ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

Last Updated 22 ಜೂನ್ 2018, 17:22 IST
ಅಕ್ಷರ ಗಾತ್ರ

ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ರಾಗಿಣಿ ಸುಬ್ರಮಣಿ ಅವರ ಮನೆ ಸಂಪೂರ್ಣ ಹಾನಿಯಾಗಿದ್ದು, ಖುದ್ದು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

‘ಸುರೇಶ್ ಅವರ ಮನೆಯ ಮೇಲ್ಭಾಗದಲ್ಲಿರುವ ತೋಟದಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಗಾಳಿ ಮಳೆಗೆ ಮನೆಯ ಮೇಲೆ ಬಿದ್ದರೆ ಭಾರಿ ಹಾನಿಯಾಗುವ ಸಂಭವವಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಸಂದರ್ಭ, ಕಂದಾಯ ಇಲಾಖೆಯಿಂದ ಸಂಬಂಧಿಸಿದ ತೋಟದ ಮಾಲೀಕರಿಗೆ ನೋಟಿಸ್ ನೀಡಿ, ಮರಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸುರೇಶ್ ಅವರ ಮನೆಯ ಹಿಂಭಾಗ ಕುಸಿಯುವ ಹಂತದಲ್ಲಿರುವ ತಡೆಗೋಡೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಇದರೊಂದಿಗೆ ಮನೆ ಹಾನಿಗೊಂಡಿರುವ ಶೋಭಾ ರಾಜು, ಬರೆ ಕುಸಿದು ನಷ್ಟ ಸಂಭವಿಸಿರುವ ನವೀನ, ತಡೆಗೋಡೆ ಕುಸಿಯುವ ಭೀತಿಯಲ್ಲಿರುವ ರಾಜು ತಂಗಮಣಿ, ಸಗಾಯ್‌ರಾಜು, ಚಂದ್ರ ಅವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಜೆಗುಂಡಿ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ, ಸದಸ್ಯರಾದ ಕೆ.ಎ. ಯಾಕೂಬ್, ಕವಿತಾ ಅವರುಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

‘ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮಳೆಹಾನಿ ಪರಿಹಾರ ನಿಧಿಯಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭ ಪ್ರವಾಸೋದ್ಯಮ ಇಲಾಖೆಯ ಜಗನ್ನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ, ಗ್ರಾಮ ಸಹಾಯಕ ಮೋಹನ್, ಪ್ರಹ್ಲಾದ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT