ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು| ಹಾಕಿ ಆಟಗಾರರ ಸಂಖ್ಯೆ ಕಡಿಮೆ; ಬೇಸರ

ವಿ. ಬಾಡಗದಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಚಾಲನೆ ನೀಡಿದ ರಾಣಿ ಮಾಚಯ್ಯ
Last Updated 23 ಫೆಬ್ರುವರಿ 2023, 6:45 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ರಾಷ್ಟ್ರೀಯ ಹಾಕಿ ತಂಡಗಳಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಕಿಯ ತವರಾದ ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಆಟಗಾರರು ಮತ್ತಷ್ಟು ಹೊರಹೊಮ್ಮಬೇಕು’ ಎಂದು ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.

ಬಿಟ್ಟಂಗಾಲ ಸಮೀಪದ ವಿ. ಬಾಡಗ ಹೈ ಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ಆರಂಭಗೊಂಡ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳನ್ನು ಹಾಕಿ ಕ್ರೀಡೆಯಲ್ಲಿ ತೊಡಗಿಸಬೇಕು. ಮಕ್ಕಳನ್ನು ಚಿಕ್ಕಂದಿನಿಂದಲೇ ಹಾಕಿಯತ್ತ ಸೆಳೆಯುವ ತರಬೇತಿ ಶಿಬಿರಗಳು ನಿರಂತರವಾಗಿ ಆಯೋಜನೆಗೊಳ್ಳಬೇಕು. ಇದರ ಜೊತೆಗೆ ವೈಜ್ಞಾನಿಕವಾದ ದೈಹಿಕ ಬೆಳವಣಿಗೆಯ ತರಬೇತಿ ನೀಡಬೇಕು. ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರಬೇಕು’ ಎಂದು ನುಡಿದರು.

ವಿ.ಬಾಡಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಚ್.ಎ.ರಾಜಮ್ಮ, ನಿವೃತ್ತ ಮುಖ್ಯ ಶಿಕ್ಷಕರಾದ ಮಳವಂಡ ಸೀತಮ್ಮ ಪೂಣಚ್ಚ ಮಾತನಾಡಿದರು. ಹೈ ಫ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ನಂಬುಡುಮಾಡ ಕಿಸಾ ತಮ್ಮಯ್ಯ, ವಿರಾಜಪೇಟೆಯ ವಕೀಲ ಕೊಕ್ಕಂಡ ಅಪ್ಪಣ್ಣ, ಗ್ರಾಮದ ಹಿರಿಯ ಮುಖಂಡರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ಹಾಕಿ ಕೂರ್ಗ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಿಣ್ಣಪ್ಪವ, ಮಾಳೇಟಿರ ಅಜಿತ್ ಪೂವಣ್ಣ, ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ, ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ , ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್, ಕಂಜಿತಂಡ ಶ್ರುತಿ ಹಾಜರಿದ್ದರು.

ಐಮುಡಿಯಂಡ ರಾಣಿ ಮಾಚಯ್ಯ ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಮಳವಂಡ ಸೀತಮ್ಮ ಪೂಣಚ್ಚ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಉದ್ಯೋನ್ಮುಖ ಗಾಯಕರಾದ ವಿರಾಜಪೇಟೆಯ ಮಾಳೇಟಿರ ಅಜಿತ್ ಪೂವಣ್ಣ ಪ್ರಾರ್ಥಿಸಿದರು. ವಿ. ಬಾಡಗ ಹೈಪ್ಲೈಯರ್ಸ್‌ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಕಂಜಿತಂಡ ಶ್ರುತಿ ವಂದಿಸಿದರು. ಆರಂಭದಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆ ತರುವ ಸಂದರ್ಭದಲ್ಲಿ ಎರವ ಸಮುದಾಯದ ಸಾಂಪ್ರದಾಯಿಕ ಚೀನಿದುಡಿ ವಾದ್ಯ ತಂಡ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಫಲಿತಾಂಶ

ವಿ.ಬಾಡಗ ಹೈ ಫ್ಲೈಯರ್ಸ್ ಮತ್ತು ಕೊಂಗಂಡ ಕುಟುಂಬ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮತ್ತೊಂದು ಪಂದ್ಯದಲ್ಲಿ ಚೇಂದಿರ ತಂಡವು ಅಪ್ಪಂಡೇರಂಡ ತಂಡವನ್ನು 6-0 ಗೋಲುಗಳ ಅಂತರದಿಂದ ಮಣಿಸಿತು. ವಿಜೇತ ತಂಡದ ಅತಿಥಿ ಆಟಗಾರ, ರೈಲ್ವೇಸ್‌ನ ಪೂಣಚ್ಚ 17ನೇ, 24ನೇ ಮತ್ತು 37ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ತಂಡದ ಡ್ಯಾನಿ 10ನೇ ಮತ್ತು 31ನೇ ನಿಮಿಷದಲ್ಲಿ ಹಾಗೂ ಪೊನ್ನಣ್ಣ 15ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ದಿನದ ಕೊನೆಯ ಪಂದ್ಯದಲ್ಲಿ ಕಾಳೆಂಗಡ ತಂಡವು ಗೈರು ಹಾಜರಾದ ಕಾರಣ ನಂಬುಡುಮಾಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT