ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಉತ್ಸವಕ್ಕೆ 336 ತಂಡಗಳ ನೋಂದಣಿ

ಬಹುದೊಡ್ಡ ಹಾಕಿ ಹಬ್ಬಕ್ಕೆ ಸಜ್ಜಾಗುತ್ತಿದೆ ಕಾಫಿ ನಾಡು; ನಾಪೋಕ್ಲುವಿನಲ್ಲಿ ನಾಲ್ಕನೇ ಟೂರ್ನಿ
Last Updated 14 ಮಾರ್ಚ್ 2023, 4:19 IST
ಅಕ್ಷರ ಗಾತ್ರ

ನಾಪೋಕ್ಲು: 2003ರಲ್ಲಿ ನಾಪೋಕ್ಲುವಿನಲ್ಲಿ ಕಲಿಯಂಡ ಕುಟುಂಬದವರು ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ನಡೆಸುವುದರೊಂದಿಗೆ ನಾಲ್ಕುನಾಡಿನ ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡಿದರು.

14 ವರ್ಷಗಳ ಬಳಿಕ ಬಿದ್ದಾಟಂಡ ಕುಟುಂಬಸ್ಥರು 2017ರಲ್ಲಿ ಹಾಕಿ ಉತ್ಸವದ ಸಾರಥ್ಯ ವಹಿಸಿದ್ದರು. 2018ರಲ್ಲಿ ಕುಲ್ಲೇಟಿರ ಕಪ್ ಸಹ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. ಇದೀಗ ನಾಲ್ಕನೇ ಟೂರ್ನಿ ಆಯೋಜಿಸುವ ಜವಾಬ್ದಾರಿ ಅಪ್ಪಚೆಟ್ಟೋಳಂಡ ಕುಟುಂಬದ್ದು. ಮುಂದಿನ ವರ್ಷವೂ ನಾಪೋಕ್ಲುವಿನಲ್ಲಿ ಕುಂಡ್ಯೋಳಂಡ ಕುಟುಂಬದ ನೇತೃತ್ವದಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿ ನಡೆಯಲಿದ್ದು ಅತಿ ಹೆಚ್ಚು ಟೂರ್ನಿ ನಡೆಸಿದ ಪೊನ್ನಂಪೇಟೆಯ ದಾಖಲೆಯನ್ನು ಸರಿಗಟ್ಟಲಿದೆ.

ಕೊಡವ ಕುಟುಂಬಗಳ ನಡುವಿನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಹೆಗ್ಗಳಿಕೆ ಇರುವ ಕೌಟುಂಬಿಕ ಹಾಕಿ ಉತ್ಸವ 2019ರಿಂದ ಕಾರಣಾಂತರಗಳಿಂದ ನಡೆದಿಲ್ಲ. 23ನೇ ವರ್ಷದ ಹಾಕಿ ಉತ್ಸವವನ್ನು ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಆಯೋಜಿಸಲು ಮುಂದಾಗಿದ್ದು ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 18ರಿಂದ ಟೂರ್ನಿ ಆರಂಭಗೊಳ್ಳಲಿದೆ.

21ನೇ ವರ್ಷದ ಬಿದ್ದಾಟಂಡ ಕಪ್ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ನಡೆಯಿತು. ಈ ಉತ್ಸವದಲ್ಲಿ ಅತಿ ಹೆಚ್ಚು ತಂಡಗಳು ಭಾಗವಹಿಸಿವೆ. 282 ತಂಡಗಳು ಆಡಿರುವ ದಾಖಲೆಯನ್ನು ಮುರಿದಿದೆ. 21ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬದಲ್ಲಿ 306 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿರುವುದು ದಾಖಲೆಯಾಗಿದೆ. 299 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದವು. ಶಾಂತೆಯಂಡ ಕಪ್‌ನಲ್ಲಿ 266 ತಂಡಗಳು ಆಡಿದರೆ, ಬಿದ್ದಾಟಂಡ ಕಪ್‌ನಲ್ಲಿ 302 ತಂಡಗಳು ಆಟವಾಡಿವೆ.

ಮೊದಲ ಪಂದ್ಯಾವಳಿ ನಡೆದಾಗ ಭಾಗವಹಿಸಿದ್ದು ಕೇವಲ 16 ತಂಡಗಳು. ಕರಡ ಗ್ರಾಮದ ಸಹಕಾರದೊಂದಿಗೆ 1997ರಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡಂಡ ಕುಟ್ಟಪ್ಪ ಹಾಗೂ ಶಿಕ್ಷಕರಾಗಿದ್ದ ಸಹೋದರ ಕಾಶಿ ತಮ್ಮ ತಂದೆ ಮುದ್ದಪ್ಪ ಅವರ ನೆನಪಿನಾರ್ಥ ಕೊಡವ ಕುಟುಂಬಗಳ ನಡುವೆ ಹಾಕಿ ಟೂರ್ನಿ ಆರಂಭಿಸಿದರು. ನಂತರ, ಪಕ್ಕದ ಗ್ರಾಮವಾದ ಅರಪಟ್ಟುವಿನಲ್ಲಿ ಕೋಡಿರ ಪ್ರವೀಣ್ ಅವರು ತಮ್ಮ ಕುಟುಂಬದ ಸಹಕಾರದೊಂದಿಗೆ ಎರಡನೇ ವರ್ಷದ ಆಕೆಟೂರಿಯನ್ನು ನಡೆಸಿದರು. ಹೀಗೆ, ಪ್ರತಿವರ್ಷ ತಂಡಗಳು ಹೆಚ್ಚುತ್ತಾ ಕೊಡಗಿನ ಪ್ರಮುಖ ಹಬ್ಬವಾಯಿತು.

ಈ ವರ್ಷ ಅಪ್ಪಚೆಟ್ಟೋಳಂಡ ಕಪ್‌ನಲ್ಲಿ ಆಟವಾಡಲು 336 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆಯ ಹೊರಗೆ ಉದ್ಯೋಗದಲ್ಲಿರುವವರು ಏಪ್ರಿಲ್, ಮೇ ತಿಂಗಳಲ್ಲಿ ರಜೆ ಹಾಕಿಕೊಂಡು ತಮ್ಮ ಕುಟುಂಬದ ಪರವಾಗಿ ಆಡಲು ಆಗಮಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಟೂರ್ನಿ ಗಮನ ಸೆಳೆದು ಸುದ್ದಿಯಾಗುತ್ತಿದೆ. ಕಾವೇರಿ ಸಂಕ್ರಮಣದಂತೆ ಹಾಕಿ ಟೂರ್ನಿ ಕೂಡ ವರ್ಷದ ಪ್ರಮುಖ ಹಬ್ಬವಾಗಿ ಆಚರಣೆಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT