ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನೆಲ್ಲೆಡೆ ಗಣೇಶ ನಾಮ ಸ್ಮರಣೆ

ಮಡಿಕೇರಿಯಲ್ಲಿ 30ಕ್ಕೂ ಅಧಿಕ ಕಡೆ ಗಣೇಶಮೂರ್ತಿ ಪ್ರತಿಷ್ಠಾಪನೆ
Published : 9 ಸೆಪ್ಟೆಂಬರ್ 2024, 5:22 IST
Last Updated : 9 ಸೆಪ್ಟೆಂಬರ್ 2024, 5:22 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶನಿವಾರ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಡಿಕೇರಿ ನಗರದಲ್ಲೇ ಸುಮಾರು 30ಕ್ಕೂ ಅಧಿಕ ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ವಿರಾಜಪೇಟೆಯಲ್ಲಿ ವೈಭವೋಪೇತವಾಗಿ 22ಕ್ಕೂ ಅಧಿಕ ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಇನ್ನುಳಿದ ಕಡೆಯೂ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಯುವ ಸಮುದಾಯ ಸಂಭ್ರಮಿಸುತ್ತಿದೆ.

ಕೋಟೆ ಗಣಪತಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಇನ್ನುಳಿದ ದೇವಾಲಯಗಳಲ್ಲೂ ಅಪಾರ ಜನಸ್ತೋಮ ಸೇರಿತ್ತು. ಹಲವು ದೇಗುಲಗಳಲ್ಲಿ ವಿಶೇಷ ಹೋಮ, ಹವನಾದಿಗಳು ನಡೆದವು.

ಹಿಂದೂ ಯುವಶಕ್ತಿ ವತಿಯಿಂದ ಮೊಣ್ಣಪ್ಪ ಗ್ಯಾರೇಜ್ ಬಳಿ ಅದ್ದೂರಿಯಾಗಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿ ಬೃಹತ್ ಗಣಪತಿ ಮೂರ್ತಿಯು, ಕಣ್ಮನ ಸೆಳೆಯಿತು. ಗಣೇಶಮೂರ್ತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಕಲಾಗಿತ್ತು. ಭವ್ಯ ಮೆರವಣಿಗೆಯ ಮೂಲಕ ಗಣೇಶ ಮೂರ್ತಿಯನ್ನು ತಂದಿದ್ದು ವಿಶೇಷ ಎನಿಸಿತು. ಬಿಜೆಪಿ ಮುಖಂಡ ಕೆ.ಜಿ.ಬೋಪಯ್ಯ ಪಾಲ್ಗೊಂಡಿದ್ದರು.

ಶಾಂತಿನಿಕೇತನ ಯುವಕ ಸಂಘವು 46ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಅಯೋಧ್ಯೆಯ ರಾಮಮಂದಿರವನ್ನು ಹೋಲುವ ಒಳಾಂಗಣ ವಿನ್ಯಾಸ ಮಾಡಿತ್ತು. ಅದರಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣ ಶಿಲೆಯಲ್ಲಿ ಕಡೆದಂತಿದ್ದ ವಿಶೇಷ ಬಗೆಯ ಗಣಪತಿ ಮೂರ್ತಿಯು ಸೂಜಿಗಲ್ಲಿನಂತೆ ಸೆಳೆಯಿತು. ಸುಮಾರು 15 ದಿನಗಳ ಕಾಲ ಇಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ. ಸೆ. 21ರಂದು ಅದ್ದೂರಿಯಾಗಿ ವಿಸರ್ಜನೋತ್ಸವ ನಡೆಯಲಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 33ನೇ ವರ್ಷದ ಗಣೇಶೋತ್ಸವವು ಹಳೆಬಸ್‌ನಿಲ್ದಾಣದ ಬಳಿ ನಡೆಯಿತು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನದಾನ ನಡೆಯಿತು. ಸಂಜೆ ಹೊತ್ತಿಗೆ ಭವ್ಯ ಮೆರವಣಿಗೆಯ ಮೂಲಕ ವಿಸರ್ಜನೋತ್ಸವ ನೆರವೇರಿತು.

ಮೈತ್ರಿ ವಿಘ್ನೇಶ್ವರ ಯುವಕ ಸಂಘವು 8ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಐಟಿಐ ಜಂಕ್ಷನ್‌ ಬಳಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಸೋಮವಾರ ವಿಸರ್ಜನೋತ್ಸವ ನಡೆಯಲಿದೆ.

ಕಾನ್ವೆಂಟ್ ಜಂಕ್ಷನ್‌ ಬಳಿ ಮಹಾಗಣಪತಿ ಸೇವಾ ಸಮಿತಿಯಿಂದ ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ ನಡೆಸಿ ನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನದ ಅನ್ನಸಂತರ್ಪಣೆ ನಡೆದು, ಸಂಜೆ ವಿಸರ್ಜನೋತ್ಸವ ನಡೆಯಿತು. ಇದು ಸಮಿತಿಯ 31ನೇ ವರ್ಷದ ಗಣೇಶೋತ್ಸವವಾಗಿತ್ತು.

ಚೇನ್‌ಗೇಟ್ ಬಳಿಯ ಗಣೇಶ ಮೂರ್ತಿಯ ಪ್ರಭಾವಳಿಯು ಬಲು ಆಕರ್ಷಣೀಯವಾಗಿತ್ತು.

ಕೆಇಬಿ ಕಚೇರಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯನ್ನು ನೂರಾರು ಮಂದಿ ದರ್ಶನ ಪಡೆದರು. 5 ದಿನಗಳ ನಂತರ ಶೋಭಾಯಾತ್ರೆಯ ಮೂಲಕ ವಿಸರ್ಜನೋತ್ಸವ ನಡೆಯುತ್ತದೆ.

ಭಗವತಿ ನಗರದ ಭಗವತಿ ಯುವಶಕ್ತಿ ಸಂಘ 29ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಚೌಕಿಯಿಂದ ಭಗವತಿ ನಗರದವರೆಗೆ ಭವ್ಯ ಮೆರವಣಿಗೆಯ ಮೂಲಕ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸೋಮವಾರ ವಿಸರ್ಜನೋತ್ಸವ ನಡೆಯಲಿದೆ.

ಮಡಿಕೇರಿ ನಗರಸಭೆಯಲ್ಲಿ ಪೌರಸೇವಾ ನೌಕರರ ಸೇವಾ ಸಂಘದಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿಯನ್ನು 3 ದಿನಗಳ ಕಾಲ ವಿಜೃಂಭಣೆಯಿಂದ ಆರಾಧನೆ ನಡೆಯಲಿದೆ.

ಮಡಿಕೇರಿಯ ಕೆಇಬಿ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ
ಮಡಿಕೇರಿಯ ಕೆಇಬಿ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ
ಮಡಿಕೇರಿಯ ನಗರಸಭೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ ಭಕ್ತರನ್ನು ಸೆಳೆಯಿತು
ಮಡಿಕೇರಿಯ ನಗರಸಭೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ ಭಕ್ತರನ್ನು ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT