ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾವೈಕ್ಯದ ಅಂಬಟ್ಟಿ ಮಖಾಂ ಉರುಸ್

ಸಂಕಟಗಳ ಪರಿಹಾರಕ್ಕೆ ಕಾದು ಕುಳಿತಿರುವ ಭಕ್ತರು
ಜೆ.ಸೋಮಣ್ಣ
Published 16 ಫೆಬ್ರುವರಿ 2024, 5:32 IST
Last Updated 16 ಫೆಬ್ರುವರಿ 2024, 5:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಜಾತಿ ಧರ್ಮಗಳ ಭೇದವಿಲ್ಲದೆ ತಮ್ಮ ಸಂಕಟಗಳನ್ನು ನಿವೇದಿಸಿಕೊಂಡು ಪರಿಹಾರ ಕಂಡುಕೊಳ್ಳುವ ಜನರ ನಂಬಿಕೆಯ ಧಾರ್ಮಿಕ ಕೇಂದ್ರಗಳಲ್ಲಿ ಅಂಬಟಿ ಶೈಖ್ ವಲಿಯುಲ್ಲಾಹಿ ದರ್ಗಾವೂ ಒಂದು.

ಇದಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಮಾನವ ಹಿತ ಬಯಸಿ ಧಾರ್ಮಿಕ ಬೋಧನೆಯ ಸಲುವಾಗಿ ಪೂರ್ವ ರಾಷ್ಟ್ರದಿಂದ ಬಂದ ಶೈಖ್ ವಲಿಯುಲ್ಲಾಹಿ ಗೋಣಿಕೊಪ್ಪಲು– ವಿರಾಜಪೇಟೆ ನಡುವಿನ ಹೆದ್ದಾರಿ ಬದಿಯ ಅಂಬಟಿಯಲ್ಲಿ ನೆಲೆಯಾಗುತ್ತಾರೆ. ಈ ಸ್ಥಳವೇ ಈಗ ವಲಿಯುಲ್ಲಾಹಿ ದರ್ಗಾ ಎಂಬ ಹೆಸರಿನ ಭಾವೈಕ್ಯದ ಬೀಡಾಗಿದೆ.

ಪ್ರತಿವರ್ಷ ಫೆಬ್ರುವರಿಯಂದು ಇಲ್ಲಿ 4 ದಿನ ಕಾಲ ಎಲ್ಲ ಜಾತಿ, ಧರ್ಮಗಳ ಶ್ರದ್ಧಾ ಭಕ್ತಿಯ ಉತ್ಸವವಾಗಿ ಉರುಸ್ ನಡೆಯುತ್ತದೆ. ಇಲ್ಲಿಗೆ ಬರುವ ಭಕ್ತರು ಹಾಗೂ ತಮ್ಮ ಕಷ್ಟಗಳ ನಿವಾರಣೆಗಾಗಿ ಹರಕೆ ಹೊತ್ತ ಜನರು ಉರುಸ್ ದಿನದಂದು ಹರಕೆ ತೀರಿಸುತ್ತಾರೆ.

ಇಲ್ಲಿ ವರ್ಷಕ್ಕೊಮ್ಮೆ ಉರುಸ್ ನಡೆಯುವುದರ ಜತೆಗೆ ಪ್ರತಿ ಗುರುವಾರ ಕಾಯಿಲೆ ಇದ್ದವರು ದರ್ಗಾಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಇದಕ್ಕಾಗಿ ಪ್ರತಿ ಗುರುವಾರ ಸಂಜೆ ವೇಳೆ ಕೇರಳ, ಮಂಗಳೂರು, ಮೊದಲಾದ ಭಾಗಗಳಿಂದೆಲ್ಲ ಹಲವಾರು ಜನರು ಬಂದು ಇಲ್ಲಿ ಸೇರುತ್ತಾರೆ. ಸುಮಾರು 2 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ದರ್ಗಾ ಇತ್ತೀಚಿನ ವರ್ಷಗಳಲ್ಲಿ ಪ್ರಮಖ ಭಾವೈಕ್ಯದ ಕೇಂದ್ರವಾಗಿ ಬೆಳೆಯುತ್ತಿದೆ. ದರ್ಗಾದ ಖಾಜಿ ಎಂಬುವರು ಕನ್ನಡ ಮತ್ತು ಮಲೆಯಾಳದಲ್ಲಿ ಮಾತ್ರ ಪ್ರಾರ್ಥನೆ, ಪೂಜೆ ಮಂತ್ರ ನಡೆಸಿಕೊಡುತ್ತಾರೆ.

ದರ್ಗಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಎ.ಎಚ್.ಶಾದಿಲಿ, ಕಾರ್ಯದರ್ಶಿ ಎಂ.ಎ.ಶಾನು, ಉಪಾಧ್ಯಕ್ಷರಾಗಿ ಎಂ.ಕೆ.ಹ್ಯಾರೀಸ್, ಖಜಾಂಚಿಯಾಗಿ ಕೆ.ಎ.ಖಾಲಿದ್, ನಿರ್ದೇಶಕರಾಗಿ ಎಂ.ಎ.ರಜಾಕ್, ಪಿ.ಎ.ಖಾಲಿದ್, ಕೆ.ಎ.ಲತೀಫ್, ಫಕ್ರುದ್ದೀನ್ ಕಾರ್ಯನಿರ್ವಹಿಸುತ್ತಿದ್ದಾರೆ.

‘30 ವರ್ಷಗಳ ಹಿಂದೆ ಸಮಾಧಿ ಮಣ್ಣಿನಲ್ಲಿತ್ತು. ಅದರ ಮೇಲೆ ಚಾವಣಿ ಹಾಕಿ ಮಳೆಯಿಂದ ರಕ್ಷಿಸಲಾಗಿತ್ತು. ಈಗ ಸುಂದರವಾದ ಕಟ್ಟಡ ನಿರ್ಮಿಸಲಾಗಿದೆ. ಸಮಾಧಿಯನ್ನು ಅಮೃತಶಿಲೆಯಿಂದ ರಕ್ಷಿಸಲಾಗಿದೆ’ ಎಂದು ದರ್ಗಾದ ಮಾಜಿ ಕಾರ್ಯದರ್ಶಿ ಮುಸ್ತಾಫ್ ಹೇಳಿದರು.

ಗೋಣಿಕೊಪ್ಪಲು ಬಳಿಯ ಅಂಬಟ್ಟಿ ದರ್ಗ ಉರೂಸ್‌ಗಾಗಿ ಹೂವಿನಿಂದ ಶೃಂಗಾರಗೊಂಡಿರುವುದು.
ಗೋಣಿಕೊಪ್ಪಲು ಬಳಿಯ ಅಂಬಟ್ಟಿ ದರ್ಗ ಉರೂಸ್‌ಗಾಗಿ ಹೂವಿನಿಂದ ಶೃಂಗಾರಗೊಂಡಿರುವುದು.
ದರ್ಗದೊಳಗಿನ ಸಮಾಧಿ ಹೂವಿನಿಂದ ಅಲಂಕೃತಗೊಂಡಿದೆ.
ದರ್ಗದೊಳಗಿನ ಸಮಾಧಿ ಹೂವಿನಿಂದ ಅಲಂಕೃತಗೊಂಡಿದೆ.
ಗೋಣಿಕೊಪ್ಪಲು ಬಳಿಯ ಅಂಬಟ್ಟಿ ದರ್ಗ ಉರೂಸ್ ಗಾಗಿ ಹೂವಿನಿಂದ ಶೃಂಗಾರಗೊಂಡಿರುವುದು.
ಗೋಣಿಕೊಪ್ಪಲು ಬಳಿಯ ಅಂಬಟ್ಟಿ ದರ್ಗ ಉರೂಸ್ ಗಾಗಿ ಹೂವಿನಿಂದ ಶೃಂಗಾರಗೊಂಡಿರುವುದು.

4 ದಿನ ನಡೆಯುವ ಉರುಸ್ ಎಲ್ಲ ಜಾತಿ, ಧರ್ಮದವರೂ ಭಾಗಿ 200 ವರ್ಷಗಳಷ್ಟು ಇತಿಹಾಸ ಇರುವ ದರ್ಗಾ

ಉರುಸ್ ಇಂದಿನಿಂದ ಈ ಬಾರಿ ಫೆ. 16ರಿಂದ 20ರವರೆಗೆ ಉರುಸ್ ನಡೆಯಲಿದೆ. ಶುಕ್ರವಾರ ಜುಮಾ ನಮಾಜಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಅಂಬಟ್ಟಿ ಜಮಾಅತಿನ ಅಧ್ಯಕ್ಷ ಎ.ಎಚ್.ಶಾದುಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ಮಖಾಂ ಆವರಣದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ರಫೀಕ್ ಸಅದಿ ನೇತೃತ್ವ ವಹಿಸಲಿದ್ದಾರೆ. ಅಂದು ರಾತ್ರಿ 7ಗಂಟೆಗೆ ಉರುಸ್‌ನ ಆಕರ್ಷಣೆಯಾದ ಅಂಬಟ್ಟಿ ಮಖಾಂ ಅಲಂಕಾರ ಮತ್ತು ಸಂದಲ್ ಕಾರ್ಯಕ್ರಮ ನಡೆಯಲಿದೆ. ಫೆ. 17ರಂದು ಸಂಜೆ 7 ಗಂಟೆಗೆ ಕೇರಳದ ಇರಿಕ್ಕೂರಿನ ವಿದ್ವಾಂಸ ಸೈಯದ್ ಸಹದ್ ಅಲ್ ಹೈದ್ರೋಸಿ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ. ಅತಿಥಿಗಳಾಗಿ ರಜಾಕ್ ಸಖಾಫಿ ಇಸ್ಮಾಯಿಲ್ ಮುಸ್ಲಿಯರ್ ಮುನೀರ್ ಸಖಾಫಿ ಇಬ್ರಾಹಿಂ ಮದನಿ ಮುತ್ತಲಿಬ್ ಅಲ್ ಅಮಾನಿ ಅಬ್ದುಲ್ ರಹಿಮಾನ್ ಅನ್ವಾರಿ ಶಂಸುದ್ದೀನ್ ಅಪ್ಸಲ್ ಶಹಬಾತ್ ಮಹಮ್ಮದ್ ಅಲಿ ಬಶೀರ್ ಮೊದಲಾದವರು ಭಾಗವಹಿಸಲಿದ್ದಾರೆ. ಫೆ. 18ರಂದು ರಾತ್ರಿ 8 ಗಂಟೆಗೆ ಕೇರಳದ ಕೊಲ್ಲಂನ ಹೆಸರಾಂತ ವಿದ್ವಾಂಸರಾದ ವಹಾಬ್ ನಯೀಮಿ ಅವರಿಂದ ವಿಶೇಷ ಧಾರ್ಮಿಕ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಕ್ಕಳತಂಡ ಎಸ್.ಮೊಯ್ದು ಮುಬಸ್ಸಿರ್ ಅಹ್ಸನಿ ಮೊಹಮ್ಮದ್ ರವೂಫ್ ಹುದವಿ ಅಬ್ದುಲ್ಲಾ ಖಾಸಿಮಿ ಇಲ್ಯಾಸ್ ಅಮ್ಜದಿ ನೌಶಾದ್ ಝಹರಿ ಮೊಹಮ್ಮದ್ ಹಾಜಿ ರಶೀದ್ ಹಾಜಿ ಫಕ್ರುದ್ದೀನ್ ಮಮ್ಮಿ ಹಾಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಫೆ. 19ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನ ಸಮಾರಂಭದಲ್ಲಿ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯಲಿದೆ. ಅಂಬಟ್ಟಿ ಜಮಾಅತ್‌ನ ಅಧ್ಯಕ್ಷ ಎ.ಎಚ್.ಸಾದುಲಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ವಿರಾಜಪೇಟೆಯ ಅನ್ವಾರುಲ್ ಹುದಾ ಕೇಂದ್ರದ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಲಿದ್ದಾರೆ.  ಅತಿಥಿಗಳಾಗಿ ಶಾಸಕ ಎ.ಎಸ್.ಪೊನ್ನಣ್ಣ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪಿ.ಎಂ.ಹಕೀಮ್ ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್ ಕಾಂಗ್ರೆಸ್ ಪ್ರಮುಖರಾದ ಎಚ್.ಎ.ಹಂಜ್ಹ ಅರವಿಂದ ಕುಟ್ಟಪ್ಪ ಲತೀಫ್ ಸುಂಟಿಕೊಪ್ಪ ರಂಜಿ ಪೂಣಚ್ಚ ಪಿ.ಎ.ಹನೀಫ್ ಭಾಗವಹಿಸಲಿದ್ದಾರೆ. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಪ್ರವಚನಕಾರ ನೌಫಲ್ ಸಖಾಫಿ ಕಳಸ ಪ್ರಧಾನ ಭಾಷಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT