ಶನಿವಾರ, ಡಿಸೆಂಬರ್ 3, 2022
21 °C
ಕುಶಾಲನಗರದಲ್ಲಿ 12ರಂದು ಭವ್ಯ ರಥೋತ್ಸವ; 16ರಂದು ಕಾವೇರಿ ನದಿಯಲ್ಲಿ ತೆಪ್ಪೋತ್ಸವ

ಆದಿಪೂಜಿತನ ರಥೋತ್ಸವಕ್ಕೆ ಭರದ ಸಿದ್ಧತೆ

ರಘುಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಹಾಗೂ ಉತ್ಸವ ನ. 12ರಂದು ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಸಿದ್ಧತಾ ಕಾರ್ಯಗಳು ನಡೆದಿದ್ದು, ಭವ್ಯ ಉತ್ಸವಕ್ಕೆ ದೇಗುಲ ಅಣಿಯಾಗಿದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ನೇತೃತ್ವದಲ್ಲಿ ಸಮಿತಿಯ ಸದಸ್ಯರು ರಥೋತ್ಸವಕ್ಕಾಗಿ ಸಕಲ ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ವಾರ್ಷಿಕ ರಥೋತ್ಸವದ ಅಂಗವಾಗಿ ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅನೇಕ ವರ್ಷಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ದ ಈ ಜಾತ್ರೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಕೊಡಗು ಜಿಲ್ಲೆಯ ಸಾವಿರಾರೂ ಜನರು ಪಾಲ್ಗೊಳ್ಳಲಿದ್ದಾರೆ.

‘ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣವನ್ನು ಶುಚಿಗೊಳಿಸಲಾಗುತ್ತಿದೆ. ಯಾವುದೆ ವಿಘ್ನವಿಲ್ಲದೆ ವಿಜೃಂಭಣೆಯಿಂದ ರಥೋತ್ಸವ ಕಾರ್ಯ ನೆರವೇರಿಸಲು ಸಲಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ.

ನ. 3ರಂದು ಕಾರ್ತೀಕ ದಟ್ಟೋತ್ಸವ ನಡೆದಿದ್ದು, 10ರಂದು ಮೂಷಿಕ ವಾಹನ ಉತ್ಸವ, 11ರಂದು ಚಂದ್ರಬಿಂಬೋತ್ಸವ, 12ರಂದು ಪಲ್ಲಕ್ಕಿ ಉತ್ಸವ, 13ರಂದು ಮಂಟಪೋತ್ಸವ, 14ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 15ರಂದು ಅನ್ದೋಲಿಕೋತ್ಸವ, 16ರಂದು ಕಾವೇರಿ ನದಿಯಲ್ಲಿ ತೆಪ್ಪೋತ್ಸವ ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ರಥೋತ್ಸವದ ಅಂಗವಾಗಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಗಾಯತ್ರಿ ಕಲ್ಯಾಣ‌ ಮಂಟಪದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ರಥದ ವಿಶೇಷತೆ

22 ಅಡಿ ಎತ್ತರದ ರಥವನ್ನು ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸೋಮವಾರಪೇಟೆಯ ಬೀಟಿಕಟ್ಟೆಯ ಶಿಲ್ಪಿ ಸಿ.ಮಂಜುನಾಥ್ ಆಚಾರ್ಯ ನೇತೃತ್ವದಲ್ಲಿ 12 ಶಿಲ್ಪಿಗಳು ಒಂದು ವರ್ಷ ರಥವನ್ನು ಕೆತ್ತಿದ್ದಾರೆ.

ಹೊಯ್ಸಳರ ಕಲಾ ಶೈಲಿ ಹೋಲುವಂತಿರುವ ಕೆತ್ತನೆಗಳಿದ್ದು, ಆಧುನಿಕಯ ಮೆರುಗು ನೀಡಲಾಗಿದೆ. ರಥದ ಬಹುಭಾಗಕ್ಕೆ ಕಿರಾಲ್ ಭೋಗಿ ಮರ ಬಳಸಲಾಗಿದ್ದು, ಚಕ್ರಗಳನ್ನು ಹೆಬ್ಬಲಸಿನ ಮರಗಳಿಂದ ಮಾಡಲಾಗಿದೆ. ಸೂಕ್ಷ್ಮ ಕೆತ್ತನೆ ಹಾಗೂ ವಾಸ್ತುವಿಗೂ ಯೋಗ್ಯವಾದ ಸಾಗುವಾನಿ ಮರದಿಂದ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದೆ. ಒಟ್ಟು 4 ಅಂತಸ್ತುಗಳಿವೆ. ಒಟ್ಟು72 ದೇವರ ವಿಗ್ರಹಗಳು ರಥದಲ್ಲಿ ಇವೆ.

ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸರಾವ್, ಖಜಾಂಜಿ ಎಂ.ಕೆ.ದಿನೇಶ್, ನಿರ್ದೇಶಕರಾದ ಪುಂಡಾರೀಕಾಕ್ಷ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್, ಕಾಯಂ ಆಹ್ವಾನಿತ ಟಿ.ಆರ್.ಶರವಣಕುಮಾರ್, ವಿಶೇಷ ಆಹ್ವಾನಿತರಾದ ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.