ಶುಕ್ರವಾರ, ಜೂನ್ 25, 2021
21 °C
ಕೂತಿ ನಾಡು ವ್ಯಾಪ್ತಿಯ ಗ್ರಾಮಸ್ಥರ ಆಚರಣೆ

ಸೋಮವಾರಪೇಟೆ: ಸುಗ್ಗಿ ಹಬ್ಬಕ್ಕೂ ಕೋವಿಡ್‌ ಅಡ್ಡಿ

ಲೋಕೇಶ್. ಡಿ.ಪಿ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಕ್ಕಲುತನ ಮಾಡುವ ಗ್ರಾಮೀಣ ಜನರ ಸುಗ್ಗಿ ಹಬ್ಬದ ಆಚರಣೆಗೆ ಈ ಬಾರಿಯೂ ಕೋವಿಡ್ ಅಡ್ಡಿಯುಂಟು ಮಾಡಿದೆ.

ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಲ್ಲಿ ಸುಗ್ಗಿಹಬ್ಬ ಪ್ರಮುಖ ಆಚರಣೆಯಾಗಿದೆ. ಈ ವ್ಯಾಪ್ತಿಯ ಗ್ರಾಮಗಳ ದೇವರಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟು ಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಮಂದಿಯೂ ಬಂದು ಸೇರುತ್ತಾರೆ.

ನಗರಳ್ಳಿ ಸುಗ್ಗಿ: ಸೋಮವಾರಪೇಟೆ ಸಮೀಪದ ಕೂತಿನಾಡು ಸುಗ್ಗಿ ಎಂದೇ ಹೆಸರುವಾಸಿಯಾಗಿದೆ.

ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಸೇರಿದಂತೆ ಪಕ್ಕದ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸುತ್ತಿದ್ದರು.

ತೋಳೂರು ಶೆಟ್ಟಳ್ಳಿ ಸುಗ್ಗಿ: ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ಸುಗ್ಗಿ ಏಪ್ರಿಲ್ ಕೊನೆಯ ವಾರ ನಡೆಯುತ್ತಿತ್ತು. ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಪ್ರಾರಂಭವಾಗಿ ಗುಮ್ಮನ ಮರಿ ಪೂಜೆ, ಗ್ರಾಮದಲ್ಲಿ ಸಾಮೂಹಿಕ ಭೋಜನ ನಡೆಯುತ್ತಿತ್ತು. ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ಮೊದಲ ಬೇಟೆ, ಊರು ಸುಗ್ಗಿ, ದೇವರ ಗಂಗಾಸ್ನಾನ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿತ್ತು. ಸುಗ್ಗಿ ಉತ್ಸವದ ಕೊನೆಯ ದಿನ ತೆಂಗಿನ ಕಾಯಿಯನ್ನು ಕಲ್ಲಿಗೆ ಒಡೆಯುವುದು, ಸುಗ್ಗಿ ಕುಣಿತ ಹಾಗೂ ದೇವರ ನೃತ್ಯ ವಿಶೇಷವಾಗಿರುತ್ತದೆ.

ಹಲವಾರು ಕಟ್ಟುಪಾಡುಗಳೊಂದಿಗೆ ಪ್ರಾರಂಭವಾಗುವ ಸುಗ್ಗಿ ಆಚರಿಸಲು ಸುಮಾರು ಒಂದು ತಿಂಗಳ ಕಾಲ ಗ್ರಾಮಸ್ಥರು ಸಡಗರ ಸಂಭ್ರಮದಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ, ಕೊರೊನಾ ಲಾಕ್‌ಡೌನ್ ಎದುರಾಗಿರುವುದರಿಂದ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.