ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಉರಿಸುವಾಗಲೇ ಕಣ್ಣಲ್ಲಿ ನೀರು!

ಸೌದೆ ಒಲೆಯಲ್ಲಿ ಟೀ ತಯಾರಿಸಿ ವಿಭಿನ್ನ ಪ್ರತಿಭಟನೆ, ಪುಷ್ಪಾ ಅಮರನಾಥ್ ನೇತೃತ್ವ
Last Updated 18 ಫೆಬ್ರುವರಿ 2020, 16:30 IST
ಅಕ್ಷರ ಗಾತ್ರ

ಮಡಿಕೇರಿ: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಸೌದೆ ಒಲೆಯಲ್ಲಿ ಟೀ ತಯಾರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು, ಸಿಲಿಂಡರ್‌ ಇಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ, ಸೌದೆ ಒಲೆ ಉರಿಸಿ ಟೀ ಮಾಡುವುದರ ಮೂಲಕ ಅನಿಲ ದರ ಏರಿಕೆಯನ್ನು ಪ್ರತಿಭಟನಕಾರರು ಖಂಡಿಸಿದರು.

ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ‘ಈರುಳ್ಳಿ ಹಚ್ಚಿದರೆ ಸಾಮಾನ್ಯವಾಗಿ ಕಣ್ಣಲ್ಲಿ ನೀರು ಬರುತ್ತದೆ. ಆದರೆ, ಈಗ ಗ್ಯಾಸ್ ಉರಿಸುವಾಗಲೇ ಕಣ್ಣಲ್ಲಿ ನೀರು ಬರುವ ಪರಿಸ್ಥಿತಿ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆ ಅನಿಲ ಬೆಲೆಯನ್ನು ₹150 ಹೆಚ್ಚಿಸಲಾಗಿದೆ. ಅಲ್ಲದೆ, ತರಕಾರಿ, ಅಕ್ಕಿ, ಬೇಳೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಬಡವರ ಪರ ನ್ಯಾಯ ಕೇಳುವಂತಹ ಕೆಲಸವನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಮಾಡಲಾಗುತ್ತಿದೆ ಎಂದರು.

2014ರ ಚುನಾವಣೆ ಸಂದರ್ಭ ಪ್ರಧಾನಿ ಮೋದಿಯು ಜನತೆಗೆ, ನಮ್ಮ ಕೈಗೆ ಅಧಿಕಾರ ಕೊಟ್ಟರೆ ಅನಿಲ ಬೆಲೆಯನ್ನು ₹200 ಮಾಡುತ್ತೇವೆಂದು ಭರವಸೆ ನೀಡಿದ್ದರು. ಇವತ್ತು ಗ್ಯಾಸ್ ಬೆಲೆ ₹870 ಆಗಿದ್ದು, ಸಬ್ಸಿಡಿ ಕೊಡುತ್ತೇವೆಂದು ಮೊದಲ ಸಿಲಿಂಡರ್ ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. 2ನೇ ಸಿಲಿಂಡರ್‌ಗೆ ಮತ್ತೆ ಮೊದಲಿನಷ್ಟೆ ಹಣ ಪಾವತಿಸಬೇಕಾಗಿದೆ. ಅಲ್ಲದೆ, ಕಂತುಗಳ ಮೂಲಕ ಮೊದಲ ಸಿಲಿಂಡರ್ ಹಣವನ್ನೂ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೊಡಗಿನಲ್ಲಿ ಸೀಮೆಎಣ್ಣೆ ದೊರಕುತ್ತಿಲ್ಲ. ಅಡುಗೆಗೆ ಕಟ್ಟಿಗೆ ಬಳಸಲೂ ಸಾಧ್ಯವಾಗುತ್ತಿಲ್ಲ. ಕೊಡಗಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಸಂಸದ ಪ್ರತಾಪ ಸಿಂಹ ಕೊಡಗಿನತ್ತ ಆಗಮಿಸದೇ ಕಾಣೆಯಾಗಿದ್ದಾರೆ. ಕೂಡಲೇ ಅಡುಗೆ ಅನಿಲ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಬಡ ಜನರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದವರ ಸ್ಥಿತಿಯನ್ನು ದುಸ್ಥಿತಿಗೆ ತಂದಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಗ್ಯಾಸ್ ಬೆಲೆ ಕೇವಲ ₹450 ಇತ್ತು. ಅಲ್ಲದೆ, ಶೇ 50ರಷ್ಟು ಸಬ್ಸಿಡಿಯನ್ನೂ ನೀಡಲಾಗುತ್ತಿತ್ತು. ಡೀಸೆಲ್, ಪೆಟ್ರೋಲ್‌ಗಳಿಗೂ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈಗ ಎಲ್ಲಾ ಸಬ್ಸಿಡಿಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಅಲ್ಲದೆ, ಅಡುಗೆ ಅನಿಲಕ್ಕೆ ₹ 800ರಿಂದ ₹900ರವರೆಗೆ ದರ ನಿಗದಿ ಮಾಡಿರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದು ದೂರಿದರು.

ನಿರಂತರವಾಗಿ ಅಡುಗೆ ಅನಿಲ ಏರಿಕೆ ಮಾಡಿರುವುದರಿಂದ ಈಗ ಸೌದೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಕೇಂದ್ರ ಸರ್ಕಾರ ತಂದೊಡ್ಡಿದೆ. ದೇಶದಲ್ಲಿ ಒಂದು ಕಡೆ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ದಿನಬಳಕೆ ವಸ್ತುಗಳ ಏರಿಕೆ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನೀತಾ, ಪ್ರಮುಖರಾದ ಮೀನಾಸ್‌ ಪ್ರವೀಣ್, ಜುಲೇಕಾಬಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT