ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಅ. 4ರಿಂದ 12ರವೆರೆಗೆ ಪ್ರತೀ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ ಅ. 11ರಂದು ರಾತ್ರಿ 8.30ಕ್ಕೆ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ಶಮಿತಾ ಮಲ್ನಾಡ್ ಮತ್ತು ಅವರ ತಂಡದಿಂದ ನಡೆಯುವ ಸಂಗೀತ ರಸಮಂಜರಿ ಪ್ರಧಾನ ಆಕರ್ಷಣೆ ಎನಿಸಿದೆ.
ಉಳಿದಂತೆ, ಹೊರ ಜಿಲ್ಲೆಯ ಹಾಗೂ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯ ಸಂಜೆ 6 ಗಂಟೆಯಿಂದ ಜರುಗಲಿವೆ.
ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ಮತ್ತು ದಸರಾ ಸಮಿತಿ ಅಧ್ಯಕ್ಷ ವೆಂಕಟರಾಜಾ ಮಾರ್ಗದರ್ಶನದಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಮತ್ತು ಖಜಾಂಜಿ ಅರುಣ್ ಶೆಟ್ಟಿ, ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಈ ಬಾರಿಯ ದಸರಾದಲ್ಲಿ ಜನಮನ ಸೆಳೆಯಲಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ತಿಳಿಸಿದ್ದಾರೆ.
ಅ. 5ರಂದು ನಡೆಯುವ ಬೆಳಿಗ್ಗೆ 9 ಗಂಟೆಯಿಂದಲೆ 11 ನೇ ವರ್ಷದ ಮಕ್ಕಳ ದಸರೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಮತ್ತು ಕ್ಲೇಮಾಡೆಲಿಂಗ್ ಸ್ಪರ್ಧೆಗಳು ಇರಲಿವೆ.
ಅ. 6ರಂದು ಬೆಳಿಗ್ಗೆ 10 ಗಂಟೆಗೆ ಮೊದಲ ವರ್ಷದ ಕಾಫಿ ದಸರೆಯು ಡಾ.ಮಂತರ್‌ಗೌಡ ಸಹಕಾರದಲ್ಲಿ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೖಷಿ,ಪ ಶುವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯಲಿದೆ. ಇದರಲ್ಲಿ 32 ಮಳಿಗೆಗಳಲ್ಲಿ ಕಾಫಿ, ಕೖಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬಂಧಿತ ಮಾಹಿತಿ ಪ್ರದರ್ಶನ, ವಿಚಾರಸಂಕಿರಣಗಳು ಇರಲಿವೆ. ಅ. 7ರಂದು ಬೆಳಿಗ್ಗೆ 10 ಗಂಟೆಯಿಂದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ, ಹಾಗೂ ವಿಚಾರಸಂಕಿರಣ ನಡೆಯಲಿದೆ.
ಅ. 8ರಂದು ಬೆಳಿಗ್ಗೆ 10 ಗಂಟೆಯಿಂದಲೇ 7 ನೇ ವರ್ಷದ ಮಹಿಳಾ ದಸರೆಯು, ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ನಡೆಯಲಿದೆ. ಮಹಿಳೆಯರಿಗಾಗಿ ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಆಯೋಜಿತವಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಮೆಹಂದಿ, ಹಾಕುವ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭ ಡ್ಯಾನ್ಸ್, ವಾಲಗತ್ತಾಟ್, ನಾರಿಗೆ ಒಂದು ಸೀರೆ, ಕಪ್ಪೆ ಜಿಗಿತ, ಕೇಶ ವಿನ್ಯಾಸ, ಒಂಟಿ ಕಾಲಿನ ಓಟದ ಸ್ಪರ್ಧೆಗಳು ಮಹಿಳೆಯರಿಗಾಗಿ ಇರಲಿವೆ.
ಅ. 10ರಂದು ಬೆಳಿಗ್ಗೆ 9.30ಕ್ಕೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ 5ನೇ ವರ್ಷದ ಜಾನಪದ ದಸರಾ ನಡೆಯಲಿದೆ. ಜಿಲ್ಲೆ ಮತ್ತು ಹೊರಜಿಲ್ಲೆಗಳ ಜಾನಪದ ಕಲಾತಂಡಗಳ ಜಾಥಾ ಜನರಲ್ ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನದವರೆಗೆ ನಡೆದು, ಕಲಾಸಂಭ್ರಮ ವೇದಿಕೆಯಲ್ಲಿ ಕಲಾತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ, ಪೊನ್ನಚ್ಚನ ಮಧುಶೂದನ್ ಅವರಿಂದ ಜಾನಪದ ಪರಿಕರಗಳ ಪ್ರದರ್ಶನವೂ ಇರಲಿದೆ. ಅಂದು ಸಂಜೆ 6 ಗಂಟೆಯಿಂದ ಯುವದಸರೆ ನಡೆಯಲಿದೆ.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಲ್ಲಿ ಸಂಚಾಲಕರಾಗಿ ತೆನ್ನೀರಾ ಮೈನ, ಸದಸ್ಯರಾಗಿ ಕುಡೆಕಲ್ ಸಂತೋಷ್, ಲೀಲಾಶೇಷಮ್ಮ, ವೀಣಾಕ್ಷಿ ರವಿಕುಮಾರ್, ಭಾರತಿ ರಮೇಶ್, ಮಿನಾಜ್, ಪ್ರವೀಣ್, ಪುದಿಯನೆರವನ ರೇವತಿ ರಮೇಶ್ , ಪಾಲೆಯಂಡ ರೂಪಾ ಸುಬ್ಬಯ್ಯ, ಸತ್ಯ ಮಂಜು, ಕವನ್ ಕುತ್ತೋಳಿ, ಅರ್ಜುನ್ ರಾಜೇಂದ್ರ, ದಿವಾಕರ್ ರೈ, ಚೇಂದ್ರಿಮಾಡ ವಿನು ಈರಪ್ಪ, ನಿರಂಜನ್, ತಳೂರು ಡೀನಾ ವಿನಯಕಾಂತ್ ಕಾರ್ಯನಿರ್ವಹಿಸಿ ತಂಡಗಳ ಆಯ್ಕೆ ಮಾಡಿದ್ದಾರೆ ಎಂದು ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.