ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಟಳ ನೀಡುವ ಕಾಡಾನೆ ಸೆರೆಗೆ ಸಜ್ಜು

ವಿರಾಜಪೇಟೆಯಲ್ಲಿ 2, ಸೋಮವಾರಪೇಟೆ, ಕುಶಾಲನಗರದಲ್ಲಿ ತಲಾ 1 ಆನೆ ಸೆರೆಗೆ ಸಮ್ಮತಿ
Last Updated 10 ಡಿಸೆಂಬರ್ 2022, 6:19 IST
ಅಕ್ಷರ ಗಾತ್ರ

ಸಿದ್ದಾಪುರ: ವಿರಾಜಪೇಟೆ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಎರಡು ಕಾಡಾನೆಗಳು ಹಾಗೂ ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯಲ್ಲಿನ ತಲಾ ಒಂದು ಆನೆಗಳ ಸೆರೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ವಿರಾಜಪೇಟೆ ಅರಣ್ಯ ವ್ಯಾಪ್ತಿಯ ಸಿದ್ದಾಪುರ, ಅಮ್ಮತ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಕಾಫಿ ಸೇರಿದಂತೆ ಕೃಷಿ ಫಸಲನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಬೆಳೆಗಾರರು ಇಲಾಖೆಗೆ ದೂರು ಸಲ್ಲಿಸಿದ್ದರು. ಸರ್ಕಾರ ಕಾಡಾನೆಗಳ ಸೆರೆಗೆ ಅನುಮತಿ ನೀಡಿದ್ದು, ಇದೀಗ ಆನೆಗಳ ಸೆರೆಗೆ ಇಲಾಖೆ ಸಜ್ಜಾಗಿದೆ.

‘ಅಮ್ಮತ್ತಿ-ಸಿದ್ದಾಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಎರಡು ಕಾಡಾನೆಗಳನ್ನು ಸೆರೆ ಹಿಡಿಯಲಾಗುವುದು’ ಎಂದು ವಿರಾಜಪೇಟೆ ವಲಯ ಎಸಿಎಫ್‌ ಕೆ.ಎ ನೆಹರೂ ತಿಳಿಸಿದರು.

ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಕಾಡಾನೆಗಳು ಇರುವುದರಿಂದ ಹಾಗೂ ಈಚೆಗೆ ಆ ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ ಹಲವು ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ದುಬಾರೆಯ ಸಾಕಾನೆಗಳು ಅಲ್ಲಿಗೆ ಹೋಗಿದ್ದು, ಮುಂದಿನ ವಾರ ಅವುಗಳು ಬಂದ ನಂತರ ಅಮ್ಮತ್ತಿ ಹಾಗೂ ಸಿದ್ದಾಪುರದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿ ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿಯಲಾಗುವುದು’ ಎಂದು ಹೇಳಿದರು.

ಒಂಟಿ ಸಲಗ ಸೆರೆಗೆ ಸಜ್ಜು: ಕುಶಾಲನಗರ ವಲಯದ ಮೀನುಕೊಲ್ಲಿ ವಿಭಾಗದ ನೆಲ್ಯಹುದಿಕೇರಿ, ಅಭ್ಯತ್‌ಮಂಗಲ, ವಾಲ್ನೂರು ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಜ್ಜಾಗಿದ್ದಾರೆ.

‘ನೆಲ್ಯಹುದಿಕೇರಿ, ವಾಲ್ನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಸುತ್ತಾಡುತ್ತಿದ್ದು, ಕಾರ್ಮಿಕರು ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗಿತ್ತು. ಮನೆಯ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ಸಲಗ ದಾಳಿ ನಡೆಸಿ ಜಖಂಗೊಳಿಸಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಒಂಟಿ ಸಲಗ ಸೆರೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಒಂಟಿ ಸಲಗ ಸೆರೆಗೆ ಅನುಮತಿ ದೊರಕಿದ್ದು, ಶೀಘ್ರದಲ್ಲಿ ಸಲಗದ ಚಲನವಲನ ಗುರುತಿಸಿ ಸೆರೆ ಹಿಡಿಯಲಾಗುವುದು’ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದ್ದಾರೆ.

ಸರ್ಕಾರವು ಕೂಡ ಕಾಡಾನೆಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕಾರ್ಯಪಡೆ ರಚನೆ ಮಾಡಿ ಆದೇಶ ಹೊರಡಿಸಿತು. ಇದೀಗ ಕಾರ್ಯಪಡೆ ನೇತೃತ್ವ ವಹಿಸಿರುವ ಮಡಿಕೇರಿ ವಿಭಾಗದ ಡಿಸಿಎಫ್ ಪೂವಯ್ಯ ಮಾರ್ಗದರ್ಶನದಲ್ಲಿ ಒಂಟಿಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸಿದ್ಧತೆಗಳನ್ನು ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT