ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ‘ಗಡಿ ಉತ್ಸವ’ಕ್ಕೆ ಸಜ್ಜಾಗುತ್ತಿದೆ ಕರಿಕೆ

ಜ. 27ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೂ ನಡೆಯಲಿದೆ ವೈವಿಧ್ಯಮಯ ಕಾರ್ಯಕ್ರಮಗಳು
Published 24 ಜನವರಿ 2024, 7:00 IST
Last Updated 24 ಜನವರಿ 2024, 7:00 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕೇರಳ ಗಡಿಭಾಗವಾದ ಕರಿಕೆ ಗ್ರಾಮದಲ್ಲಿ ಜ. 27ರಂದು ‘ಗಡಿ ಉತ್ಸವ’ ನಡೆಯಲಿದ್ದು, ಇದಕ್ಕಾಗಿ ಗ್ರಾಮ ಸಜ್ಜಾಗುತ್ತಿದೆ. ಉತ್ಸವವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದು, 2 ವಿಷಯಗಳನ್ನು ಕುರಿತು ವಿಚಾರಗೋಷ್ಠಿ ನಡೆಯಲಿದೆ. ಸಾಹಿತಿ ಅರವಿಂದ ಚೊಕ್ಕಾಡಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲ್ಲೂಕು ಘಟಕ, ಭಾಗಮಂಡಲ ಹೋಬಳಿ ಘಟಕ ಹಾಗೂ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುವ ಈ ‘ಗಡಿ ಉತ್ಸವ’ ಕುರಿತ ಆಹ್ವಾನ ಪತ್ರಿಕೆಯನ್ನು ಇಲ್ಲಿನ ಪತ್ರಿಕಾಭವನದಲ್ಲಿ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಕರಿಕೆಯ ಸರ್ವಾಂಗೀಣ ಪ್ರಗತಿಗಾಗಿ ಸರ್ಕಾರದ ಗಮನ ಸೆಳೆಯಲು ಈ ಉತ್ಸವ ಆಯೋಜಿಸಲಾಗುತ್ತಿದೆ. ಅಭಿವೃದ್ಧಿ ಕುರಿತು ಉತ್ಸವದಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಅವರು ಹೇಳಿದರು

ಕರಿಕೆ– ಭಾಗಮಂಡಲ ರಸ್ತೆ ಅಭಿವೃದ್ಧಿಯಾಗಿಲ್ಲ. ಇದರಿಂದ ಇಲ್ಲಿನ ವಾಹನ ಸವಾರರು ಪಡಿಪಾಟೀಲು ಅನುಭವಿಸುತ್ತಿದ್ದಾರೆ. ಕರಿಕೆ ಗ್ರಾಮಕ್ಕೊಂದು ಸುಸಜ್ಜಿತವಾದ ಆಸ್ಪತ್ರೆ ಬೇಕು, ಸಮುದಾಯ ನಿರ್ಮಾಣವಾಗಬೇಕು, ಹಕ್ಕುಪತ್ರಗಳ ವಿತರಿಸಬೇಕಿದೆ. ಇಂತಹ ಅಭಿವೃದ್ಧಿ ಕುರಿತ ಚರ್ಚೆಗಳು ಉತ್ಸವದಲ್ಲಿ ನಡೆಯಲಿದೆ ಎಂದರು.

‘ಗಡಿ ಉತ್ಸವ’ದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್ ಮಾತನಾಡಿ, ‘ಕರಿಕೆ ರಾಜ್ಯದ ಪಾಲಿಗೆ ಗಡಿ ಭಾಗವಾದರೆ, ಅಲ್ಲಿನ ನಿವಾಸಿಗಳಾದ ನಮಗೆ ಹೆಬ್ಬಾಗಿಲು ಎನಿಸಿದೆ. ಈ ಹೆಬ್ಬಾಗಿಲು ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ’ ಎಂದು ಹೇಳಿದರು.

ಹೊಸ ಸಾಂಸ್ಕೃತಿಕ ತಲೆಮಾರನ್ನೇ ರೂಪಿಸುವಂತಹ ಪ್ರೀತಿಯ ಸೆಳೆಗಳು ಈ ಉತ್ಸವದಲ್ಲಿ ಸೃಷ್ಟಿಯಾಗುವ ವಿಶ್ವಾಸ ನಮ್ಮದು. ಇದಕ್ಕಾಗಿ ಇಡೀ ಗ್ರಾಮ ಸಿದ್ಧಗೊಳ್ಳುತ್ತಿದೆ ಎಂದು ಹೇಳಿದರು.

ಉತ್ಸವ ಉದ್ಘಾಟಿಸಲಿರುವ ಸಚಿವ ಎನ್.ಎಸ್.ಭೋಸರಾಜು 2 ಪ್ರಮುಖ ವಿಷಯಗಳನ್ನು ಕುರಿತು ವಿಚಾರಗೋಷ್ಠಿ ಸಾಹಿತಿ ಅರವಿಂದ ಚೊಕ್ಕಾಡಿ ಅವರಿಂದ ಸಮಾರೋಪ ಭಾಷಣ

ಬೆಳಿಗ್ಗೆ 8.30ರಿಂದ ರಾತ್ರಿಯವರೆಗೂ ನಿರಂತರ ಕಾರ್ಯಕ್ರಮ ‘ಎಳ್ಳುಕೊಚ್ಚಿ– ಕರಿಕೆಯ ಬೇಕಲ್ ಉಗ್ಗಪ್ಪ ನಗರದಲ್ಲಿ ಜ. 27ರಂದು ಬೆಳಿಗ್ಗೆ 8.30ಕ್ಕೆ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ರಾಷ್ಟ್ರ ಧ್ವಜಾರೋಹಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವ ಆರಂಭವಾಗಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ತಿಳಿಸಿದರು. ಬೆಳಿಗ್ಗೆ 9ಕ್ಕೆ ಕೆಎನ್‌ಎಂ ಶಾಲೆಯಿಂದ ಎಳ್ಳುಕೊಚ್ಚಿಯವರೆಗೆ ನಡೆಯುವ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು ಹೆಜ್ಜೆ ಹಾಕಲಿದ್ದಾರೆ. ವಿವಿಧ ಜನಪದ ಕಲಾತಂಡಗಳು ಸ್ತಬ್ಧಚಿತ್ರಗಳು ಐತಿಹಾಸಿಕ ಪೌರಾಣಿಕ ವೇಷಧಾರಿಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮಾತನಾಡಿ ‘ಉತ್ಸವವನ್ನು ಬೆಳಿಗ್ಗೆ 10.30ಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅಧ್ಯಕ್ಷತೆ ವಹಿಸಲಿದ್ದು ಗಡಿ ಸಾಂಸ್ಕೃತಿಕ ಉತ್ಸವ ಆಚರಣೆ ಸ್ವಾಗತ ಸಮಿತಿಯ ಮಹಾಪೋಷಕ ಟಿ.ಪಿ.ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ’ ಎಂದು ಹೇಳಿದರು. ಊಟದ ವಿರಾಮದಲ್ಲಿ ಕರಿಗೆ ಗ್ರಾಮ ಪಂಚಾಯಿತಿ ಸದಸ್ಯೆಯರಾದ ಸುಮಾ ವಿನೋದ್ ದೀಪಿಕಾ ದಯಾನಂದ ಅವರಿಂದ ಕನ್ನಡ ಗೀತ ಗಾಯನವಿದ್ದು ನಂತರ ಮಧ್ಯಾಹ್ನ 2.30ಕ್ಕೆ ಚಿಂತಕ ಬೇಕಲ್ ರಮಾನಾಥ ಅವರು ‘ಕರಿಕೆ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಮಡಿಕೇರಿಯ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರು ‘ಗಡಿನಾಡಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ’ ಕುರಿತು ವಿಷಯ ಮಂಡಿಸಲಿದ್ದಾರೆ ಎಂದರು. ಸಂಜೆ 4 ಗಂಟೆಗೆ ರೇವತಿ ರಮೇಶ್ ಅವರು ಗಡಿಭಾಗದ ಸಮಸ್ಯೆಗಳ ಕುರಿತು ನಿರ್ಣಯ ಮಂಡಿಸಲಿದ್ದಾರೆ. ಸಂಜೆ 4.15ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ. ಸಂಜೆ 5 ಗಂಟೆಗೆ ಸಾಹಿತಿ ಅರವಿಂದ ಚೊಕ್ಕಾಡಿ ಅವರು ಸಮಾರೋಪ ಭಾಷಣ ಮಾಡಲಿದ್ದು ಸಂಜೆ 6 ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮ ಇರಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT