ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಜೀವಂತಿಕೆಯ ಸಂವಿಧಾನ; ನ್ಯಾ. ಎಂ.ಜಿ.ಉಮಾ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಡಿಕೇರಿ ವಕೀಲರ ಸಂಘದಿಂದ ಸಂವಿಧಾನ ದಿನಾಚರಣೆ
Published 27 ನವೆಂಬರ್ 2023, 6:08 IST
Last Updated 27 ನವೆಂಬರ್ 2023, 6:08 IST
ಅಕ್ಷರ ಗಾತ್ರ

ಮಡಿಕೇರಿ: ‘ನಮ್ಮದು ಜೀವಂತಿಕೆಯ ಸಂವಿಧಾನ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ.ಉಮಾ ಪ್ರತಿಪಾದಿಸಿದರು.

ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಡಿಕೇರಿ ವಕೀಲರ ಸಂಘವು ಭಾನುವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನ ಕೇವಲ ಲಿಖಿತ ದಾಖಲೆ ಅಲ್ಲ. ಅದೊಂದು ಜೀವಂತ ಸಂವಿಧಾನ. ಅದು ಎಲ್ಲರ ಆಶೋತ್ತರಗಳಿಗೆ ಸ್ಪಂದಿಸುತ್ತದೆ’ ಎಂದು ಹೇಳಿದರು. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಿರಿಯ ಚೇತನ. ಅವರನ್ನು ಎಲ್ಲರೂ ಸ್ಮರಿಸಬೇಕಾದ ಅಗತ್ಯ ಇದೆ ಎಂದರು.

ಹಿರಿಯ ವಕೀಲ ಕೆ.ಜಿ.ಬೋಪಯ್ಯ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಶ್ರೇಷ್ಠತೆ ಹಾಗೂ ಘಟನೆಯನ್ನು ಉಳಿಸೋಣ’ ಎಂದು ಕರೆ ನೀಡಿದರು.

ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲಲೇಬೇಕು. ಸಂವಿಧಾನದ ಭಾರತದಲ್ಲಿ ಎಲ್ಲರೂ ಸಮಾನರು ಎಂದು ಸಾರಲಾಗಿದೆ. ಇದೊಂದು ಜಗತ್ತಿನಲ್ಲೇ ಅತಿ ಶ್ರೇಷ್ಠವಾದ ಸಂವಿಧಾನ ಎಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಎಚ್.ಸಿ.ಶ್ಯಾಮ್ ಪ್ರಸಾದ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

1ನೇ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ.ಪ್ರಶಾಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಸಿವಿಲ್ ನ್ಯಾಯಾಧೀಶರಾದ ಎನ್.ಬಿ.ಜಯಲಕ್ಷಿ, ಪ್ರಿನ್ಸಿಪಾಲ್ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಮುನಿರತ್ಮಮ್ಮ, ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ನಾಗೇಶ್, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ವಕೀಲರ ಸಂಘದ ವಿರಾಜಪೇಟೆ ತಾಲ್ಲೂಕಿನ ಅಧ್ಯಕ್ಷ ಕೆ.ಜಿ.ಅಪ್ಪಣ್ಣ, ಕುಶಾಲನಗರ ತಾಲ್ಲೂಕಿನ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು, ಸೋಮವಾರಪೇಟೆ ತಾಲ್ಲೂಕಿನ ಅಧ್ಯಕ್ಷ ವಿಠಲ ಕಾಟ್ನಮನೆ, ಪೊನ್ನಂಪೇಟೆ ತಾಲ್ಲೂಕಿನ ಅಧ್ಯಕ್ಷ ಮುತ್ತಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್. ಖಜಾಂಜಿ ಜಿ.ಆರ್.ರವಿಶಂಕರ್, ಜಂಟಿಕಾರ್ಯದರ್ಶಿ ಪವನ್ ಪೆಮ್ಮಯ್ಯ, ಕ್ರೀಡಾಸಮಿತಿ ಸಂಚಾಲಕ ದುಗ್ಗಳ ಕಪಿಲ್ ಕುಮಾರ್ ಇದ್ದರು.

ವ್ಯಾಜ್ಯ, ವಾದ ಮರೆತು ಆಟವಾಡಿದ ವಕೀಲರು

ಇದೇ ಮೊದಲ ಬಾರಿಗೆ ಮಡಿಕೇರಿ ವಕೀಲರ ಸಂಘ ವತಿಯಿಂದ ನಡೆದ ಕೊಡಗು ಜಿಲ್ಲಾಮಟ್ಟದ ವಕೀಲರ ಕ್ರೀಡಾಕೂಟಕ್ಕೆ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಭಾನುವಾರ ಸಾಕ್ಷಿಯಾಯಿತು.

ವ್ಯಾಜ್ಯ, ವಾದಗಳನ್ನು ಮರೆತ ವಕೀಲರು ಕ್ರೀಡಾಂಗಣದಲ್ಲಿ ವಿವಿಧ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು. ದಿನವಿಡೀ ನಡೆದ ಆಟೋಟಗಳು ಇತರ ವಕೀಲರು ಮಾತ್ರವಲ್ಲ ಸಾರ್ವಜನಿಕರ ಮನಗಳನ್ನೂ ರಂಜಿಸಿತು.

ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಚ್.ಸಿ.ಶ್ಯಾಮ್ ಪ್ರಸಾದ್ ಮಾತನಾಡಿ, ‘ಎಲ್ಲ ಕ್ರೀಡೆಗಳಲ್ಲೂ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಆಟೋಟಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಸಹಕಾರಿ. ಶರೀರವನ್ನು ಸದಾ ಚಟುವಟಿಕೆಯಿಂದ‌ ಚಲನಶೀಲತೆಯಿಂದ ಇಡಲು ಕ್ರೀಡೆಗಳು ಪ್ರತಿಯೊಬ್ಬರಿಗೂ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಹಿರಿಯ ವಕೀಲರು, ಮಾಜಿ ಕಾನೂನು ಸಚಿವರೂ ಆದ ಎಂ.ಸಿ.ನಾಣಯ್ಯ ಮಾತನಾಡಿ, ‘ಆಟದ ಮೈದಾನದಿಂದ ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಒಗ್ಗಟ್ಟಿಗೂ ಇದು ಸಹಕಾರಿ. ಕ್ರೀಡೆಯಲ್ಲಿ ಆಡುವುದು ಮುಖ್ಯವೇ ಹೊರತು ಸೋಲು ಗೆಲವುಗಳು ಮುಖ್ಯವಲ್ಲ’ ಎಂದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ‘ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದಲ್ಲಿ ವಕೀಲರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದೆ. ವಕೀಲರ ಮಧ್ಯೆ ಉತ್ತಮ ಬಾಂಧ್ಯವ್ಯ ಏರ್ಪಡಿಸಬೇಕು ಎನ್ನುವುದು ಇದರ ಉದ್ದೇಶ’ ಎಂದು ಹೇಳಿದರು.

ರಾಷ್ಟ್ರೀಯ ಕ್ರೀಡಾಪಟುಗಳಾದ ಕೆಚ್ಚೆಟೀರ ರೇಷ್ಮಾ ಮತ್ತು ಎ.ಜಿ.ಪರ್ಲಿನ್ ಪೆಮ್ಮಯ್ಯ ಅವರಿಂದ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಜಿ. ಉಮಾ ಕ್ರೀಡಾಜ್ಯೋತಿ ಸ್ವೀಕರಿಸಿದರು

ನಂತರ ಪುರುಷರಿಗಾಗಿ ನಡೆದ ಕ್ರಿಕೆಟ್‌ನಲ್ಲಿ ಸೋಮವಾರಪೇಟೆ ವಕೀಲರ ಸಂಘ ಪ್ರಥಮ ಸ್ಥಾನ ಪಡೆದುಕೊಂಡರೆ, ಮಡಿಕೇರಿ ವಕೀಲರ ಸಂಘ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರಿಗಾಗಿ ನಡೆದ ಥ್ರೋಬಾಲ್‌ನಲ್ಲಿ ಮಡಿಕೇರಿ ವಕೀಲರ ಸಂಘ ಪ್ರಥಮ ಸ್ಥಾನ ಪಡೆದರೆ, ಸೋಮವಾರಪೇಟೆ ವಕೀಲರ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಜಿ. ಉಮಾ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು
ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಜಿ. ಉಮಾ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು

ಪುರುಷರು ಮತ್ತು ಮಹಿಳೆಯರಿಗಾಗಿ ನೂರು ಮೀಟರ್ ಓಟ, ಭಾರದ ಗುಂಡು ಎಸೆಯುವುದು ಸೇರಿದಂತೆ ಹಲವು ಕ್ರೀಡೆಗಳು ನಡೆದವು. ಮಕ್ಕಳಿಗಾಗಿಯೂ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT