ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಅದ್ಧೂರಿ ದಸರೆ, ಶ್ರದ್ಧಾಭಕ್ತಿಯ ತೀರ್ಥೋದ್ಭವ

ಸೆ.26ರಿಂದ ದಸರೆ, ಅ. 17ರಂದು ತೀರ್ಥೋದ್ಭವ; ಸಿದ್ಧತಾ ಕಾರ್ಯ ಕೈಗೊಳ್ಳಲು ಸಚಿವ ಬಿ.ಸಿ.ನಾಗೇಶ್ ಸೂಚನೆ
Last Updated 17 ಸೆಪ್ಟೆಂಬರ್ 2022, 8:34 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ನಡೆಯುವ ಜನಪ್ರಿಯ ಹಾಗೂ ಅತ್ಯಂತ ಮಹತ್ವದ ಉತ್ಸವಗಳಾದ ದಸರೆ ಹಾಗೂ ಕಾವೇರಿ ತೀರ್ಥೋದ್ಭವಕ್ಕಾಗಿ ಸಕಲ ಸಿದ್ಧತೆಗಳನ್ನೂ ಸಮರೋಪಾದಿಯಲ್ಲಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಎರಡು ವರ್ಷಗಳಿಂದ ಇದ್ದ ಕೋವಿಡ್‌ನ ಕರಾಳ ಛಾಯೆ ಈ ಬಾರಿ ಇಲ್ಲದೇ ಇರುವುದರಿಂದ ಅತ್ಯಂತ ಹೆಚ್ಚಿನ ಪ್ರವಾಸಿಗರು ಹಾಗೂ ಭಕ್ತರು ಈ ಎರಡೂ ಉತ್ಸವಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಯಾವುದೇ ಕಾರಣಕ್ಕೂ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.

‘ಡಿ.ಜೆ ಬಳಕೆ ಸಂಬಂಧ ಕಾನೂನು ಸಚಿವರೊಂದಿಗೆ ಚರ್ಚಿಸುತ್ತೇನೆ. ಇದರ ಬಳಕೆಗೆ ತೊಂದರೆಯಾಗದು’ ಎಂದರು.

ಸೆ.26ರಿಂದ ದಸರೆ ಆರಂಭವಾಗಿ ಅ.5ರಂದು ದಶಮಂಟಪೋತ್ಸವ ಹಾಗೂ 6ರಂದು ಬನ್ನಿ ಕಡಿಯುವ ಮೂಲಕ ಉತ್ಸವ ಕೊನೆಯಾದರೆ, ಅ. 17ರ ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಅಧಿಕಾರಿಗಳು ನಡೆಸಿರುವ ಸಿದ್ಧತಾ ಕಾರ್ಯಗಳನ್ನು ಸಚಿವ ನಾಗೇಶ್ ಅವರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿ ಸೂಚನೆಗಳನ್ನು ನೀಡಿದರು.

ಸಭೆಯ ಆರಂಭದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ದಸರಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ₹1 ಕೋಟಿ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ₹36 ಲಕ್ಷ ನೀಡುವಂತೆ ಉತ್ಸವ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.

ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಣೆಯಾಗಿದ್ದ ದಸರೆ ಈ ಬಾರಿ ವಿಜೃಂಭಣೆಯಿಂದ ನೆರವೇರಲಿದೆ. ಅದಕ್ಕಾಗಿ ಎಲ್ಲ ಅಧಿಕಾರಿಗಳೂ ಹೆಚ್ಚು ಚುರುಕಿನಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಸೂಚಿಸಿದರು.

ವಾಹನ ಸಂಚಾರ ನಿಷೇಧಿಸಿ: ದಶಮಂಟಪೋತ್ಸವ ನಡೆಯುವ ಅ. 5ರಂದು ಎಲ್ಲ ಬಗೆಯ ವಾಹನ ಸಂಚಾರವನ್ನು ಮಡಿಕೇರಿ ನಗರದಲ್ಲಿ ನಿಷೇಧಿಸಬೇಕು ಎಂದು ಉತ್ಸವ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು.

ತೀರ್ಪುಗಾರರು, ದೇವಸ್ಥಾನಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಆಂಬುಲೆನ್ಸ್ ಸೇರಿದಂತೆ ಆರೋಗ್ಯ ಕಾರ್ಯಕರ್ತರನ್ನು ಪ್ರತಿ ಮಂಟಪಕ್ಕೂ ನಿಯೋಜಿಸಬೇಕು ಎಂದು ಕೋರಿದರು.

ಮಂಟಪ ಬಿಚ್ಚದಂತೆ ತಾಕೀತು: ಪ್ರತಿ ವರ್ಷ ತೀರ್ಪುಗಾರರು ಮಂಟಪವನ್ನು ವೀಕ್ಷಿಸಿ ತೆರಳಿದ ಬಳಿಕ ಅಲ್ಲೇ ಮಂಟಪ ಬಿಚ್ಚಲಾಗುತ್ತದೆ. ಇದರಿಂದ ಮತ್ತೊಂದು ಮಂಟಪ ಬರುವುದಕ್ಕೆ ಕಷ್ಟವಾಗಲಿದೆ. ಜತೆಗೆ, ಸಾರ್ವಜನಿಕರ ಮಂಟಪ ವೀಕ್ಷಣೆಗೂ ತೊಡಕಾಗಲಿದೆ. ಈ ಪರಿಪಾಠ ಬಿಡಬೇಕು ಎಂದು ಡಿವೈಎಸ್‌ಪಿ ಗಜೇಂದ್ರಪ್ರಸಾದ್ ಸಭೆಯ ಗಮನಕ್ಕೆ ತಂದರು.

ಇದಕ್ಕೆ ದನಿಗೂಡಿಸಿದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ‘ಸಾರ್ವಜನಿಕರಿಗೆ ಎಲ್ಲ ಮಂಟಪಗಳನ್ನು ನೋಡುವುದಕ್ಕೆ ಅವಕಾಶ ನೀಡಬೇಕು’ ಎಂದರು.

ಮಂಟಪವನ್ನು ಎಲ್ಲಿ ಕಟ್ಟಲಾ ಗುತ್ತದೋ ಅಲ್ಲೇ ಅದನ್ನು ಬಿಚ್ಚುವ ತೀರ್ಮಾನವನ್ನು ಸಭೆ ಕೈಗೊಂಡಿತು.

ಪ್ರತಿ ಮಂಟಪವೂ ಸಮಯಕ್ಕೆ ಸರಿಯಾಗಿ ನಿಗದಿತವಾದ ಮಾರ್ಗದಲ್ಲೇ ಬರಬೇಕು. ರಸ್ತೆಯ ಅಗಲಕ್ಕಿಂತ ಹೆಚ್ಚು ದೊಡ್ಡದಾದ ಮಂಟಪ ಬೇಡ. ಅಗ್ನಿಶಾಮಕ ಪಡೆಯಿಂದ ಪರವಾನಗಿ ತರಬೇಕು ಎಂಬ ಸೂಚನೆಗಳನ್ನು ಪೊಲೀಸರು ನೀಡಿದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲೂ ಸಭೆ ಸೂಚಿಸಿತು.

ಮಂಟಪಗಳಿಗೆ ವಿದ್ಯುತ್‌ ತಂತಿಗಳು ತಗುಲದಂತೆ ಜೋತು ಬಿದ್ದಿರುವ ತಂತಿಗಳನ್ನು ಎತ್ತರದ ಕಂಬ ನೆಟ್ಟು ಸರಿಪಡಿಸುವಂತೆಯೂ ಸೆಸ್ಕ್ ಅಧಿಕಾರಿಗಳಿಗೆ ಸಭೆ ಸೂಚಿಸಿತು.

ಗೋಣಿಕೊಪ್ಪ ದಸರಾ ಸಂಬಂಧಿದಂತೆ ಕಾವೇರಿ ದಸರಾ ಸಮಿತಿ ಅಧ್ಯಕ್ಷರಾದ ಬಿ.ಎನ್.ಪ್ರಕಾಶ ಮಾಹಿತಿ ನೀಡಿದರು. ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ರಮೇಶ್, ಮುಖಂಡರಾದ ಎಂ.ಬಿ.ದೇವಯ್ಯ, ಮನುಮಂಜುನಾಥ್, ಮನುಮುತ್ತಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT