ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್ ಚಾಲಕನ ಕಿರುಕುಳ: ಪ್ರತಿಭಟನೆ

Last Updated 27 ಜೂನ್ 2019, 17:09 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ನರ್ಸ್‌ಗಳಿಗೆ ಆಂಬುಲೆನ್ಸ್ ಚಾಲಕ ರಾಜು ಎಂಬಾತ ನಿರಂತರ ಕಿರುಕುಳ ನೀಡುತ್ತಿದ್ದು, ಆತನ ದುರ್ನಡತೆಯನ್ನು ಸಹಿಸದ ಸಿಬ್ಬಂದಿಗಳು ಗುರುವಾರ ಕೆಲಕಾಲ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕ ರಾಜು ಎಂಬಾತ ನಿರಂತರವಾಗಿ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ದುರ್ನಡತೆಯಿಂದ ವರ್ತಿಸುತ್ತಾ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಈ ಬಗ್ಗೆ ಡಿಎಚ್‌ಓಗೆ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದರೂ; ಯಾವುದೇ ಪರಿಹಾರ ಸಿಗದ ಕಾರಣ, ವೈದ್ಯರು ಹಾಗೂ ಸಿಬ್ಬಂದಿಗಳು ಬೆಳಿಗ್ಗೆ 10ರಿಂದ 10.30 ಗಂಟೆಯವರೆಗೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಡಾ.ಪ್ರಾಣೇಶ್, ಡಾ.ಜೀವನ್ ಮತ್ತು ಸಿಬ್ಬಂದಿಗಳು ಗ್ರಾ.ಪಂ.ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ.ಸದಸ್ಯರಾದ ನಾಗರತ್ನಾ ಹಾಗೂ ಜ್ಯೋತಿ ಅವರಿಗೆ ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ರೋಗಿಗಳನ್ನು ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿದಾಗ, ಚಾಲಕ ರಾಜು 108 ವಾಹನದಲ್ಲಿ ಕಳುಹಿಸಲು ಅಡ್ಡಿಪಡಿಸುವುದು, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಅದರ ಚಾಲಕನಿಗೆ ಅಶ್ಲೀಲ ಪದಗಳಿಂದ ನಿಂದಿಸುವುದು, ಆಂಬುಲೆನ್ಸ್ ವಾಹನದ ಕೀ ಕೊಡದೆ ದರ್ಪದಿಂದ ವರ್ತಿಸಿ ಕರ್ತವ್ಯಕ್ಕೆ ತೊಂದರೆ ಮಾಡುವುದು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಶುಶ್ರೂಷಕಿಯರೊಂದಿಗೆ ಅನುಚಿತ ವರ್ತನೆ, ಕರ್ತವ್ಯಲೋಪ ಎಸಗುವುದರ ಬಗ್ಗೆ ವೈದ್ಯರು ಪ್ರಶ್ನಿಸಿದಾಗ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸುತ್ತಿದ್ದನು. ಈ ಬಗ್ಗೆ ಡಿಎಚ್‌ಓಗೆ ವೈದ್ಯರು ಹಾಗೂ ಸಿಬ್ಬಂದಿಗಳು ಜೂನ್‌ 13 ರಂದು ಲಿಖಿತ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.

ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೆಂಗಳೂರು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೂ ಕೂಡ ದೂರು ಸಲ್ಲಿಸಲಾಗಿತ್ತು. ನಂತರ ಮನವಿಗೆ ಸ್ಪಂದಿಸಿದ ಡಿಎಚ್‌ಓ ತನಿಖಾಧಿಕಾರಿಗಳನ್ನು ಕಳುಹಿಸಿ ಈ ಬಗ್ಗೆ ಖುದ್ದು ಹೇಳಿಕೆ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ 14 ದಿನ ಕಳೆದರೂ ಏನು ಕ್ರಮ ಕೈಗೊಳ್ಳದೆ ಇದ್ದುದರಿಂದ, ಚಾಲಕನ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಡಿಎಚ್‌ಓ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೆ ಇರುವುದೇ ಚಾಲಕ ರಾಜು ಈ ರೀತಿ ವರ್ತಿಸಲು ಕಾರಣ ಎಂದು ಸಾರ್ವಜನಿಕರು ಕೂಡ ದೂರಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವುದಾಗಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT