ಶನಿವಾರ, ಫೆಬ್ರವರಿ 29, 2020
19 °C
ಪರಿಸರ ಪ್ರೇಮಿಗಳ ಆರೋಪ, ಲಂಟಾನ ಗಿಡಗಳಿಗೆ ಹಬ್ಬಿದ ಬೆಂಕಿ: ಅಧಿಕಾರಿಗಳ ಸ್ಪಷ್ಟನೆ

ಬೆಂಕಿರೇಖೆ ನಿರ್ಮಿಸುವ ವೇಳೆ ಮರಗಳಿಗೆ ಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಹುಣಸೂರು ವನ್ಯಜೀವಿ ವಿಭಾಗದ ಆನೆಚೌಕೂರು ಮೀಸಲು ಅರಣ್ಯ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಹುಲ್ಲು, ಗಿಡಗಳಿಗೆ ಬೆಂಕಿ ಇಟ್ಟಿದ್ದಾರೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ತಿತಿಮತಿ ಅಳ್ಳೂರು ಆನೆಚೌಕೂರು ನಡುವಿನ ಹುಣಸೂರು ವಿರಾಜಪೇಟೆ ಅಂತರಾಜ್ಯ ಹೆದ್ದಾರಿ ಹಾಗೂ ಆನೆಚೌಕೂರು ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಉದ್ದಕ್ಕೂ ನಾಗರಹೊಳೆ ವನ್ಯಜೀವಿ ವಿಭಾಗದ ಅರಣ್ಯದಲ್ಲಿ 30 ಮೀಟರ್‌ನಷ್ಟು ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಮರಗಳನ್ನು ಕಡಿದು ಹಾಕಲಾಗಿದೆ. ಇಷ್ಟೇ ಅಲ್ಲದೆ ಒಣಗಿದ ಮರಗಳಿಗೆ ಬೆಂಕಿ ಹಾಕಿ ಸುಡಲಾಗಿದೆ. ಈ ಬೆಂಕಿಯ ರಭಸಕ್ಕೆ ಅರಣ್ಯದಂಚಿನ ಇತರ ಗಿಡಮರಗಳು ಸುಟ್ಟು ಕರಕಲಾಗಿವೆ. ಇದರ ಜತೆಗೆ ಕೆಲವು ಕಡೆ ಮೊಳಕೆ ಒಡೆದಿದ್ದ ಬಿದಿರು, ಹಸಿರು ಹುಲ್ಲನ್ನು ಜೆಸಿಬಿ ಬಳಸಿ ಬೇರು ಸಮೇತ ಕಿತ್ತು ಹಾಕಲಾಗಿದೆ ಎಂದು ಪರಿಸರ ಪ್ರೇಮಿ ಕೃಷ್ಣ ಚೈತನ್ಯ ದೂರಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ನಾಗರಹೊಳೆ ವನ್ಯಜೀವಿ ವಿಭಾಗ ಎಸಿಎಫ್ ಪ್ರಸನ್ನಕುಮಾರ್, ‘ಬೆಂಕಿಯಿಂದ ಅರಣ್ಯವನ್ನು ಕಾಪಾಡುವುದಕ್ಕಾಗಿ ಬೆಂಕಿ ರೇಖೆ ನಿರ್ಮಿಸಲು ಹೆದ್ದಾರಿ ಬದಿಯ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ಇದರಿಂದ ಯಾವುದೇ ಮರಗಳಿಗೆ ಅಪಾಯವಾಗಿಲ್ಲ. ಒಂದು ವೇಳೆ ಅಪಾಯವಾಗಿದ್ದರೆ ಪರಿಶೀಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ನಾಗರಹೊಳೆ ವಿಶ್ವದಲ್ಲಿಯೇ ಅತಿಹೆಚ್ಚು ಜೀವ ವೈವಿಧ್ಯವನ್ನು ಹೊಂದಿರುವ ಅರಣ್ಯ ತಾಣ. ಇದು ಹುಲಿ ಸಂರಕ್ಷಿತ ಪ್ರದೇಶವು ಕೂಡ. ಇಂತಹ ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ರೇಖೆ ನಿರ್ಮಿಸುವ ಕಾರ್ಯದಲ್ಲಿ ಅರಣ್ಯ ಗಿಡಮರಗಳಿಗೆ ಕಂಟಕವಾಗಿದ್ದಾರೆ. ತಪ್ಪು ಮಾಡಿದ ಸಾಮಾನ್ಯ ಜನರ ಮೇಲೆ ಕಠಿಣ ಕ್ರಮಕೈಗೊಳ್ಳುವ ಅರಣ್ಯ ಇಲಾಖೆ ತಮ್ಮ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಚೈತನ್ಯ ಆಗ್ರಹಿಸಿದ್ದಾರೆ.

ನಾಗರಹೊಳೆ ಅರಣ್ಯದಲ್ಲಿ ಸಮೃದ್ಧಿಯಾಗಿ ಬೆಳೆದಿದ್ದ ಬಿದಿರು ಒಣಗಿ 10 ವರ್ಷಗಳೇ ಸಂದಿವೆ. ಆದರೆ, ಬಿದಿರು ಮತ್ತೆ ತಲೆ ಎತ್ತಿಲ್ಲ. ಆನೆಗಳ ಪ್ರಮುಖ ಆಹಾರವಾಗಿದ್ದ ಬಿದಿರನ್ನು ಮತ್ತೆ ಬೆಳೆಸಲು ಅರಣ್ಯ ಇಲಾಖೆಯೂ ಆಸಕ್ತಿ ತೋರುತ್ತಿಲ್ಲ. ವಯಸ್ಸಾದ ಬಿದಿರಿಗೆ ಕಟ್ಟೆ ಬಂದು 40 ಇಲ್ಲವೆ 50 ವರ್ಷಗಳಿಗೊಮ್ಮೆ ಒಣಗುವುದು ಸಹಜ. ಹೀಗೆ ಒಣಗಿದ ಬಿದಿರುವ ಮೂರು ವರ್ಷಗಳಲ್ಲಿ ಮತ್ತೆ ಮೊಳೆತು ಎಂದಿನಂತೆ ಬೆಳೆಯುತ್ತಿತ್ತು. ಆದರೆ, ಈಗ ಆ ರೀತಿ ಆಗುತ್ತಿಲ್ಲ. ಬಿದಿರು ಬೆಳೆಯದೇ ಇರುವುದರಿಂದ ಆನೆಗಳು ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದು ಬಲಿಯಾಗುತ್ತಿವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಪರಿಸರ ಪ್ರಿಯರದು.

‘ಯಾವ ಮರವೂ ಸುಟ್ಟಿಲ್ಲ’
ಅರಣ್ಯವನ್ನು ಕಾಳ್ಗಿಚ್ಚಿನಿಂದ ರಕ್ಷಿಸುವುದಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳನ್ನು ಕಡಿದು ಬೆಂಕಿ ರೇಖೆ ನಿರ್ಮಿಸಲಾಗಿದೆ. ಒಣಗಿದ ಲಂಟಾನ ಸುಡುವಾಗ ಕೆಲವು ಮರಗಳ ಬುಡಗಳಿಗೆ ಮಸಿ ಹಿಡಿದಿದೆಯೇ ಹೊರತು ಯಾವ ಮರಗಳೂ ಸುಟ್ಟು ಹೋಗಿಲ್ಲ. ಅರಣ್ಯ ಇಲಾಖೆ ಇರುವುದೇ ಕಾಡನ್ನು ರಕ್ಷಿಸುವುದಕ್ಕಾಗಿ ಎಂದು ಆನೆಚೌಕೂರು ಮೀಸಲು ಅರಣ್ಯದ ಆರ್‌ಎಫ್‌ಒ ಹನುಮಂತರಾಜ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು