ಸೋಮವಾರ, ಸೆಪ್ಟೆಂಬರ್ 26, 2022
22 °C
ನೂರಕ್ಕೂ ಅಧಿಕ ಕಡೆ ವಿನಾಯಕ ಮೂರ್ತಿಯ ಪ್ರತಿಷ್ಠಾಪನೆ

ಕೊಡಗಿನಲ್ಲಿ ವಿಜೃಂಭಣೆಯ ಬೆನಕನ ಆರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ವಿಜೃಂಭಣೆಯಿಂದ ಗಣಪತಿ ಹಬ್ಬ ಆಚರಿಸಲಾಯಿತು. ನೂರಕ್ಕೂ ಅಧಿಕ ಕಡೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಆರಾಧಿಸಲಾಯಿತು.

ಐತಿಹಾಸಿಕ ಕೋಟೆಯಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಹೋಮ, ಹವನಗಳು ನಡೆದವು. ವಿವಿಧ ಬಗೆಯ ಅಭಿಷೇಕಗಳ ನಂತರ ಹಲವು ಬಗೆಯಲ್ಲಿ ಮೂರ್ತಿಯನ್ನು ಅಲಂಕರಿಸಲಾಗಿತ್ತು. ನೂರಾರು ಮಂದಿ ಭಕ್ತರು ಇಲ್ಲಿ ಈಡುಗಾಯಿ ಒಡೆದು ಹರಕೆ ಸಲ್ಲಿಸಿದರು.

ಮಹದೇವಪೇಟೆಯಲ್ಲಿ ವಿನಾಯಕ ಯುವಕ ಮಿತ್ರ ಮಂಡಲಿಯು 43ನೇ ವರ್ಷದ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿತು. ಭವ್ಯವಾಗಿ ಅಲಂಕರಿಸಿದ್ದ ಮಂಟಪದಲ್ಲಿ ಗಣೇಶಮೂರ್ತಿಯನ್ನು ಇಟ್ಟು ವಿಜೃಂಭಣೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಶಾಂತಿನಿಕೇತನ, ಕೆಎಸ್‌ಆರ್‌ಟಿಸಿ ಬಸ್ ಡಿಪೊ, ಚೈನ್ ಗೇಟ್, ಕಾನ್ವೆಂಟ್ ಜಂಕ್ಷನ್, ಎ.ವಿ.ಶಾಲೆ ಸಮೀಪದ ಸ್ವಸ್ಥಿಕ್ ಸಮಿತಿ, ಬಸ್ ನಿಲ್ದಾಣ, ನಗರಸಭೆ, ಸೆಸ್ಕ್ ಹೀಗೆ ಅನೇಕ ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಗಮನ ಸೆಳೆಯಿತು. ಹಲವು ಗಣೇಶೋತ್ಸವ ಸಮಿತಿಯವರು ತಾವು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಬುಧವಾರ ರಾತ್ರಿ ಮೆರವಣಿಗೆಯ ಮೂಲಕ ವಿಸರ್ಜಿಸಿದರು.

ಹಲವೆಡೆ ಅನ್ನದಾನಗಳು ನಡೆದರೆ, ಮತ್ತೆ ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಓಂಕಾರೇಶ್ವರ ದೇಗುಲ, ಚೌಡೇಶ್ವರಿ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು