ಗುರುವಾರ , ಜೂನ್ 17, 2021
23 °C
‘ಮಾಧ್ಯಮ ಸ್ಪಂದನ‘ ತಂಡದಿಂದಲೇ ಅಂತಿಮ ವಿಧಿವಿಧಾನ

ಕೋವಿಡ್‌ ವೃದ್ಧ ಸಾವು: ಪತ್ರಕರ್ತರಿಂದ ಅಂತ್ಯಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ (ಕೊಡಗು): ಸಮೀಪದ ಬಲಮುರಿ ಗ್ರಾಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಹಿಂದೇಟು ಹಾಕಿದ್ದರಿಂದ, ಸ್ಥಳೀಯ ಪತ್ರಕರ್ತರ ತಂಡವೊಂದು ಮೃತರ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ತೋರಿದೆ.

ಸದಾ ಜನರ ಸಂಕಷ್ಟವನ್ನು ಪತ್ರಿಕೆ ಹಾಗೂ ದೃಶ್ಯ ವಾಹಿನಿಗಳಿಗೆ ವರದಿ ಮಾಡುತ್ತಿದ್ದ ಪತ್ರಕರ್ತರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿ ಸೇವಾ ಕಾರ್ಯ ಮಾಡಿದೆ.  

ಮೂರ್ನಾಡು ಸಮೀಪದ ಬಲಮುರಿ ಗ್ರಾಮದ 85 ವರ್ಷದ ವೃದ್ಧರೊಬ್ಬರು ಕೋವಿಡ್‌ನಿಂದ ನಿಧನರಾಗಿದ್ದರು. ಮನೆಯವರಿಗೂ ಕೋವಿಡ್‌ ಪಾಸಿಟಿವ್ ಆಗಿದ್ದು, ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಹಿಂದೇಟು ಹಾಕಿದ್ದರು.

ಬಳಿಕ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ನೇತೃತ್ವದ ‘ಮಾಧ್ಯಮ ಸ್ಪಂದನ’ ಎಂಬ ಪತ್ರಕರ್ತರ ತಂಡಕ್ಕೆ ಮಾಹಿತಿ ನೀಡಿದ್ದರು. ಬಳಿಕ ವಿಷಯ ತಿಳಿದ ಪತ್ರಕರ್ತರಾದ ಪಪ್ಪು ತಿಮ್ಮಯ್ಯ, ರೆಜಿತ್ ಕುಮಾರ್ ಗುಹ್ಯ ನೇತೃತ್ವದ ‘ಮಾಧ್ಯಮ ಸ್ಪಂದನ‘ ತಂಡವು ಬಲಮುರಿ ಗ್ರಾಮದ ಮೃತರ ಮನೆಗೆ ತೆರಳಿ, ಪಿ.ಪಿ.ಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸಿದೆ. ಅಂತ್ಯಕ್ರಿಯೆ ತಂಡದಲ್ಲಿ ಸ್ಥಳೀಯರಾದ ಪ್ರವೀಣ್, ಅನೀಶ್, ಶರಿನ್ ಇದ್ದರು.

ಮೃತ ವ್ಯಕ್ತಿಯ ಮಗ ಕೂಡ ಪಿ.ಪಿ.ಇ ಕಿಟ್ ಧರಿಸಿ, ಕೊಡವ‌ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಕೋವಿಡ್ ಪಾಸಿಟಿವ್ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಇದರ ಜತೆಗೆ, ಮಾಧ್ಯಮ ಸ್ಪಂದನ ತಂಡವು ಜಿಲ್ಲೆಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ಜಿಲ್ಲೆಯ ಪತ್ರಕರ್ತರನ್ನು ಒಳಗೊಂಡಂತೆ ರಚನೆಯಾದ ಈ ತಂಡವು ಹಲವು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದ ವೇಳೆಯೂ ಹಲವು ಜನರ ಸಂಕಷ್ಟಕ್ಕೆ ಮಿಡಿದಿದೆ. ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲೂ ಕೋವಿಡ್‌ ರೋಗಿಗಳಿಗೆ ಹಾಗೂ ಕೋವಿಡ್‌ತೇರ ರೋಗಿಗಳಿಗೆ ನೆರವಾಗಿದೆ ಎಂದು ತಂಡದ ಸದಸ್ಯರು ಹೇಳಿದ್ದಾರೆ. 

ಬಟ್ಟೆ ತಲುಪಿಸಿದ ತಂಡ:

ತವರು ಮನೆಯಿಂದ ಗರ್ಭಿಣಿಗೆ ತಲುಪಿಸಬೇಕಾಗಿದ್ದ ಬಟ್ಟೆಗಳನ್ನು ಮಾಧ್ಯಮ ಸ್ಪಂದನ ತಂಡದ ಸದಸ್ಯರು ಮಂಗಳವಾರ ತಲುಪಿಸಿದ್ದಾರೆ. ಮನೆಯಲ್ಲಿ ಪತ್ನಿಯೊಂದಿಗೆ ನಾನೊಬ್ಬನೆ ಇದ್ದು, ತವರು ಮನೆಯಿಂದ ಬಟ್ಟೆ ತರಲು ಸಾಧ್ಯವಾಗುತ್ತಿಲ್ಲ ಎಂದು
ಮಾದಾಪುರದ ದೀಪಕ್, ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಗಮನಕ್ಕೆ ತಂದಿದ್ದರು.

ದೇವಣಗೆರೆ ಗ್ರಾಮದಿಂದ ವಿರಾಜಪೇಟೆಗೆ ತಂದ ಬಟ್ಟೆ ಬ್ಯಾಗ್ ಅನ್ನು ಮಾಧ್ಯಮ ಸ್ಪಂದನ ತಂಡದ ಡಿ.ಪಿ.ರಾಜೇಶ್ ತಮ್ಮ ಕಾರಿನಲ್ಲಿ ವಿರಾಜಪೇಟೆಯಿಂದ ಮಾದಾಪುರಕ್ಕೆ ತೆಗೆದುಕೊಂಡು ಹೋಗಿ ಖುದ್ದು ತಲುಪಿಸಿ, ಲಾಕ್‌ಡೌನ್‌ ಅವಧಿಯಲ್ಲಿ ನೆರವಾಗಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು