ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಜಿಲ್ಲೆಯಲ್ಲಿ ಪಟಾಕಿ ವ್ಯಾಪಾರಕ್ಕೆ ನಿರುತ್ಸಾಹ

ಪರವಾನಗಿ ಪಡೆದವರು 30 ಮಂದಿ, ಮಳಿಗೆ ಹಾಕಿದವರು‌ ಕೇವಲ 21
Published 14 ನವೆಂಬರ್ 2023, 6:50 IST
Last Updated 14 ನವೆಂಬರ್ 2023, 6:50 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಪಟಾಕಿ ವ್ಯಾಪಾರಕ್ಕೆ ವರ್ತಕರು ಉತ್ಸಾಹ ತೋರಿದ್ದು, ಪರವಾನಗಿ ಪಡೆದ ಕೆಲವರು ಮಳಿಗೆ ತೆರೆಯದೇ ಸುಮ್ಮನಿದ್ದಾರೆ. ಇದರಿಂದ ಬೆರಳೆಣಿಕೆಯಷ್ಟು ಪಟಾಕಿ ಮಳಿಗೆಗಳು ಮಾತ್ರವೇ ಜಿಲ್ಲೆಯಲ್ಲಿವೆ.

ಕಳೆದ ವರ್ಷ ಸುಮಾರು 40 ಮರ್ತಕರು ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ಮಳಿಗೆಗಳನ್ನು ಹಾಕಿದ್ದರು. ಆದರೆ, ಈ ಬಾರಿ ಪರವಾನಗಿ ಪಡೆದವರ ಸಂಖ್ಯೆಯೇ 30 ಆಗಿದ್ದರೂ, ಮಳಿಗೆ ಹಾಕಿದವರು‌ ಕೇವಲ 21 ವರ್ತಕರು ಮಾತ್ರ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅತ್ಯಂತ ಕನಿಷ್ಠ ಅಂದರೆ ಕೇವಲ ಒಂದು ವ್ಯಾಪಾರ ಮಳಿಗೆ ಇದೆ. ಇನ್ನುಳಿದ ಕಡೆಯೂ ಹೆಚ್ಚಿನ ಮಳಿಗೆಗಳಿಲ್ಲ. ವಿರಾಜಪೇಟೆಯಲ್ಲಿ 6, ಗೋಣಿಕೊಪ್ಪಲಿನಲ್ಲಿ 4, ಸೋಮವಾರಪೇಟೆಯಲ್ಲಿ 4, ಶನಿವಾರಸಂತೆ 2, ಕೊಡ್ಲಿಪೇಟೆಯಲ್ಲಿ 2, ಸುಂಟಿಕೊಪ್ಪ, ಮಾದಾಪುರದಲ್ಲಿ ತಲಾ ಒಂದೊಂದು ಮಳಿಗೆಗಳು ಇವೆ.

ಹಸಿರು ಪಟಾಕಿಗಳ ಅಭಾವವೇ ಕಾರಣ

ಸರ್ಕಾರ ಜಾರಿಗೊಳಿಸಿರುವ ಕಠಿಣ ನಿಯಮಗಳು ಹಾಗೂ ಹಸಿರು ಪಟಾಕಿಗಳ ಅಭಾವವೇ ಪಟಾಕಿ ವ್ಯಾಪಾರದಿಂದ ದೂರ ಉಳಿಯಲು ಕಾರಣ ಎಂದು ಬಹುತೇಕ ವ್ಯಾಪಾರಸ್ಥರು ಹೇಳುತ್ತಾರೆ.

‘ಸರ್ಕಾರ ಪಟಾಕಿ ಹೊಡೆಯಲು ವಿಧಿಸಿರುವ ಷರತ್ತುಗಳಿಂದಲೂ ಬೇಡಿಕೆ ಕಡಿಮೆಯಾಗಿದೆ. ಸರ್ಕಾರ ಹೇಳಿರುವಂತಹ ಹಸಿರು ಪಟಾಕಿಗಳೂ ಈಗ ಸಿಗುತ್ತಿಲ್ಲ. ಹಾಗಾಗಿ, ವ್ಯಾಪಾರದಿಂದ ಲಾಭವಾಗುವ ಸಾಧ್ಯತೆ ಕಡಿಮೆ ಎಂದು ಬಹುತೇಕ ಮಂದಿ ವ್ಯಾಪಾರದ ಕಡೆ ಮುಖ ಮಾಡಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಸರು ಬಹಿರಂಗಪಡಿಸಲು ಬಯಸದ ಪಟಾಕಿ ವರ್ತಕರೊಬ್ಬರು, ತಮಿಳುನಾಡಿನಲ್ಲಿ ಹಸಿರು ಪಟಾಕಿಗಳೆಲ್ಲವೂ ಖಾಲಿಯಾಗಿವೆ. ಮುಂದೆ ಹುತ್ತರಿಗೆ ಸಿಕ್ಕರೆ ಮಳಿಗೆ ಇಡುತ್ತೇವೆ’ ಎಂದರು.

ಎಲ್ಲೆಡೆ ತಪಾಸಣೆ

‘ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸೋಮವಾರ ದಿನವಿಡೀ ಜಿಲ್ಲೆಯಾದ್ಯಂತ ಪಟಾಕಿ ಮಳಿಗೆಗಳಲ್ಲಿ ತಪಾಸಣೆ ನಡೆಸಿದರು. ಸದ್ಯ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರಾಟ ಮಾಡಿರುವ ಕುರಿತು ಪ್ರಕರಣಗಳು ದಾಖಲಾಗಿಲ್ಲ’ ಎಂದು ಮಂಡಳಿಯ ಪರಿಸರ ಅಧಿಕಾರಿ ರಘುರಾಮ ಹೇಳಿದರು.

ವಾಯುಮಾಲಿನ್ಯ ಶಬ್ದಮಾಲಿನ್ಯ ಅಳೆಯಲು ನಿರ್ಧಾರ ಕೊಡಗು ಜಿಲ್ಲೆಯಲ್ಲಿ ದೀಪಾವಳಿ ಪ್ರಯುಕ್ತ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಅಳೆಯಲು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಡಳಿಯ ಪರಿಸರ ಅಧಿಕಾರಿ ರಘುರಾಮ ‘ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದ‌ ಪ್ರಮಾಣವನ್ನು ಅಳೆದು ಸರ್ಕಾರಕ್ಕೆ‌ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT