ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಲೋಕ, ಐನ್‌ಮನೆಯೇ ಆಕರ್ಷಣೆ

ಹೂವಿನಿಂದ ನಿರ್ಮಾಣವಾದ ರಾಕೆಟ್‌, ಕಾವೇರಿ ಮಾತೆ, ಕಾಫಿ ಜಗ್ಗ್‌ ಮಾದರಿ
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನಿ ನಗರಿ’ಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ವಾರ್ಷಿಕ ಫಲಪುಷ್ಪ ಪ್ರದರ್ಶನವು ಆರಂಭವಾಗಿದ್ದು, ಪ್ರವಾಸಿಗರು ಹಾಗೂ ಪುಷ್ಪ ಪ್ರಿಯರನ್ನು ಆಕರ್ಷಿಸುತ್ತಿದೆ.

ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು. ಸೋಮವಾರ ತನಕವೂ ಇಲ್ಲಿ ಹೂವಿನದ್ದೇ ಲೋಕ, ಪುಷ್ಪರಾಣಿಯರದ್ದೇ ಕಲರವ...

ರಾಜಾಸೀಟ್‌ ಒಳಕ್ಕೆ ಹೆಜ್ಜೆ ಹಾಕುತ್ತಿದ್ದಂತೆಯೇ ಕಲ್ಲಂಗಡಿಯ ಕಲಾಕೃತಿಗಳು ನಿಮ್ಮನ್ನು ಮನಸೂರೆಗೊಳಿಸಲಿವೆ. ವಿರಾಟ್‌ ಕೊಹ್ಲಿ, ಕುವೆಂಪು, ಅಭಿನಂದನ್‌, ವಾಜಪೇಯಿ, ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಎ.ಪಿ.ಜೆ.ಅಬ್ದುಲ್‌ ಕಲಾಂ, ಮಹಾತ್ಮ ಗಾಂಧೀಜಿ, ಸಿದ್ಧಗಂಗಾ ಶ್ರೀ, ಡಾ.ಬಿ.ಆರ್‌.ಅಂಬೇಡ್ಕರ್‌, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ, ಜನರಲ್‌ ತಿಮ್ಮಯ್ಯ, ಪೇಜಾವರ ಶ್ರೀ ಅವರ ಕಲಾಕೃತಿಗಳು ಮನಸೆಳೆಯುತ್ತಿವೆ. ಅಲ್ಲಿಂದ ಮುಂದಕ್ಕೆ ಹೆಜ್ಜೆ ಹಾಕಿದರೆ, ರಾಜಾಸೀಟ್‌ನಲ್ಲಿನ ಪುಷ್ಪ ವೈಭವ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತಿದೆ.

ಇಡೀ ಉದ್ಯಾನದಲ್ಲಿ 6 ಸಾವಿರ ಹೂವಿನ ಕುಂಡಗಳನ್ನು ಇಡಲಾಗಿದೆ. ಅದರಲ್ಲಿ ಚೆಂಡು, ಸೇವಂತಿಗೆ, ಮೇರಿಗೋಲ್ಡ್‌, ಸಾಲ್ವಿಯಾ, ಪಿಂಕ್ಸ್‌, ವಾಟರ್‌ಲಿಲ್ಲಿ, ಫೆಸಿಲಿಯಾ, ಡೇಲಿಯಾ, ಬಿಗೋನಿಯಾ, ಪಿಟೋನಿಯಾ ಆಸ್ಟರ್‌ ಹೂವಿನ ತಳಿಗಳು ಆಕರ್ಷಿಸುತ್ತಿವೆ. ಹೂವಿನ ರಾಶಿಯಲ್ಲಿ ರಾಜಾಸೀಟ್‌ ಮಿಂದೇಳುತ್ತಿದೆ. ಇಷ್ಟುದಿವಸ ನಿರ್ವಹಣೆ ಕೊರತೆ ಹಾಗೂ ವಿವಿಧ ತಳಿಯ ಹೂವಿನ ಕೊರತೆಯಿಂದ ಕಳೆಗುಂದಿದ್ದ ರಾಜಾಸೀಟ್‌, ಈಗ ನವವಧುವಿನಂತೆ ಸಿಂಗಾರಗೊಂಡಿದೆ.

ಐನ್‌ಮನೆ ಮಾದರಿ

ಪ್ರತಿವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಒಂದೊಂದು ಮಾದರಿ ಆಕರ್ಷಣೆ ಇರುತ್ತದೆ. ಈ ಬಾರಿ ಕೊಡಗಿನ ಐತಿಹ್ಯಕ್ಕೆ ಸಾಕ್ಷಿಯಾಗಿರುವ ಐನ್‌ಮನೆಯನ್ನು ಲಕ್ಷಾಂತರ ಹೂವಿನಿಂದ ನಿರ್ಮಿಸಲಾಗಿದೆ. ಅದು ಆಕರ್ಷಣೆಯ ಕೇಂದ್ರಬಿಂದು. ಉದ್ಯಾನಕ್ಕೆ ಬರುತ್ತಿರುವ ಅದೆಷ್ಟೋ ಪ್ರವಾಸಿಗರು ಅದರ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಇನ್ನೂ ರಾಜಾಸೀಟ್‌ನಲ್ಲೇ ಹೂವಿನಿಂದ ವಿವಿಧ ಬಗೆಯ ವಿನ್ಯಾಸಗಳು ಮೈದಳೆದು ನಿಂತಿವೆ. ಗುಲಾಬಿ ಹೂವಿನಿಂದಲೇ ಚಿತ್ತಾಕರ್ಷಕವಾಗಿ ಹೂವಿನ ಹಾರ್ಟ್‌ ಮೂಡಿಬಂದಿದೆ. ಇಸ್ರೊ ರಾಕೆಟ್‌ ಉಡಾವಣೆ ಮಾದರಿ, ಕಾಫಿ ಕಪ್‌ ಹಾಗೂ ಜಗ್ಗ್‌, ನವಜೋಡಿ ಮಾದರಿ, ಮಿಕ್ಕಿ ಮೌಸ್‌, ಧ್ಯಾನ ಸ್ಥಿತಿಯಲ್ಲಿರುವ ಸ್ವಾಮಿ ವಿವೇಕಾನಂದ... ಸೇರಿದಂತೆ ಹಲವು ಪುಷ್ಪ ಕಲಾಕೃತಿಗಳು ನೋಡುಗರ ಕಣ್ಮನ ತಣಿಸುತ್ತಿವೆ. ಪ್ರತಿ ಆಕೃತಿಯ ಮುಂದೆ ನಿಂತು ಸ್ವಂತಿ (ಸೆಲ್ಫಿ) ತೆಗೆದುಕೊಳ್ಳುವ ನೋಡುಗರು ಹೂವಿನ ಅಂದ ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಪುಷ್ಪ ವೈಭವವನ್ನು ನೋಡಲು ನೀವೇ ರಾಜಾಸೀಟ್‌ಗೆ ಬರಬೇಕು. ಸೋಮವಾರ (ಫೆ.10) ಸಂಜೆಯ ತನಕ ಫಲಪುಷ್ಪ ನಡೆಯುತ್ತಿದೆ.

ಆಹಾರ ಮೇಳ

ಇನ್ನು ಗಾಂಧಿ ಮೈದಾನದಲ್ಲಿ ಆಹಾರ ಮೇಳ ನಡೆಯುತ್ತಿದೆ. ಅಲ್ಲಿಗೂ ಶುಕ್ರವಾರ ಬೆಳಿಗ್ಗೆಯಿಂದಲೇ ಜನರು ಬರುತ್ತಿದ್ದಾರೆ. ಮಂಡ್ಯದ ಕಬ್ಬಿನ ಜೂಸ್‌ ಸೇರಿದಂತೆ ಹಲವು ಬಗೆಯ ತಿನಿಸುಗಳು ಲಭ್ಯ ಇವೆ. ಅವುಗಳು ನಿಮ್ಮ ಬಾಯಿ ರುಚಿಯನ್ನು ತಣಿಸಲಿವೆ. ತೋಟಗಾರಿಕೆ ಹಾಗೂ ಖಾಸಗಿ ನರ್ಸರಿಯಿಂದ ವಿವಿಧ ತಳಿಯ ಹೂವಿನ ಕುಂಡಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT