ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ಕಿಟ್‍: ಮನೆ ಬಾಗಿಲಿಗೆ ತಲುಪಿಸಲು ಒತ್ತಾಯ

ಕೊಡಗು ಜಿಲ್ಲಾ ಜೆಡಿಎಸ್‌ ಮುಖಂಡ ಕೆ.ಎಂ.ಗಣೇಶ್‌ ಒತ್ತಾಯ
Last Updated 27 ಮಾರ್ಚ್ 2020, 12:17 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ವೈರಸ್ ಇನ್ನಷ್ಟು ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ‘ಲಾಕ್‍ಡೌನ್’ ಆದೇಶವನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಜೊತೆಯಲ್ಲಿ ಬಡವರು ಹಾಗೂ ಕಾರ್ಮಿಕ ವರ್ಗದ ಹಸಿವು ನೀಗಿಸಲು ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ಮನೆ ಬಾಗಿಲಿಗೆ ತಲುಪಿಸಲು ಎರಡೂ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ.ಎಂ.ಬಿ.ಗಣೇಶ್‌ ಒತ್ತಾಯಿಸಿದ್ದಾರೆ.

ವೈದ್ಯಕೀಯ ಲೋಕಕ್ಕೆ ಸವಾಲೊಡ್ಡಿರುವ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಯುದ್ಧದ ರೀತಿಯಲ್ಲಿ ಹೋರಾಡುತ್ತಿದ್ದು, ಭಾರತ ಮತ್ತು ಕರ್ನಾಟಕ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಸರ್ಕಾರಗಳ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಬಡವರು ಹಾಗೂ ಕಾರ್ಮಿಕರ ಹೊಟ್ಟೆ ಹಸಿವಿನ ಬಗ್ಗೆ ಕಾಳಜಿ ತೋರದ ನಿರ್ಲಕ್ಷ್ಯ ಮನೋಭಾವವನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಸೋಂಕು ಭಾರತದಲ್ಲೂ ವ್ಯಾಪಕವಾಗಿ ಹರಡುವ ಮುನ್ಸೂಚನೆ ದೊರೆತ ಕಾರಣ ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏ.14ರ ವರೆಗೆ ಲಾಕ್‍ಡೌನ್ ಆದೇಶವನ್ನು ಹೊರಡಿಸಿದವು. ಈ ಕ್ರಮ ಕಫ್ರ್ಯೂಗೆ ಸಮ. ಜನರು ಗೃಹ ದಿಗ್ಬಂಧನದಲ್ಲಿದ್ದಾರೆ. ನಗರವಾಸಿಗಳು ಹೇಗೋ ಜಿಲ್ಲಾಡಳಿತ ನೀಡುವ ಸಮಯ ವಿನಾಯಿತಿ ಸಂದರ್ಭ ಅಗತ್ಯ ವಸ್ತುಗಳನ್ನು ಕೊಳ್ಳಬಹುದು. ಆದರೆ, ಗಾಮೀಣ ಪ್ರದೇಶದ ಬಡವರ್ಗ ಹಾಗೂ ಕಾರ್ಮಿಕರು ದಿನ ಬಳಕೆಯ ವಸ್ತುಗಳು ದೊರೆಯದೆ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಚ್ಚರಿಸಿದ್ದಾರೆ.

ಬಸ್ ಸಂಚಾರವಿಲ್ಲದೆ ಗ್ರಾಮೀಣರು ಸಂಪರ್ಕವನ್ನೇ ಕಡಿದುಕೊಂಡಿದ್ದಾರೆ. ನಗರವಾಸಿ ಬಡಜನರು ಕೂಡ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಉಪವಾಸ ಬೀಳುವ ದುಸ್ಥಿತಿ ಎದುರಾಗುತ್ತಿದೆ. ಸರ್ಕಾರ ಜನರೆಲ್ಲ ಮನೆಯಲ್ಲಿರಿ ಎಂದು ಕೇವಲ ಬಿಟ್ಟಿ ಘೋಷಣೆಗಳನ್ನು ಮಾಡುತ್ತಿದೆಯೇ ಹೊರತು 20-25 ದಿನಗಳ ಕಾಲ ಮನೆಯಲ್ಲೇ ಉಳಿದರೆ ದಿನಾ ದುಡಿದು ತಿನ್ನುವ ಕೂಲಿ ಕಾರ್ಮಿಕರು, ತಲೆ ಹೊರೆ ಕಾರ್ಮಿಕರು, ಆಟೋ ರಿಕ್ಷಾ ಮತ್ತಿತರ ವಾಹನ ಚಾಲಕರು ಹೊಟ್ಟೆಪಾಡಿಗಾಗಿ ಏನು ಮಾಡಬೇಕು ಎಂದು ಹೇಳುತ್ತಿಲ್ಲ ಎಂದಿದ್ದಾರೆ.

‘ಲಾಕ್‍ಡೌನ್’ ಘೋಷಣೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಕ್ರಮ. ಜನರು ಕೂಡ ಸರ್ಕಾರದ ಆದೇಶಕ್ಕೆ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಈ ರೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಜನ, ಬಡವರ್ಗ ಹಾಗೂ ಕಾರ್ಮಿಕರ ಬಗ್ಗೆ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಲೇಬೇಕಾಗಿದೆ. ತಕ್ಷಣ ದಿನಸಿ ಸಾಮಗ್ರಿ ಹಾಗೂ ತರಕಾರಿಯ ಕಿಟ್‍ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕ್ರಮವನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಕೇರಳ ಸರ್ಕಾರದ ಮಾದರಿಯನ್ನು ಅನುಸರಿಬಹುದಾಗಿದೆ ಎಂದು ತಿಳಿಸಿದ್ದಾರೆ.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಜಿಲ್ಲಾಡಳಿತ ನೀಡುವ ವಿನಾಯಿತಿ ಸಮಯದಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದುಕೊಳ್ಳುತ್ತವೆ. ಈ ಅಂಗಡಿಗಳಲ್ಲಿದ್ದ ದಾಸ್ತಾನು ಕೂಡ ಖಾಲಿ ಆಗುತ್ತಿದ್ದು, ದಿನದಿಂದ ದಿನಕ್ಕೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ತರಕಾರಿ ಮತ್ತು ಹಣ್ಣಿನ ಬೆಲೆ ಗಗನಕ್ಕೆ ಏರುತ್ತಿದೆ. ಇದು ಬಡವರ್ಗಕ್ಕೆ ನುಂಗಲಾರದ ತುತ್ತಾಗಿರುವುದರಿಂದ ಸರ್ಕಾರವೇ ಮನೆ ಬಾಗಿಲಿಗೆ ಸಾಮಗ್ರಿಗಳನ್ನು ನೀಡುವುದು ಸೂಕ್ತ. ಇದರಿಂದ ‘ಲಾಕ್‍ಡೌನ್’ ಆದೇಶ ಉಲ್ಲಂಘನೆ ಆಗುವುದು ತಪ್ಪುತ್ತದಲ್ಲದೆ ಜನ ರಸ್ತೆಗಿಳಿಯುವುದೂ ನಿಯಂತ್ರಣಕ್ಕೆ ಬರುತ್ತದೆ ಎಂದು ಕೆ.ಎಂ.ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT