ಕುಶಾಲನಗರ: ‘ಡೆಂಗಿ ಒಂದು ಸಾಂಕ್ರಾಮಿಕ ರೋಗ ಆಗಿರುವ ಕಾರಣ ಸಾರ್ವಜನಿಕರು ಆರೋಗ್ಯದತ್ತ ಹೆಚ್ಚಿನ ಒಲವು ಹೊಂದುವುದು ಅತ್ಯಗತ್ಯ. ಆದ್ದರಿಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಶ್ರಮಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್ ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರು, ಸಿಬ್ಬಂದಿ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸಬೇಕು’ ಎಂದರು.
‘ಪೌಷ್ಟಿಕ ಆಹಾರ ಹೆಚ್ಚಾಗಿ ಬಳಸಬೇಕು, ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಮನೆಯ ಆಸುಪಾಸಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಎಚ್.ಕೆ.ಶಾಂತಿ ಭಾಗವಹಿಸಿದ್ದರು.
ಸಭೆಯಲ್ಲಿ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಆರೋಗ್ಯ ಘಟಕಗಳ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ನಿರೀಕ್ಷಕರು ಪಾಲ್ಗೊಂಡಿದ್ದರು.