ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಜಿಲ್ಲೆಯ ಕೃಷಿಕರ ಕೈಕಟ್ಟಿದ ಕೊರೊನಾ

ಕೊಡಗಿನ ಹಲವೆಡೆ ಉತ್ತಮ ಮಳೆಯಾದರೂ ರೈತರಿಗಿಲ್ಲ ಹರ್ಷ
Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೃಷಿ ಪ್ರಧಾನ ಜಿಲ್ಲೆ ಕೊಡಗು. ಕಾಫಿ, ಕಾಳು ಮೆಣಸು, ಬಾಳೆ, ಏಲಕ್ಕಿ ಜಿಲ್ಲೆಯ ಪ್ರಧಾನ ಬೆಳೆಗಳು. ಉತ್ತರ ಕೊಡಗಿನ ಕೆಲವು ಹೋಬಳಿಗಳಲ್ಲಿ ಶುಂಠಿ, ಹೂಕೋಸು, ಹಸಿರುಮೆಣಸಿನ ಕಾಯಿ, ಮೂಲಂಗಿ ಸೇರಿದಂತೆ ವಿವಿಧ ಬಗೆಯ ತರಕಾರಿಯನ್ನೂ ಬೆಳೆಯಲಾಗುತ್ತಿದೆ. ಭತ್ತದ ಬೆಳೆಯೂ ಪ್ರಧಾನ ಕೃಷಿ. ಪುಟ್ಟ ಜಿಲ್ಲೆಯಾದರೂ ವಿಭಿನ್ನ ಬೆಳೆಯಿರುವ ಕಾರಣಕ್ಕೆ ಇಡೀ ವರ್ಷ ರೈತರಿಗೆ ಕೆಲಸ ಇರುತ್ತದೆ. ಆದರೆ, ಕೊರೊನಾ ಅಟ್ಟಹಾಸ ಮಾತ್ರ ಜಿಲ್ಲೆಯ ರೈತರ ಕೈಯನ್ನೂ ಕಟ್ಟಿಹಾಕಿದೆ. ಭವಿಷ್ಯದ ಬಗ್ಗೆ ರೈತರನ್ನು ಚಿಂತಿಸುವಂತೆ ಮಾಡಿದೆ.

ಮರೆಯಾದ ಹರ್ಷ:ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಮಳೆಯಾಶ್ರಿತ ತೋಟಗಳಲ್ಲಿ ಈಗ ಹೂವು ಅರಳಿದೆ. ಆ ತೋಟಗಳಲ್ಲಿ ಇನ್ನೊಂದು ವಾರದಲ್ಲಿ ಕಾರ್ಮಿಕರಿಗೆ ಕೈತುಂಬ ಕೆಲಸ ಸಿಗುತ್ತಿತ್ತು. ನೀರಿನ ಮೂಲವಿದ್ದ ಬೆಳೆಗಾರರು ಮಾರ್ಚ್‌ನಲ್ಲಿ ಕಾಫಿ ಹೂವು ಅರಳಿಸಿದ್ದರು. ಕೊರೊನಾ, ಕೃಷಿ ಕೆಲಸಕ್ಕೂ ಬ್ರೇಕ್‌ ಹಾಕಿದೆ. ಪ್ರತಿನಿತ್ಯ ತೋಟಕ್ಕೆ ತೆರಳಿ ಸುತ್ತಾಟ ನಡೆಸುತ್ತಿದ್ದ ಬೆಳೆಗಾರರು ಇದೀಗ ಮನೆ ಸೇರಿದ್ದಾರೆ. ಯಾರಲ್ಲೂ ಕೆಲಸ ಮಾಡುವ ಉತ್ಸಾಹ ಕಂಡುಬರುತ್ತಿಲ್ಲ.

ನಾಪೋಕ್ಲು, ಚೇರಂಬಾಣೆ, ಭಾಗಮಂಡಲ, ಭೇತ್ರಿ, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ ಭಾಗದಲ್ಲಿ ಉತ್ತಮ ಮಳೆಯಾಗಿದೆ. ತೋಟ ಹಾಗೂ ಗದ್ದೆಗಳಲ್ಲಿ ಒಂದಿಲ್ಲ ಒಂದು ಕೆಲಸಕ್ಕೆ ರೈತರು ಮುಂದಾಗುತ್ತಿದ್ದರು. ಈ ವೇಳೆಗೆ ಶುಂಠಿ ಕೃಷಿಯನ್ನೂ ಆರಂಭಿಸುತ್ತಿದ್ದರು. ಕೆಲಸಕ್ಕೆ ವಿರಾಮ ಬಿದ್ದಿದೆ.

ಕಾರ್ಮಿಕರೂ ಇಲ್ಲ:ಕೊಡಗಿನ ಕಾಫಿ ಎಸ್ಟೇಟ್‌ಗಳು ಕೆಲಸಕ್ಕೆ ಉತ್ತರ ಕರ್ನಾಟಕ ಭಾಗದ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನೇ ಹೆಚ್ಚಾಗಿ ಅವಲಂಬಿಸಿದ್ದವು. ಕಾಫಿ ಕೊಯ್ಲಿಗೆ ಬಂದ ಕಾರ್ಮಿಕರು ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲೂ ತೋಟದ ಕೆಲಸ ಪೂರ್ಣಗೊಳಿಸಿ ತಮ್ಮ ಊರುಗಳತ್ತ ತೆರಳುತ್ತಿದ್ದರು. ದೊಡ್ಡ ದೊಡ್ಡ ಎಸ್ಟೇಟ್‌ಗಳಲ್ಲಿ ಮಾತ್ರವೇ ಲೈನ್‌ಮನೆ ವ್ಯವಸ್ಥೆಯಿದ್ದು, ಅಲ್ಲಿ ಕಾರ್ಮಿಕರು ವರ್ಷವಿಡೀ ಇರುತ್ತಾರೆ. ಆದರೆ, ಕೊರೊನಾ ಕರಿನೆರಳು ಇತರೆ ಕಾರ್ಮಿಕರನ್ನು ವಾಪಸ್‌ ಹೋಗುವಂತೆ ಮಾಡಿದೆ. ಕೊರೊನಾ ಹಾವಳಿ ಮುಗಿದ ಮೇಲೂ ಅವರೆಲ್ಲರೂ ಕೆಲಸಕ್ಕೆ ವಾಪಸ್‌ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ.

ರಫ್ತು ಸ್ಥಗಿತ!:ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನ ಕಾಫಿ, ಶುಂಠಿ ಹಾಗೂ ಕಾಳು ಮೆಣಸು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೂ ಸ್ಥಳೀಯ ಖರೀದಿದಾರರು ಮಾತ್ರ ಉತ್ಸಾಹ ತೋರುತ್ತಿಲ್ಲ. ಕಾಫಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಯಿದ್ದು ರಫ್ತು ಹೆಚ್ಚಾದರೆ ಮಾತ್ರ ಬೇಡಿಕೆ ಬರುತ್ತದೆ. ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಅಟ್ಟಹಾಸಕ್ಕೆ ಸಿಲುಕಿದ್ದು ಮಾರುಕಟ್ಟೆ ಬಿದ್ದು ಹೋಗಿದೆ.

ರಾಜ್ಯದ ಕ್ಯೂರಿಂಗ್‌ಗಳಲ್ಲೂ ಸಾಕಷ್ಟು ಪ್ರಮಾಣದ ಕಾಫಿ ದಾಸ್ತಾನಿದ್ದು ಅದರ ರಫ್ತಿಗೂ ಅನುಮತಿ ಸಿಗುತ್ತಿಲ್ಲ. ಕುಶಾಲನಗರದ ಕ್ಯೂರಿಂಗ್‌ಗಳಲ್ಲೂ ಸಾಕಷ್ಟು ದಾಸ್ತಾನಿದೆ. ಹೀಗಾಗಿ, ಹೊಸ ಉತ್ಪನ್ನ ಖರೀದಿಗೂ ಖರೀದಿದಾರರು ಮುಂದಾಗುತ್ತಿಲ್ಲ. ಕಾಳು ಮೆಣಸಿನದ್ದು ಇದೇ ಪರಿಸ್ಥಿತಿ. ಕಾಳು ಮೆಣಸು ಕೊಯ್ಲು ಮಾಡಿ ಮಾರಾಟಕ್ಕೆ ರೈತರು ಸಿದ್ಧತೆಯಲ್ಲಿದ್ದರು. ಅಷ್ಟರಲ್ಲಿ ಕೊರೊನಾದಿಂದ ಮಾರಾಟ ಸ್ತಬ್ಧವಾಗಿದೆ.

ಜಿಲ್ಲಾ ಸಹಕಾರ ಬ್ಯಾಂಕ್‌, ಜಿಲ್ಲೆಯ ವಿವಿಧ ಬೆಳೆಗಾರರ ಸಂಘಕ್ಕೆ ₹ 1 ಕೋಟಿ ಸಾಲ ನೀಡಲಿದೆ. ಅಲ್ಲಿಗೆ ರೈತರು ಕಾಫಿ ದಾಸ್ತಾನು ಮಾಡಿದರೆ ಅವರು ಮುಂಗಡವಾಗಿ ಹಣ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದರು. ಆ ವ್ಯವಸ್ಥೆ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ, ರೈತರ ಮನೆಗಳಲ್ಲಿಯೇ ಕಾಫಿ ಉಳಿದಿದೆ.

ಕೇರಳ ಸೇರಿದಂತೆ ಅಂತರ ರಾಜ್ಯ ಗಡಿಗಳು ಬಂದ್ ಆಗಿದ್ದು, ಜಿಲ್ಲೆಯಲ್ಲಿ ಬೆಳೆದಿದ್ದ ಶುಂಠಿ ಖರೀದಿಸಲು ಹೊರ ರಾಜ್ಯದ ವ್ಯಾಪಾರಿಗಳು ಬರುತ್ತಿಲ್ಲ. ಉತ್ತರ ಕೊಡಗು ಭಾಗದಲ್ಲಿ ಬೆಳೆದಿದ್ದ ಎಲೆಕೋಸು, ಚೆಂಡು ಹೂವು ಬೇಡಿಕೆಯಿಲ್ಲದೇ ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ. ಪಿರಿಯಾಪಟ್ಟಣ ರಸ್ತೆಯೂ ಬಂದ್‌ ಆಗಿದ್ದು ವಿರಾಜಪೇಟೆಯಿಂದ ಯಾವುದೇ ಕೃಷಿ ಸಾಮಗ್ರಿಯನ್ನು ಮೈಸೂರಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಬಾಳೆ ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಜೇನು ಕೃಷಿಯ ಕಥೆ– ವ್ಯಥೆ:ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಸೋಮವಾರಪೇಟೆಯ ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೇನು ಕೃಷಿಯನ್ನು ರೈತರು ಅವಲಂಬಿಸಿದ್ದಾರೆ. ಪುಷ್ಪಗಿರಿ ವ್ಯಾಪ್ತಿಯ ಇನಕನಹಳ್ಳಿ, ಬಾಚಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ಹಂಚಿನಳ್ಳಿ, ಕೊತ್ತನಳ್ಳಿ, ಬೀದಳ್ಳಿ, ಮಲ್ಲಳ್ಳಿ, ಜಕ್ಕನಳ್ಳಿ ಮತ್ತಿತರ ಗ್ರಾಮಗಳಲ್ಲೂ ಜೇನು ಕೃಷಿಯಿದೆ. ರೋಗ ಬಾಧೆಯ ನಡುವೆಯೂ ರೈತರು ಜೇನು ಕೃಷಿ ಬಿಟ್ಟಿರಲಿಲ್ಲ. ಆದರೆ, ಕೊರೊನಾ ಅಟ್ಟಹಾಸ ಜೇನು ಕೃಷಿಯಿಂದಲೂ ವಿಮುಖರಾಗುವಂತೆ ಮಾಡಿದೆ.

ಸವಿ ಜೇನಿಗೂ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊಡಗಿನಲ್ಲಿ ಒಂದು ತಿಂಗಳಿಂದ ಪ್ರವಾಸೋದ್ಯಮ ಬಂದ್‌ ಆಗಿದ್ದು ಪ್ರವಾಸಿಗರು ಬರುತ್ತಿಲ್ಲ. ಬಾಟಲಿಗಳಿಗೆ ತುಂಬಿ ಮಾರಾಟ ಮಾಡುತ್ತಿದ್ದ ಜೇನಿಗೂ ಬೇಡಿಕೆ ಇಲ್ಲವಾಗಿದೆ.

ಅಕ್ಕಿಗೆ ಸಂಕಷ್ಟ: ಭತ್ತ ಕೃಷಿಯತ್ತ ಚಿತ್ತ
ಮಡಿಕೇರಿ:
ಕೊಡಗಿನಲ್ಲಿ ಭತ್ತದ ಕೃಷಿಯನ್ನೇ ಬಹುತೇಕರು ಕೈಬಿಟ್ಟಿದ್ದರು. ಹಲವರು ಗದ್ದೆಗಳನ್ನೂ ಮಾರಾಟ ಮಾಡಿದ್ದರು. ಗದ್ದೆಗಳಲ್ಲೂ ರೆಸಾರ್ಟ್‌, ಹೋಂ ಸ್ಟೇ ನಿರ್ಮಾಣ ಮಾಡಲಾಗುತ್ತಿತ್ತು. 2018, 2019ರಲ್ಲಿ ಪ್ರಾಕೃತಿಕ ವಿಕೋಪ, 2020ರಲ್ಲಿ ಕೊರೊನಾ ಸಂಕಷ್ಟದಿಂದ ಪ್ರವಾಸೋದ್ಯಕ್ಕೆ ದೊಡ್ಡ ಆಘಾತ ಉಂಟಾಗಿದೆ. ಪ್ರವಾಸೋದ್ಯಮ ನೆಲಕಚ್ಚಿದೆ. ಸದ್ಯಕ್ಕೆ ಪ್ರವಾಸೋದ್ಯಮ ಕ್ಷೇತ್ರವು ಚೇತರಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ಅವಲಂಬಿತರು.

‘ಕೆಲವು ವರ್ಷಗಳಿಂದ ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂಬ ಕಾರಣಕ್ಕೆ ನಾಟಿಯನ್ನೇ ಮಾಡುತ್ತಿರಲಿಲ್ಲ. ಸರ್ಕಾರದಿಂದಲೂ ಪ್ರೋತ್ಸಾಹಧನವೂ ಸಿಗುತ್ತಿರಲಿಲ್ಲ. ಇನ್ಮುಂದೆ ಮನೆಯ ಬಳಕೆಗೆ ಭತ್ತ ಕೃಷಿ ಮಾಡಲು ನಿರ್ಧರಿಸಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಬಂದರೂ ಮುಂದಿನ ವರ್ಷ ಅಕ್ಕಿ ಬೆಲೆ ದುಬಾರಿ ಆಗಲೂಬಹುದು. ಹೀಗಾಗಿ, ನಾವೇ ಭತ್ತ ಬೆಳೆಯಬೇಕೆಂದು ನಿರ್ಧರಿಸಿದ್ದೇವೆ’ ಎಂದು ಬೆಟ್ಟಗೇರಿ ಪೂವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT