ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಹುಲಿಯ ಕಳೇಬರ ಪತ್ತೆ: ಇನ್ನಾದರೂ ದೂರವಾಗುವುದೇ ಆತಂಕ...

ಗಂಡು ಹುಲಿಯ ಕಳೇಬರ ಪತ್ತೆ: ಗುಂಡೇಟಿಗೆ ಬಲಿಯಾಗಿರುವುದು ಅಪಾಯಕಾರಿ ಹುಲಿ–ಅಧಿಕಾರಿಗಳ ವಾದ
Last Updated 19 ಮಾರ್ಚ್ 2021, 15:31 IST
ಅಕ್ಷರ ಗಾತ್ರ

ಮಡಿಕೇರಿ/ಪೊನ್ನಂಪೇಟೆ: ಎರಡು ತಿಂಗಳಿಂದ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ, ಹುಲಿಯೊಂದು ಕೊನೆಗೆ ಕಾರ್ಮಿಕರ ಮೇಲೂ ದಾಳಿ ನಡೆಸಿ ಮೂವರನ್ನು ಸಾಯಿಸಿತ್ತು. ಇದರಿಂದ ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಜನರಿಗೆ ನೆಮ್ಮದಿಯೇ ಇಲ್ಲವಾಗಿತ್ತು. ಸಂಜೆಯಾದ ಮೇಲೆ ಗ್ರಾಮಸ್ಥರು ಹಾಗೂ ಕಾರ್ಮಿಕರು ಓಡಾಟವನ್ನೇ ನಿಲ್ಲಿಸಿದ್ದರು. ಇದೀಗ ಹುಲಿಯೊಂದರ ಕಳೇಬರ ಸಿಕ್ಕಿದ್ದು, ಇನ್ನಾದರೂ ನೆಮ್ಮದಿ ಸಿಕ್ಕೀತೇ ಎಂಬ ಮಾತು ಕೇಳಿ ಬರುತ್ತಿದೆ.

ಕಾನೂರು, ಶ್ರೀಮಂಗಲ, ಕುಟ್ಟ, ಹುದಿಕೇರಿ, ನಾಣಚ್ಚಿ, ಪೊನ್ನಂಪೇಟೆ, ತೆರಾಲು, ತಾವಳಗೇರಿ, ಕುಮಟೂರು, ಬಾಡಗಕೇರಿ, ಬೆಳ್ಳೂರು, ನಿಟ್ಟೂರು ಗ್ರಾಮಸ್ಥರು ಜೀವಭಯದಲ್ಲಿದ್ದರು. ಎರಡು ದಿನಕ್ಕೊಮ್ಮೆ ಜಾನುವಾರು ಬಲಿಯಾಗುತ್ತಿದ್ದವು. ರೈತರು ಹಾಗೂ ಕಾರ್ಮಿಕರ ಆಕ್ರೋಶ ಹೆಚ್ಚಾಗಿತ್ತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹಾಗೂ ಖಾಸಗಿ ತೋಟದ ಮಧ್ಯದಲ್ಲಿರುವ ಕಂದಕದಲ್ಲಿ ಶುಕ್ರ ವಾರ ಮಧ್ಯಾಹ್ನದ ವೇಳೆಗೆ ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಕಾರ್ಯಾಚರಣೆ ತಂಡಕ್ಕೆ ಸಿಕ್ಕಿತು. ಇದೇ ಹುಲಿಯೇ ದಾಳಿ ನಡೆಸುತ್ತಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ‘ಇದೇ ಹುಲಿ ಆಗಿರಲಿ’ ಎಂದು ಜನರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನಾದರೂ ನೆಮ್ಮದಿ ಜೀವನ ನಡೆಸುವ ಅವಕಾಶವಾಗಲಿ ಎಂದು ಪ್ರತಿಭಟನ ಕಾರರು ಹೇಳಿದರು.

ಕೆಲಸವೇ ಸ್ಥಗಿತಗೊಂಡಿತ್ತು: ಅಪಾಯ ಕಾರಿ ಹುಲಿಯು ಭೀತಿ ಸೃಷ್ಟಿಸಿದ್ದ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕಾಫಿ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕಿದ್ದರು. ಕಾಳು ಮೆಣಸು ಕೊಯ್ಲು ಹಾಗೂ ತೋಟಕ್ಕೆ ನೀರು ಹಾಯಿಸುವ ಕೆಲಸವೇ ಸ್ಥಗಿತಗೊಂಡಿತ್ತು. ಆತಂಕಗೊಂಡಿದ್ದ ಕಾರ್ಮಿಕರು ತಮ್ಮೂರಿಗೆ ತೆರಳಿದ್ದರು. ರೈತರು ನಷ್ಟದ ಭೀತಿ ಎದುರಿಸಿದ್ದರು.

ಹುಲಿ ದಾಳಿಯಿಂದ ಮೂವರು ಮೃತಪಟ್ಟ ಮೇಲೆ ಅಪಾಯಕಾರಿ ಹುಲಿ ಸೆರೆಗೆ ರೈತರು, ಕಾರ್ಮಿಕರು ಆಗ್ರಹಿಸಿದ್ದರು. ಬೆಳ್ಳೂರು ಎಂಬಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇ ರಿಗೆ ಮುತ್ತಿಗೆ, ಪೊನ್ನಂಪೇಟೆ ತಾಲ್ಲೂಕು ಬಂದ್‌ ನಡೆಸಿದ್ದರು.

ರೈತರ ಆಕ್ರೋಶ ಹೆಚ್ಚಾದ ಮೇಲೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ‘ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗದಿದ್ದರೆ ಕೊನೆಯ ಆಯ್ಕೆಯಾಗಿ ಗುಂಡಿಕ್ಕಲು ಸೂಚನೆ ನೀಡಿದ್ದರು.’

ಶುಕ್ರವಾರ ಆಗಿದ್ದಾದರೂ ಏನು?: ಎಂದಿನಂತೆಯೇ ಶುಕ್ರವಾರ ಮಧ್ಯಾಹ್ನ ಬಿರುಬಿಸಿಲಿನಲ್ಲೂ ಕೂಂಬಿಂಗ್ ಕಾರ್ಯಾ ಚರಣೆ ನಡೆಯುತ್ತಿತ್ತು. ನಾಗರಹೊಳೆ ಉದ್ಯಾನದ ಅಂಚಿನಲ್ಲಿರುವ ಲಕ್ಕುಂದ ಗ್ರಾಮದಲ್ಲಿ ತೆರಳುತ್ತಿದ್ದ ತಂಡಕ್ಕೆ, ವಾಸನೆ ಬಡಿದಿದೆ. ತಕ್ಷಣವೇ ಪರಿಶೀಲನೆ ನಡೆಸಿದಾಗ ಕೊಡಂದೇರ ರವಿ ಎಂಬುವವರ ತೋಟದ ಗಡಿಯಲ್ಲಿರುವ ಆನೆ ಕಂದಕದಲ್ಲಿ ಹುಲಿ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಲ್ಕು ದಿನದ ಹಿಂದೆ ಗಂಡು ಹುಲಿ ಮೃತಪಟ್ಟಿದೆ. ಸುಮಾರು 10 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹೈಸೊಡ್ಲೂರು ಗ್ರಾಮದಲ್ಲಿ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟು ತಿಂದು ಎಲ್ಲಿಯೂ ಕಾಣಿಸಿಕೊಳ್ಳದೇ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಇದೀಗ ಅದೇ ಹುಲಿ ಕಳೇಬರ ಪತ್ತೆ ಯಾಗಿರುವುದು, ಅರಣ್ಯ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ. ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ, ಹುಲಿ ಕಳೇಬರವನ್ನು ಸುಟ್ಟು ಹಾಕಲಾಯಿತು.

ಹುಲಿಯ ಪಟ್ಟಿಗಳು ತಾಳೆ...

ಬೆಳ್ಳೂರು ಗ್ರಾಮದಲ್ಲಿ ಬಾಲಕನನ್ನು ಬಲಿ ಪಡೆದು, ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಹುಲಿಗೆ ಹಾಗೂ ಲಕ್ಕುಂದ ಗ್ರಾಮದಲ್ಲಿ ಸಿಕ್ಕಿರುವ ಹುಲಿಯ ಕಳೇಬರದ ಮೇಲಿರುವ ಪಟ್ಟಿಗಳು ತಾಳೆಯಾಗಿವೆ.

ಹುಲಿಗೆ ಗುಂಡಿಕ್ಕಲು ಆದೇಶ ಬಂದ ನಂತರ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಹೈಸೊಡ್ಲೂರು ಗ್ರಾಮದಲ್ಲಿ ಗುಂಡು ಹಾರಿಸಿದ್ದರು. ಆದರೆ, ಹುಲಿ ತಪ್ಪಿಸಿಕೊಂಡಿತ್ತು. ನಂತರ, ಹುಲಿ ನಾಲ್ಕೇರಿ ಗ್ರಾಮದಲ್ಲಿ ಜಾನುವಾರು ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಈ ಕಾರಣದಿಂದ ಹುಲಿ ನಾಗರಹೊಳೆ ಭಾಗಕ್ಕೆ ಬಂದಿರಬಹುದು ಎಂಬ ಅಂದಾಜಿನ ಮೇಲೆ ಕೂಂಬಿಂಗ್ ನಡೆಸುತ್ತಿದ್ದ ಸಂದರ್ಭ ಕಳೇಬರ ಪತ್ತೆಯಾಗಿದೆ. ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಗೋಪಾಲ್ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT