ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೇಳಿಲ್ಲ‘

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ ಸ್ಪಷ್ಟನೆ
Published 12 ಜೂನ್ 2024, 6:06 IST
Last Updated 12 ಜೂನ್ 2024, 6:06 IST
ಅಕ್ಷರ ಗಾತ್ರ

ಮಡಿಕೇರಿ: ‘ನಾನು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಹೇಳಿಲ್ಲ. ಅದನ್ನು ಮತ್ತೊಮ್ಮೆ ಪರಿಶೀಲಿಸಿ, ನ್ಯೂನತೆಗಳೇನಾದರೂ ಇದ್ದರೆ ಅದನ್ನು ಸರಿಪಡಿಸಿ ಎಂದಷ್ಟೇ ಹೇಳಿರುವೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದೇ ಮತದಾರರ ಋಣ ತೀರಿಸುವ ಕೆಲಸ ಮಾಡಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ ಸ್ಪ‍ಷ್ಟಪಡಿಸಿದರು.

‘ನಾನು ಮತದಾರರನ್ನು ಕುರಿತು ಟೀಕಿಸಿಲ್ಲ. ಇಡಿ ವ್ಯವಸ್ಥೆಯೇ ಸರಿ ಇಲ್ಲ ಎಂದು ಹೇಳಿರುವೆಯಷ್ಟೇ. ನನಗೆ ಮತ ಹಾಕಿದ, ಮತ ಹಾಕದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುವೆ. ಸೋತರೂ ಜನಸೇವೆಗೆ ನಾನು ಸಿದ್ಧನಾಗಿರುವೆ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗ್ಯಾರಂಟಿ ಯೋಜನೆಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಪತ್ರ ಬರೆದಿರುವೆನೇ ವಿನಹಾ, ಗ್ಯಾರಂಟಿ ಯೋಜನೆಗಳನ್ನೆಲ್ಲ ನಿಲ್ಲಿಸಿ ಎಂದು ನಾನು ಹೇಳಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಬದಲಾವಣೆ ವಿಚಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಕ್ಕೆ ಕರೆತರುವ ವಿಚಾರ ಸತ್ಯಕ್ಕೆ ದೂರವಾದದ್ದು. ಚುನಾವಣೆಯ ಸೋಲು ಸಿದ್ದರಾಮಯ್ಯ ಅವರಿಗೂ, ನನಗೂ ಬೇಸರ ತರಿಸಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ ಎಂಬುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದಲೆ 9 ಸ್ಥಾನ ಗಳಿಸಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಈಗ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕಸ್ತೂರಿರಂಗನ್ ವರದಿ, ಕಾವೇರಿ, ಮೇಕೆದಾಟು, ಕಳಸಬಂಡೂರಿ, ಮಹಾದಾಯಿ, ಆಲಮಟ್ಟಿ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರಪರಿಹಾರ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಕೊಡುಗೆಗಳನ್ನು ಪ್ರಕಟಿಸಲಿ ಎಂದು ಸವಾಲೆಸೆದರು.

ಡಿ.ಕೆ.ಶಿವಕುಮಾರ್ ಅವರು ಹಾಲಿ ಇರುವ ಮನೆ ಸೋರುತ್ತಿದೆ. ಹಾಗಾಗಿ, ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗೆ ಮಾತ್ರ ಮನೆ ಬದಲಿಸುವ ಚಿಂತನೆಯಲ್ಲಿದ್ದಾರೆ. ಇದರಲ್ಲಿ ಬೇರೆ ವಿಶೇಷ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT