ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ| ಮೂಲಸೌಕರ್ಯದಿಂದ ವಂಚಿತವಾದ ದುಬಾರೆ ಹಾಡಿ

50ಕ್ಕೂ ಹೆಚ್ಚು ಕುಟುಂಬಕ್ಕೆ ಬಯಲುಶೌಚವೇ ಗತಿ
Last Updated 26 ಮಾರ್ಚ್ 2023, 16:33 IST
ಅಕ್ಷರ ಗಾತ್ರ

ಸಿದ್ದಾಪುರ: ವಿಶ್ವವಿಖ್ಯಾತ ಮೈಸೂರು ದಸರೆಯ ಜಂಬೂಸವಾರಿಯಲ್ಲಿ ಬಣ್ಣ ಬಣ್ಣದ ಬಟ್ಟೆ, ಟೋಪಿ ಧರಿಸಿ, ರಾಜಠೀವಿಯಲ್ಲಿ ಸಾಕಾನೆಗಳನ್ನು ಮುನ್ನಡೆಸುವ ಮಾವುತರು, ಕಾವಾಡಿಗರ ಬದುಕು ಶೋಚನೀಯವಾಗಿದೆ. ಇಲ್ಲಿನ ದುಬಾರೆ ಸಾಕಾನೆ ಶಿಬಿರದ ಹಾಡಿಯಲ್ಲಿ ಅವರು ಶೌಚಾಲಯ, ಮನೆ ಸೇರಿದಂತೆ ಮೂಲಸೌಕರ್ಯವಿಲ್ಲದೇ ಸಂಕಷ್ಟದಿಂದ ಬದುಕು ಸಾಗಿಸುತ್ತಿದ್ದಾರೆ.

ಇಲ್ಲಿ ಸಾಕಾನೆಗಳ ಕಾವಾಡಿಗರು ಹಾಗೂ ಮಾವುತರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಮೂಲಸೌಕರ್ಯವನ್ನು ಒದಗಿಸುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿದೆ. ಈಗಲೂ ಶೌಚಕ್ಕೆ ಬಯಲಿಗೆ ತೆರಳಬೇಕಾದ ಸ್ಥಿತಿಯಲ್ಲಿದ್ದಾರೆ.

ಕೆಲವು ಮನೆಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಶೌಚಾಲಯಗಳ ಗೋಡೆಗಳು ಕುಸಿದಿವೆ. ಚಾವಣಿ ಗಾಳಿಗೆ ಹಾರಿ ಹೋಗಿವೆ. ಬಹುತೇಕ ನಿವಾಸಿಗಳು ಶೌಚಕ್ಕಾಗಿ ಅರಣ್ಯಕ್ಕೆ ತೆರಳುತ್ತಿದ್ದು, ಮಹಿಳೆಯರು ಹಾಗೂ ಮಕ್ಕಳು ನರಕಯಾತನೆ ಅನುಭವಿಸುವಂತಾಗಿದೆ. ‘ಬಯಲು ಬಹಿರ್ದಸೆ ಮುಕ್ತ ಗ್ರಾಮ’ ಎಂಬ ಪ್ರಶಸ್ತಿ ಪಡೆದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದುಬಾರೆ ಹಾಡಿಯಲ್ಲಿ ಶೌಚಾಲಯ ಇಲ್ಲ ಎಂಬುದು ವಿಪರ್ಯಾಸ.

ಪ್ಲಾಸ್ಟಿಕ್ ಹೊದಿಕೆಗಳೇ ಅರಮನೆ: ಪ್ಲಾಸ್ಟಿಕ್ ಹೊದಿಕೆಗಳ ಮನೆಗಳಲ್ಲಿ ಹಾಡಿಯ ಬಹುತೇಕ ನಿವಾಸಿಗಳು ದಿನ ದೂಡುತ್ತಿದ್ದಾರೆ. ಮಳೆಗಾಲದಲ್ಲಿ ಗಾಳಿ ಮಳೆಗೆ ಸಂಕಷ್ಟವಾದರೇ, ಅರಣ್ಯದಂಚಿನ ಕಾಡುಪ್ರಾಣಿಗಳ ದಾಳಿಯ ಭಯವೂ ಹಾಡಿಗರ ನಿದ್ದೆಗೆಡಿಸುತ್ತಿದೆ. ಐ.ಟಿ.ಡಿ.ಪಿ ಇಲಾಖೆಯ ಮೂಲಕ ಹಾಡಿಯ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ಸಮಸ್ಯೆ: ದುಬಾರೆ ಗಿರಿಜನ ಹಾಡಿಯು ಕಾವೇರಿ ನದಿ ಸಮೀಪದಲ್ಲೇ ಇದ್ದು, ದೋಣಿಯ ಸಹಾಯದಿಂದ ನಂಜರಾಯಪಟ್ಟಣ ಹಾಗೂ ಕುಶಾಲನಗರಕ್ಕೆ ತೆರಳುತ್ತಿದ್ದಾರೆ. ಆದರೆ, ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಅರಣ್ಯದ ಮೂಲಕ ಮಾಲ್ದಾರೆ ಪಟ್ಟಣಕ್ಕೆ ತೆರಳಬೇಕಿದೆ. ಮಾಲ್ದಾರೆಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದ್ದು, ಸಂಚಾರಕ್ಕೆ ತೊಡಕಾಗಿದೆ. ಮನೆಗೆ ಬೇಕಾದ ಸಾಮಗ್ರಿಗಳನ್ನು ರಸ್ತೆಯ ಮೂಲಕವೇ ತರಬೇಕಾಗಿದ್ದು, ಹಾಡಿಯ ಜನರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಹಾಡಿ ನಿವಾಸಿ ಅಕ್ಕಮ್ಮ ಪ್ರತಿಕ್ರಿಯಿಸಿ, ‘ಹಲವು ಮನೆಗಳಲ್ಲಿ ಶೌಚಾಲಯವಿಲ್ಲದೇ ಹಾಡಿಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದೇವೆ. ಕೆಲವು ಮನೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ಮಾಡಿದ್ದರೂ, ಕಳಪೆಯಾಗಿದ್ದರಿಂದ ಕುಸಿದಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT