ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ವಲಯಗಳಾಗಿ ವಿಂಗಡಣೆ

ಮುಂಜಾಗ್ರತಾ ಕ್ರಮ: ನಗರಸಭೆಯಲ್ಲಿ ಮಹತ್ವದ ನಿರ್ಧಾರ
Last Updated 1 ಮಾರ್ಚ್ 2018, 12:06 IST
ಅಕ್ಷರ ಗಾತ್ರ

ಉಡುಪಿ: ನಗರಸಭೆ ವಾರ್ಡ್‌ಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಇದೇ ಶುಕ್ರವಾರದಿಂದ ಇದು ಜಾರಿಗೆ ಬರಲಿದೆ.

ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆ ಬಗ್ಗೆ ವಿರೋಧ ಪಕ್ಷದ ಯಶ್‌ಪಾಲ್ ಸುವರ್ಣ ಪ್ರಶ್ನೆ ಕೇಳಿದರು. ಜನರಿಗೆ ಸಮಸ್ಯೆ ಆಗದಂತೆ ಸಮಪರ್ಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ರಾಘವೇಂದ್ರ, ಈ ಬಾರಿ ನೀರಿನ ಅಭಾವ ಆಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರವನ್ನು 3 ವಲಯವಾಗಿ ವಿಂಗಡಿಸಿ ನೀರು ನೀಡಲಾಗುವುದು. ಪೂರೈಕೆಯ ಅವಧಿ ಕಡಿಮೆಯಾದರೂ ಒತ್ತಡ  ಕಡಿಮೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 1 ಮೀಟರ್‌ ನೀರಿನ ಸಂಗ್ರಹ ಪ್ರಮಾಣ ಹೆಚ್ಚಾಗಿದೆ. ಸದ್ಯ ಬಜೆ ಜಲಾಶಯದಲ್ಲಿ 5.22 ಮೀಟರ್ ಸಂಗ್ರಹವಿದೆ. ಶಿರೂರಿನಲ್ಲಿಯೂ ಮರಳಿನ ಚೀಲದ ತಡೆಗೋಡೆ ನಿರ್ಮಾಣ ಮಾಡಿ ನೀರಿನ ಸಂಗ್ರಹ ಹೆಚ್ಚಿಸಲಾಗಿದೆ. ಈ ಬಾರಿ ಟ್ಯಾಂಕರ್ ನೀರು ಪೂರೈಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಲೇ ಬಾರದು ಎಂಬುದು ನಮ್ಮ ಗುರಿಯಾಗಿದೆ. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ವಾರಾಹಿ ಯೋಜನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಿ. ಮಂಜುನಾಥಯ್ಯ, ಭರತ್ಕಲ್‌ನಿಂದ ಉಡುಪಿಗೆ ವಾರಾಹಿ ನೀರು ತರಲಾಗುವುದು. ಇದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿಗೆ ನಾಲ್ಕು ತಿಂಗಳು ಮಾತ್ರ ಅಲ್ಲಿನ ನೀರು ಬೇಕಾಗುತ್ತದೆ. ಆದ್ದರಿಂದ ಮಾರ್ಗ ಮಧ್ಯದ 12 ಗ್ರಾಮಗಳಿಗೆ ಶುದ್ಧೀಕರಿಸಿದ ನೀರು ನೀಡಲಾಗದು. ನೀರನ್ನು ನೀಡಲಾಗುವುದು, ಅದನ್ನು ಅವರೇ ಶುದ್ಧೀಕರಿಸಿಕೊಳ್ಳಬೇಕು ಎಂದರು.

ಸದಸ್ಯ ಶ್ಯಾಂಪ್ರಸಾದ್ ಕುಡ್ವ ಮಾತನಾಡಿ, ವಾರಾಹಿ ಕುಡಿಯುವ ನೀರಿನ ಯೋಜನೆ ಜಾರಿಗೆ 36 ತಿಂಗಳ ಕಾಲಾವಕಾಶ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಲಿದೆ. ಆದ್ದರಿಂದ ಆ ಯೋಜನೆ ಜಾರಿಯಾಗಿ ನೀರು ಬರುವ ವರೆಗೆ ನಗರಸಭೆ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.

ಇಂದಿರಾ ಕ್ಯಾಂಟೀನ್‌ಗಾಗಿ ನಗರಸಭೆ ಹೊಸ ಕಚೇರಿ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ನೀಡಿರುವುದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಜಾಗವನ್ನು ಉಳಿಸಿಕೊಂಡು ಕ್ಯಾಂಟೀನ್ ನಿರ್ಮಾಣ ಮಾಡಲು ಇದ್ದ ಅವಕಾಶವನ್ನು ಸಹ ಕೈಚೆಲ್ಲಿ ಜಾಗದ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು. ಮಣಿಪಾಲದಲ್ಲಿ ಆರಂಭಿಸಿರುವ ಕ್ಯಾಂಟೀನ್‌ಗೆ ಹೋಗಲು ಕಾರ್ಮಿಕರು, ಬಡವರಿಗೆ ತೊಂದರೆ ಆಗಲಿದೆ. ಜನನಿಬಿಡ ಸ್ಥಳದಲ್ಲಿ ಮಾಡಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಸಹ ಕೇಳಿ ಬಂತು.

ಬೀದಿ ನಾಯಿ ಹಾವಳಿಗೆ ಕಡೆವಾಣ ಹಾಕದಿರುವ ಬಗ್ಗೆಯೂ ಚರ್ಚೆ ನಡೆಯಿತು. ಸರ್ಕಾರೇತರ ಸಂಸ್ಥೆಯೊಂದು ಬಿಡಾಡಿ ನಾಯಿಗಳನ್ನು ಪ್ರತ್ಯೇಕ ಸ್ಥಳವೊಂದರಲ್ಲಿ ಇಟ್ಟು ಸಾಕಲಿದೆ. ಬೀಡಿನ ಗುಡ್ಡೆಯಲ್ಲಿ ಅವರಿಗೆ ಜಾಗ ನೀಡಲಾಗುವುದು ಎಂದು ಮಂಜುನಾಥಯ್ಯ ಹೇಳಿದರು.

ಉಡುಪಿ ಮಸೀದಿಯ ಸಮೀಪ ಅನಧಿಕೃತ ಆಟೊರಿಕ್ಷಾ ತಲೆ ಎತ್ತಿದ್ದು, ಅದನ್ನು ತೆರವುಗೊಳಿಸಿ ಎಂದು ಸದಸ್ಯ ಚಂದ್ರಕಾಂತ್ ಒತ್ತಾಯಿಸಿದರು. ಒಂದೇ ಕೋಮಿನವರಿಗೆ ಸಹ ಅಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಇದೆ. ಹಾಗಿದ್ದರೆ
ಅದನ್ನು ಕೂಡಲೇ ತೆರವು ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸದಸ್ಯ ರಮೇಶ್ ಕಾಂಚನ್ ಮಾತನಾಡಿ. ಯಾವ ಆಟೊ ರಿಕ್ಷಾ ನಿಲ್ದಾಣಕ್ಕೂ ನಗರಸಭೆ ಅನುಮತಿ ನೀಡಿಲ್ಲ. ಪರಿಶೀಲನೆ ಮಾಡಿ ಅನುಮತಿ ಇಲ್ಲದ ಎಲ್ಲವನ್ನೂ ತೆರವು ಮಾಡಿ ಎಂದರು.

ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT