪ್ರತಿ ಮಳೆಗಾಲದಲ್ಲೂ ಕಾಡುವ ಭಯ

2019ರ ಪ್ರವಾಹದಲ್ಲಿ ನನ್ನ ಮನೆ ನೆಲಕ್ಕೆ ಉರುಳಿದ್ದು, ಈಗಲೂ ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸ ಮಾಡಿಕೊಂಡಿದ್ದೇನೆ. ಪ್ರತಿ ಮಳೆಗಾಲದಲ್ಲೂ ಭಯದಿಂದ ದಿನ ದೂಡಬೇಕಾದ ಸ್ಥಿತಿ ಇದೆ. ಪುಟ್ಟ ಮಕ್ಕಳೊಂದಿಗೆ ಮಳೆಗಾಲದ ಪ್ರವಾಹವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ನಮ್ಮ ಸಂಕಷ್ಟವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಅರಿತು ಶಾಶ್ವತ ಸೂರು ಒದಗಿಸುವಂತಾಗಲಿ.

-ಹರೀಶ್.ಕೆ, ಸಂತ್ರಸ್ತ, ಕಕ್ಕಟ್ಟುಕಾಡು, ಗುಹ್ಯ

ಹೋರಾಟ ನಡೆಸಿದರೂ ನಿವೇಶನ ಸಿಕ್ಕಿಲ್ಲ

ಗುಹ್ಯ, ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹ ಎದುರಾದ ಸಂದರ್ಭದಲ್ಲಿ ಸಂತ್ರಸ್ತರು ಒಗ್ಗೂಡಿ 9 ದಿನ ಅಹೋರಾತ್ರಿ ಹೋರಾಟ ಮಾಡಿದ್ದೆವು. ಆದರೆ, ಈವರೆಗೂ ನಿವೇಶನ ದೊರಕಿಲ್ಲ. ಶಾಸಕ ಪೊನ್ನಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶಾಶ್ವತ ಸೂರು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಸಿಗುವ ಭರವಸೆ ಇದೆ.

-ಯಮುನಾ, ಸಂತ್ರಸ್ತರು, ಕರಡಿಗೋಡು.

ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ

ಈಗಾಗಲೇ ನದಿ ನೀರು ಏರಿಕೆಯಾಗಿದೆ. ನದಿ ದಡದ ನಿವಾಸಿಗಳಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗುತ್ತಿದೆ. ಪ್ರವಾಹ ಎದುರಾದರೇ ಪರಿಹಾರ ಕೇಂದ್ರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಸಿದ್ದಾಪುರ ಭಾಗದ ಸಂತ್ರಸ್ತರಿಗೆ ಜಾಗ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾಲ್ದಾರೆಯಲ್ಲಿ 10.50 ಎಕರೆ ಜಾಗ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

-ರಾಮಚಂದ್ರ, ತಹಶೀಲ್ದಾರರು, ವಿರಾಜಪೇಟೆ ತಾಲ್ಲೂಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT