ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಂಕಿತ ನಕ್ಸಲರಿಗಾಗಿ ಹುಡುಕಾಟ ಆರಂಭ

Published 19 ಮಾರ್ಚ್ 2024, 3:07 IST
Last Updated 19 ಮಾರ್ಚ್ 2024, 3:07 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಕಡಮಕಲ್‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ನಾಲ್ವರು ಹೆಚ್ಚು ದಿನಸಿ ಖರೀದಿಸಿರುವ ಮಾಹಿತಿ ಹಿನ್ನೆಲೆಯಲ್ಲಿ, ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಸೋಮವಾರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

‘ಮೊದಲಿಗೆ ಎಂಟು ಮಂದಿ ಎನ್ನುವ ಮಾಹಿತಿ ಇತ್ತು. ಆದರೆ, ತನಿಖೆ ನಡೆಸಿದಾಗ ಕಡಮಕಲ್‌ ಸಮೀಪದ ಕೂಜಿಮಲೆಯಲ್ಲಿ ಈಚೆಗಷ್ಟೇ ಆರಂಭವಾಗಿರುವ ಚಿಕ್ಕ ಅಂಗಡಿಯಲ್ಲಿ ನಾಲ್ವರು ತಮ್ಮನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ₹ 3,192ಕ್ಕೆ ದಿನಸಿ ಖರೀದಿಸಿ ತೆರಳಿದ್ದಾರೆ. ಅವರ ಚಲನವಲನವು ನಕ್ಸಲರನ್ನು ಹೋಲುತ್ತಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದರು. ಆದರೆ, ಸ್ಥಳದಲ್ಲಿ ಯಾವುದೇ ಕರಪತ್ರವಾಗಲಿ, ಬೆದರಿಕೆ ಹಾಕಿರುವ ಕುರಿತಾಗಲಿ ಸಾಕ್ಷ್ಯಗಳು ಲಭಿಸಿಲ್ಲ. ಹೀಗಿದ್ದರೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ‍್ತಿಯಲ್ಲಿ ಈಗಾಗಲೇ ನಕ್ಸಲ್ ನಿಗ್ರಹ ತಂಡ ಕಾರ್ಯಾಚರಣೆ ಆರಂಭಿಸಿದ್ದರೆ, ಭಾಗಮಂಡಲ ಭಾಗದಲ್ಲೂ ಪೊಲೀಸರು ಹುಡುಕಾಡುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ನಕ್ಸಲ್ ನಿಗ್ರಹ ಪಡೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ನಕ್ಸಲರು ಕಾಣಿಸಿಕೊಂಡಿರಲಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಕ್ಸಲರು ಬಂದಿರಬಹುದೆಂಬ ಶಂಕೆಯೂ ಇದೆ. ಇದು, ವಿಕ್ರಮ್‌ಗೌಡ ನೇತೃತ್ವದ ತಂಡವಾಗಿರಬಹುದೆಂಬ ಅನುಮಾನವಿದೆ. ಹೀಗಾಗಿ, ಕಡಮಕಲ್‌, ಭಾಗಮಂಡಲ, ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ, ಕೇರಳ ಗಡಿ ಭಾಗ ಶ್ರೀಮಂಗಲ, ಕುಟ್ಟ, ಮಾಕುಟ್ಟ ಭಾಗಗಳಲ್ಲೂ ನಕ್ಸಲ್ ನಿಗ್ರಹ ಪಡೆಯ ಯೋಧರು ನಿರಂತರವಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT