ಶುಕ್ರವಾರ, ಡಿಸೆಂಬರ್ 2, 2022
21 °C
ಮಂಜಿನ ನಗರಿಯಲ್ಲಿ ಚೆಲ್ಲಿದ ನವರಾತ್ರಿ ರಂಗು, ಸಾವಿರಾರು ಮಂದಿ ಭಾಗಿ

ಮಂಜಿನ ನಗರಿಯಲ್ಲಿ ಚೆಲ್ಲಿದ ನವರಾತ್ರಿ ರಂಗು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಪಡವಣದಲ್ಲಿ ಸೂರ್ಯ ಜಾರುತ್ತಿದ್ದಂತೆ ಮಂಜಿನ ನಗರಿಯಲ್ಲಿ ನವರಾತ್ರಿಯ ರಂಗು ಆವರಿಸಿತು. ದಿಕ್ತಟದಲ್ಲಿ ಸೂರ್ಯ ಹೊಮ್ಮಿಸಿದ ಹೊಂಬಣ್ಣವೂ ನವರಾತ್ರಿಯ ರಂಗಿಗೆ ನಾಚಿ ಮೋಡಗಳ ನಡುವೆ ಮರೆಯಾಯಿತು. ಎರಡು ವರ್ಷಗಳ ಬಳಿಕ ನಿರ್ಬಂಧಗಳಿಲ್ಲದ ಅದ್ಧೂರಿ ಕರಗೋತ್ಸವ ಸಂಭ್ರಮದ ಮಡಿಕೇರಿಯ ಬೆಳಕಿನ ದಸರೆಗೆ ತೋರಣ ಕಟ್ಟಿತು.

ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಮತ್ತು ಕಂಚಿ ಕಾಮಾಕ್ಷಿಯಮ್ಮ ಅವರ ಕರಗಗಳನ್ನು ಇಲ್ಲಿನ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕವಾಗಿ ಶ್ರದ್ಧಾ, ಭಕ್ತಿಗಳಿಂದ ಪೂಜೆ ಸಲ್ಲಿಸಿ ಕರಗ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತ ವೃಂದದ ಜಯಘೋಷಗಳು ಮುಗಿಲು ಮುಟ್ಟಿದವು.

ಕಠಿಣ ವ್ರತದಲ್ಲಿ ತೊಡಗಿರುವ 4 ದೇವಸ್ಥಾನಗಳ ಕರಗಧಾರಿಗಳು ಕರಗವನ್ನು ಹೊತ್ತು ಸಾಗುತ್ತಿದ್ದಂತೆ ಅಡಿಗಡಿಗೂ ಭಕ್ತರು ಮಂಗಳಾರತಿ ಬೆಳಗಿದರು. ಈಡುಗಾಯಿ ಒಡೆದು ಕೈ ಮುಗಿದರು. ಹೂಮಳೆಗರೆದು ಭಕ್ತಿಭಾವ ಮೆರೆದರು.

ಪಂಪಿನಕೆರೆಯಿಂದ ಮಹದೇವಪೇಟೆಯ ಮುಖ್ಯರಸ್ತೆಯ ಮೂಲಕ ಪೇಟೆ ಶ್ರೀರಾಮಮಂದಿರದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಕರಗೋತ್ಸವಕ್ಕೆ ಸಾಕ್ಷಿಯಾದರು. ಮನೆಗಳ ಮುಂದೆ ಬಿಡಿಸಿದ್ದ ವರ್ಣರಂಜಿತ ರಂಗೋಲಿ ಕರಗಗಳಿಗೆ ಸ್ವಾಗತ ಕೋರಿದರೆ, ದಾರಿಯುದ್ಧಕ್ಕೂ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳ ಬೆಳಕು ಕರಗದ ಕುಣಿತವನ್ನು ಜನರು ಕಣ್ತುಂಬಿಕೊಳ್ಳುವಂತೆ ಮಾಡುವಲ್ಲಿ ಸಫಲವಾಯಿತು.

ಕಲಾತಂಡಗಳೂ ಭವ್ಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷ ಎನಿಸಿತು. ಮಂಗಳವಾದ್ಯಗಳ ನಿನಾದ ಎಲ್ಲೆಡೆ ಕೇಳಿ ಬಂತು. ಅವುಗಳ ಶಬ್ದಕ್ಕೆ ಕರಗಧಾರಿಗಳು ಹಾಕಿದ ಹೆಜ್ಜೆಗಳನ್ನು ಭಕ್ತಿಭಾವದಿಂದ ಸೇರಿದ್ದ ಸಾರ್ವಜನಿಕರು ಮನದಣಿಯೇ ನೋಡಿ ತಣಿದರು.

ಇದಕ್ಕೂ ಮುನ್ನ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಪಂಪಿನ ಕೆರೆಯಲ್ಲಿ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ದಸರಾ ಸಮಿತಿ ಕಾರ್ಯಧ್ಯಕ್ಷ ರಮೇಶ್, ಪೌರಾಯುಕ್ತ ವಿಜಯ್, ನಗರಸಭಾ ಸದಸ್ಯರು, ನಗರ ದಸರಾ ವಿವಿಧ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಸತತ 50ನೇ ವರ್ಷ ಉಮೇಶ್ ಪೂಜಾರಿ ಹೊತ್ತಿರುವುದು ವಿಶೇಷ. ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಚಾಮಿ, ಕೋಟೆ ಮಾರಿಯಮ್ಮ ದೇವಾಲಯ ಕರಗವನ್ನು ಉಮೇಶ್ ಸುಬ್ರಮಣಿ ಮತ್ತು ಕಂಚಿ ಕಾಮಾಕ್ಷಿ ದೇವಾಲಯದ ಕರಗವನ್ನು ನವೀನ್ ಅವರು ಹೊತ್ತಿದ್ದರು. ನಂತರ, ಕರಗ ಪ್ರದಕ್ಷಿಣೆ ಜರುಗಿತು. ನಾಲ್ಕು ಕರಗಗಳೂ ನವರಾತ್ರಿಯಂದು ನಿತ್ಯ ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕವಾಗಿ ಮೆರವಣಿಗೆ ಹೊರಡಲಿವೆ. ಭಕ್ತರು ಕರಗ ಹೊತ್ತವರ ಕಾಲು ತೊಳೆದು ಬರಮಾಡಿಕೊಳ್ಳುತ್ತಾರೆ. ಜತೆಗೆ, ಹರಕೆ ಸಮರ್ಪಣೆ ಮಾಡಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು