ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸಾಧಕಿಯರೆನಿಸಿದ ಗೋಣಿಕೊಪ್ಪಲಿನ ಅನ್ನಪೂರ್ಣೆಯರು

Published 8 ಮಾರ್ಚ್ 2024, 7:24 IST
Last Updated 8 ಮಾರ್ಚ್ 2024, 7:24 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅಡುಗೆ ಕೋಣೆಗೆ ಸೀಮಿತರಾಗಿದ್ದ ಮಹಿಳೆ ಇಂದು ನಡು ಮನೆಗೂ ಬಂದಿದ್ದಾರೆ. ಊಟ ಬಡಿಸುತ್ತಿದ್ದಾರೆ. ಕ್ಯಾಸ್ ಕೌಂಟರ್‌ನಲ್ಲಿ ಕುಳಿತು ಹಣ ಎಣಿಸುತ್ತಿದ್ದಾರೆ. ಮಾರುಕಟ್ಟೆಗೆ ತೆರಳಿ ಸರಕು ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.

ಈ ಎಲ್ಲ ವ್ಯವಹಾರ ಕಂಡು ಬರುತ್ತಿರುವುದು ಗೋಣಿಕೊಪ್ಪಲು ಪಟ್ಟಣದಲ್ಲಿರುವ ವನಿತಾ ಮೆಸ್ ಮತ್ತು ವಿಮೆನ್ಸ್ ಕಿಚನ್ ಹೆಸರಿನ ಹೋಟೆಲ್‌ಗಳಲ್ಲಿ. ಪಟ್ಟಣ ಮೈಸೂರು ರಸ್ತೆಯಲ್ಲಿರುವ ವನಿತಾ ಮೆಸ್ ಸಂಪೂರ್ಣವಾಗಿ ಮಹಿಳೆಯರಿಂದಲೇ ನಡೆಯುತ್ತಿದೆ.

ಇಲ್ಲಿ ಮೂವರು ಸಹೋದರಿಯರು ಸೇರಿ ಅಡುಗೆ ಮಾಡಿಕೊಂಡು, ತಾವೇ ಬಡಿಸುತ್ತಾ, ಕ್ಯಾಶ್ ತೆಗೆದುಕೊಳ್ಳುತ್ತಾ ಮೆಸ್ ನಡೆಸುತ್ತಿದ್ದಾರೆ. ಇವರಿಗೆ ಸಹಾಯಕರಾಗಿ ಉಳಿದ ಇಬ್ಬರು ಮಹಿಳೆಯರು ಹೊರಗಿನವರಿದ್ದಾರೆ. ಮೆಸ್ ನಡೆಸುತ್ತಿರುವ ಮೂವರು ಮಹಿಳೆಯರು ಒಂದೇ ತಾಯಿ ಮಕ್ಕಳು, ಹಿರಿಯಕ್ಕ ಪ್ರೇಮಾ, ಎರಡನೆಯವರು ವತ್ಸಲಾ, ಮೂರನೇಯವರು ಶೋಭಾನ. ಮೂವರಿಗೂ ಮದುವೆ ಆಗಿದೆ. ಮೂವರಿಗೂ ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಪತಿಯಂದಿರು ಬೇರೆ ಕೆಲಸದಲ್ಲಿ ತೊಡಗಿದ್ದಾರೆ. ಮಲೆಯಾಳಿ ಮಾತೃಭಾಷೆಯವರಾದ ಇವರು ಅಷ್ಟೇ ಚೆನ್ನಾಗಿ ಕನ್ನಡವನ್ನೂ ಮಾತನಾಡುತ್ತಾರೆ.

ಕಿರಿಯ ತಂಗಿ ಶೋಭಾನ ಸ್ಥಳೀಯ ಕಾವೇರಿ ಕಾಲೇಜಿನಲ್ಲಿ ಪದವಿ ಪಡೆದಿದ್ದು. ಉಳಿದ ಇಬ್ಬರು 10ನೇ ತರಗತಿವರೆಗೆ ಓದಿದ್ದಾರೆ. ಈ ಮೂವರು ಸಹೋದರಿಯರು ಗೋಣಿಕೊಪ್ಪಲು, ಪೊನ್ನಂಪೇಟೆ, ಚೆನ್ನಂಗೊಲ್ಲಿಯಲ್ಲಿ ನೆಲೆಸಿದ್ದಾರೆ. ಶೋಭಾನ ಪತಿ ಸೇನೆಯಲ್ಲಿದ್ದಾರೆ. ಗಂಡಂದಿರು ದುಡಿಯುತ್ತಾರೆ ಎಂದು ಈ ಸಹೋದರಿಯರು ಕೈ ಕಟ್ಟಿ ಮನೆಯಲ್ಲಿ ಕೂರಲಿಲ್ಲ. ಒಟ್ಟಿಗೆ ಮಾತನಾಡಿಕೊಂಡು ತಾವೇ ಅಡುಗೆ ಮಾಡಿ, ಬಡಿಸಿ ಒಂದಷ್ಟು ಆದಾಯ ಗಳಿಸುವ ಮಾರ್ಗವನ್ನೇಕೆ ಕಂಡುಕೊಳ್ಳಬಾರದು ಎಂದು ಚಿಂತಿಸಿ ಮೆಸ್ ನಡೆಸುವ ಕಾಯಕಕ್ಕೆ ಮುಂದಾದರು.

ಎರಡು ವರ್ಷಗಳ ಹಿಂದೆ ಗೋಣಿಕೊಪ್ಪಲಿನ ಮುಖ್ಯ ರಸ್ತೆ ಬದಿಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅದಕ್ಕೆ ವನಿತಾ ಮೆಸ್ (ವನಿತೆಯರ ಊಟದ ಮನೆ) ಎಂದು ಹೆಸರು ಕೊಟ್ಟು ಮೆಸ್ ಆರಂಭಿಸಿಯೇ ಬಿಟ್ಟರು. ಈಗ ಅಲ್ಲಿ ಬಿಡುವಿಲ್ಲದ ಕೆಲಸ. ಶುಚಿ ಹಾಗೂ ರುಚಿ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಕೈತುಂಬ ಹಣವನ್ನೂ ಸಂಪಾದಿಸುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 6 ಗಂಟೆ ತೆರೆಯುವ ಮೆಸ್‌ನಲ್ಲಿ ಬೆಳಿಗ್ಗೆ ಕೇರಳದ ಪತ್ತಲ್, ನೂಪುಟ್ಟು, ಇಡ್ಲಿ, ದೋಸೆ ಜತೆಗೆ ಬಟಾಣಿ, ಮೀನು, ಕಡಲೆ, ಹಸಿರುಕಾಳು ಸಾಂಬಾರಿನ ತಿನಿಸುಗಳಿರುತ್ತವೆ. ಮಧ್ಯಾಹ್ನ, ಕುಸಲಕ್ಕಿ ಮತ್ತು ಬೆಳತಕ್ಕಿ ಅನ್ನ, ಮೀನು ಫ್ರೈ ಹಾಗೂ ತರಕಾರಿ ಸಾಂಬಾರು ಇರುತ್ತದೆ. ಬಾಳೆ ಎಲೆಯಲ್ಲಿ ಊಟ ಬಡಿಸುವ ಈ ವನಿತೆಯರ ಕೈ ರುಚಿಗಾಗಿಯೇ ಹಸಿದವರು ದೂರದಿಂದಲೂ ಬಂದು ಊಟ ಮಾಡಿ ಸಂತೃಪ್ತಿರಾಗಿ ತೆರಳುತ್ತಾರೆ. ದರವೂ ಕೂಡ ದುಬಾರಿ ಇಲ್ಲ.

ತಲೆಗೆ ಟೊಪ್ಪಿ ಧರಿಸಿಕೊಂಡು ಸಮವಸ್ತ್ರ ತೊಟ್ಟು ಪ್ರೀತಿಯಿಂದ ಬಡಿಸುವ ಇವರ ಕೈ ಊಟವನ್ನು ಮತ್ತೊಮ್ಮೆ ಊಟ ಮಾಡಬೇಕು ಎನ್ನಿಸುತ್ತದೆ ಹಸಿದವರಿಗೆ.

‘ನಾವು ಮಾಡುವ ಕೆಲಸಕ್ಕೆ ತಮ್ಮ ಯಜಮಾನರ ಸಂಪೂರ್ಣ ಸಹಕಾರ ಇದೆ. ಇದರಿಂದ ಮನೆ ನಡೆಸುವುದಕ್ಕೆ ಒಂದಷ್ಟು ಆದಾವೂ ಬರುತ್ತಿದೆ. ಮಕ್ಕಳೆಲ್ಲ ಓದಿ ಅವರೂ ದುಡಿಯುತ್ತಿದ್ದಾರೆ’ ಎಂದು ಹೇಳುವ ಶೋಭಾನ ಅವರ ಮಾತಿನಲ್ಲಿ ಒಂದು ರೀತಿಯ ಸಂತೃಪ್ತ ಭಾವವಿದೆ.

ಇದೇ ರೀತಿ ಪಟ್ಟಣದ ಹರೀಶ್ಚಂದ್ರಪುರದ ಮುಖ್ಯ ರಸ್ತೆ ಬಳಿ ಮಹಿಳೆಯರೇ ಸೇರಿರುವ ವಿಮೆನ್ಸ್ ಕಿಚನ್ ಹೆಸರಿನ ಹೋಟೆಲ್ ಒಂದಿದೆ. 6 ತಿಂಗಳ ಹಿಂದೆ ಆರಂಭಗೊಂಡಿರುವ ಹೋಟೆಲ್‌ನಲ್ಲಿ ಮಾಲೀಕ ಮಾತ್ರ ಪುರುಷ. ಉಳಿದವರೆಲ್ಲ ಮಹಿಳೆಯರು.

ವನಿತಾ ಮೆಸ್
ವನಿತಾ ಮೆಸ್
ಗೋಣಿಕೊಪ್ಪಲು ಹರಿಶ್ಚಂದ್ರಪುರ ಮುಖ್ಯ ರಸ್ತೆಯಲ್ಲಿರುವ ವಿಮೆನ್ಸ್ ಕಿಚನ್‌ನ ಮಹಿಳೆಯರು ತಾವು ತಯಾರು ಮಾಡಿದ ಅಡುಗೆಯೊಂದಿಗೆ
ಗೋಣಿಕೊಪ್ಪಲು ಹರಿಶ್ಚಂದ್ರಪುರ ಮುಖ್ಯ ರಸ್ತೆಯಲ್ಲಿರುವ ವಿಮೆನ್ಸ್ ಕಿಚನ್‌ನ ಮಹಿಳೆಯರು ತಾವು ತಯಾರು ಮಾಡಿದ ಅಡುಗೆಯೊಂದಿಗೆ
ವಿಮೆನ್ಸ್ ಕಿಚನ್
ವಿಮೆನ್ಸ್ ಕಿಚನ್

ತವರೂರು ಕೇರಳದ ಪ್ರೇರಣೆ...

ನಮ್ಮ ತಾಯಿ ಮನೆ ಕೇರಳ. ಅಲ್ಲಿ ಅನೇಕ ಮೆಸ್ ಮತ್ತು ಹೋಟೆಲ್‌ಗಳನ್ನು ಮಹಿಳೆಯರೇ ನಡೆಸುತ್ತಾರೆ. ಇದರಿಂದ ಪ್ರೇರಣೆಗೊಂಡ ಅಕ್ಕತಂಗಿಯರು ಮಾತನಾಡಿಕೊಂಡು ಎರಡು ವರ್ಷಗಳ ಹಿಂದೆ ಮೆಸ್ ಆರಂಭಿಸಿದೆವು. ಇದರಿಂದ ಆರ್ಥಿಕವಾಗಿ ಅನುಕೂಲವೇ ಆಗುತ್ತಿದೆ. ಸಂಜೆ 6 ಗಂಟೆ ಹೊತ್ತಿಗೆ ಮೆಸ್ ಮುಚ್ಚಿ ಮನೆಗೆ ಹೋದರೆ ಮತ್ತೆ ಬೆಳಿಗ್ಗೆ ಬಂದು ತೆರೆಯುತ್ತೇವೆ. ಇದರಿಂದ ಸಂತೋಷವೂ ಇದೆ. ಶೋಭಾನ ಕಿರಿಯ ಸಹೋದರಿ. ವನಿತಾ ಮೆಸ್ ಮಾಲಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT