ಸೋಮವಾರ, ಅಕ್ಟೋಬರ್ 3, 2022
21 °C
ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ, ಗರಿಗೆದರಿದ ಚಟುವಟಿಕೆಗಳು

ಮಡಿಕೇರಿ: ವೈಭವದ ದಸರೆಗೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಇಲ್ಲಿನ ಪೇಟೆ ಶ್ರೀರಾಮ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾ ಜನೋತ್ಸವ 2022ರ ಕಾರ್ಯಕ್ರಮಗಳ ಸಿದ್ಧತೆಗೆ ಚಾಲನೆ ನೀಡಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ದಸರಾ ಮಹೋತ್ಸವದ ಚಟುವಟಿಕೆಗಳು ಗರಿಗೆದರಿದವು. ಜತೆಗೆ, ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಣೆಯಾಗಿದ್ದ ದಸರೆಯನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲೂ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ದಸರಾ ಚಟುವಟಿಕೆಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ‘ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ಮಡಿಕೇರಿ ದಸರಾವನ್ನು ಈ ಬಾರಿ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಸಲಾಗುವುದು’ ಎಂದು ಹೇಳಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆರೆಕಟ್ಟೆಗಳು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಕೊರೊನಾ ಭೀತಿ ಸ್ವಲ್ಪ ಕಡಿಮೆಯಾಗಿದೆ. ಕಳೆದ ಎರಡು ವರ್ಷದಿಂದ ಕಳೆಗುಂದಿದ ದಸರಾ ಸಂಭ್ರಮವನ್ನೂ ಈ ಬಾರಿ ಸೇರಿಸಿಕೊಂಡು ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ‘ಮಡಿಕೇರಿ ದಸರಾವನ್ನು ಕಳೆದೆರಡು ವರ್ಷಗಳಿಂದ ಕೊರೊನಾ ಮತ್ತು ಮಳೆಯಿಂದಾಗಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಆ ದಿಸೆಯಲ್ಲಿ ಈ ಬಾರಿಯ ದಸರಾವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ’ ಎಂದರು.

ಶಾಸಕರ ಪರಿಶ್ರಮದಿಂದ ಈ ಬಾರಿಯ ದಸರಕ್ಕೆ ಸರ್ಕಾರದಿಂದ ₹ 1 ಕೋಟಿ ಹಣ ಬಿಡುಗಡೆಯಾಗಿದೆ. ಸಂಪ್ರದಾಯದಂತೆ ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದೇವೆ. ಮುಂದಿನ ಸಭೆಯಲ್ಲಿ ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಉಪಾಧ್ಯಕ್ಷೆ ಸವಿತಾ ರಾಕೇಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಶ್ವೇತಾ ಪ್ರಶಾಂತ್, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ನಗರಸಭೆ ಸದಸ್ಯರು, ದಸರಾ ಸಮಿತಿ ಪ್ರಮುಖರು ಭಾಗಿಯಾಗಿದ್ದರು.

ವೈಭವದ ದಸರೆಗೆ ತೀರ್ಮಾನ
ನಂತರ ನಡೆದ ಸಭೆಯಲ್ಲಿ ವೈಭವದಿಂದ ದಸರೆ ನಡೆಸುವ ತೀರ್ಮಾನವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.ಸರ್ಕಾರದಿಂದ ಬಂದಿರುವ ₹ 1 ಕೋಟಿ ಅನುದಾನವನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದರ ಕುರಿತು ವಿಸ್ತೃತ ಚರ್ಚೆ ನಡೆಯಿತು. ದಶಮಂಟಪೋತ್ಸವ ಸಮಿತಿ ಎಷ್ಟು ಮುಖ್ಯವೋ ಅಷ್ಟೇ ಸಾಂಸ್ಕೃತಿಕ ಸಮಿತಿಯೂ ಮುಖ್ಯ ಎಂಬ ಅಭಿಪ್ರಾಯಗಳು ಕೇಳಿ ಬಂದವು.

ಮಹಿಳಾ ದಸರೆ, ಜನಪದ ದಸರೆ, ಯುವ ದಸರೆ ಸೇರಿದಂತೆ ನವರಾತ್ರಿಗಳಂದು ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ನಿರ್ಧರಿಸಲಾಯಿತು. ಇದಕ್ಕಾಗಿಯೇ ₹ 13 ಲಕ್ಷ ತೆಗೆದಿರಿಸುವ ಸಲಹೆ ವ್ಯಕ್ತವಾಯಿತು. ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ₹ 41 ಲಕ್ಷ, ವೇದಿಕೆ ಮತ್ತು ನಗರ ಅಲಂಕಾರಕ್ಕೆ ₹ 17.50 ಲಕ್ಷ ಮೀಸಲಿಡುವ ಕುರಿತೂ ಚರ್ಚೆಗಳು ನಡೆದವು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಟಿ.ಪಿ.ರಮೇಶ್, ‘ಯಾವುದೇ ಲೋಪವಾಗದಂತೆ ದಸರೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಮತ್ತೊಬ್ಬ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಪತ್ರಿಕೋದ್ಯಮಿ ಜಿ.ರಾಜೇಂದ್ರ, ‘ಅನುದಾನವನ್ನು ಸಾಕಷ್ಟು ಮುಂಚೆಯೇ ಬಿಡುಗಡೆ ಮಾಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.