ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರು ಮೆಚ್ಚುವ ಹಾಕತ್ತೂರು ಪ್ರೌಢಶಾಲೆ

ವಿದ್ಯಾರ್ಥಿಗಳು ಕಲಿಕೆಗೂ ಸೈ, ಕ್ರೀಡೆಯಲ್ಲೂ ಜೈ
Last Updated 14 ಜನವರಿ 2023, 6:20 IST
ಅಕ್ಷರ ಗಾತ್ರ

ನಾಪೋಕ್ಲು: ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಉತ್ತಮ ಫಲಿತಾಂಶದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುವ ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೆಚ್ಚಿನ ಶಾಲೆಯಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಕಲಿಕೆಯಲ್ಲೂ ಮುಂದು. ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ಚುರುಕು.

ಮಡಿಕೇರಿಯಿಂದ 10 ಕಿ.ಮೀ. ದೂರದ ಹಾಕತ್ತೂರು ಗ್ರಾಮದಲ್ಲಿ 1981ನೇ ಇಸವಿಯಲ್ಲಿ ಆರಂಭಗೊಂಡ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಅಗತ್ಯ ಮೂಲಸೌಕರ್ಯಗಳು, ನುರಿತ ಶಿಕ್ಷಕ ವೃಂದ, ಕಂಪ್ಯೂಟರ್ ಆಧಾರಿತ ಬೋಧನೆ, ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸುಸಜ್ಜಿತ ಕ್ರೀಡಾಂಗಣ, ವಿಶಾಲ ಸಭಾಂಗಣ, ಕಣ್ಮನ ಸೆಳೆಯುವ ಶಾಲಾ ಉದ್ಯಾನಗಳೊಂದಿಗೆ ಗಮನಸೆಳೆಯುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶಾಲೆ ಶೇ 100 ಫಲಿತಾಂಶ ಗಳಿಸಿದೆ. ‘ಹತ್ತೂರು ಮೆಚ್ಚುವ ಹಾಕತ್ತೂರು ಪ್ರೌಢಶಾಲೆ’ ಎಂದು ಜನಮಾನಸದಲ್ಲಿ ಹೆಸರಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದೆ. ಶಾಲೆಗೆ 2022ನೇ ಸಾಲಿನ ರಾಜ್ಯಮಟ್ಟದ ಉತ್ತಮ ಮತದಾರರ ಸಾಕ್ಷರತಾ ಸಂಘ (ಇ.ಎಲ್.ಸಿ.) ಪ್ರಶಸ್ತಿ ಲಭಿಸಿದೆ. 2021-22ನೇ ವರ್ಷದ ರಾಜ್ಯಮಟ್ಟದ ವಿಜ್ಞಾನ ಪ್ರತಿಭಾನ್ವೇಷಣಾ ಮಾದರಿ ತಯಾರಿಕೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಕೆ.ಎ.ಮುರ್ಷಿದಾ ಪ್ರಥಮ ಸ್ಥಾನ ಪಡೆದಿದ್ದರೆ.

2022-23ನೇ ಸಾಲಿನ ರಾಜ್ಯಮಟ್ಟದ ಯುವಸಂಸತ್ ಕಾರ್ಯಕ್ರಮದಲ್ಲಿ ಎಸ್.ಮೇಘಾ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ. ಇದೇ ಸಾಲಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈಕೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಕೇರಳದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದ್ದಾಳೆ. ಜಿಲ್ಲಾ ಸಹಕಾರಿ ಬ್ಯಾಂಕ್ ವತಿಯಿಂದ ನಡೆಸಲಾದ ಸಹಕಾರಕ್ಕೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಮೇಘಾ ಪ್ರಥಮ ಸ್ಥಾನ ಗಳಿಸಿರುವುದು ವಿಶೇಷ.

ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಮುಂದು. ಪ್ರತಿ ವರ್ಷವೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿ ತರುತ್ತಿದ್ದಾರೆ. ಡಿಸ್ಕಸ್ ಎಸೆತ ಹಾಗೂ ಜಾವೆಲಿನ್ ಎಸೆತದಲ್ಲಿ ಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.

2021-22ನೇ ಸಾಲಿನಲ್ಲಿ ಮೇಕೇರಿ ಗ್ರಾಮ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿ ಶಾಲೆಯಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗಿದೆ. ‘ಗುರುವಂದನೆ’, ‘ನಮ್ಮ ನಡೆ ಕಲಿತ ಶಾಲೆಯೆಡೆ’, ಆಜಾದಿ ಕಾ ಅಮೃತ್ ಮಹೋತ್ಸವ್ ಪ್ರಯುಕ್ತ ನಿವೃತ್ತ ಸೈನಿಕರಿಗೆ ಸನ್ಮಾನ - ಹೀಗೆ ವರ್ಷಕ್ಕೊಂದು ವಿನೂತನ ಕಾರ್ಯಕ್ರಮಗಳನ್ನು ದಾನಿಗಳ ಸಹಕಾರದೊಂದಿಗೆ ನಡೆಸುತ್ತಾ ಬರಲಾಗಿದೆ. ಶಾಲೆ ಹಾಗೂ ವಿದ್ಯಾರ್ಥಿಗಳ ಪ್ರಗತಿಗಾಗಿ ಸದಾ ಮಿಡಿಯುತ್ತಿರುವ ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಬಳಗ ಶಾಲೆಯಲ್ಲಿರುವುದು ಶಾಲೆಯ ಪ್ರಗತಿಗೆ ಪೂರಕವಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ನೀಡುವ ಉಚಿತ ಲ್ಯಾಪ್‌ಟಾಪ್ ಅನ್ನು 20 ವಿದ್ಯಾರ್ಥಿಗಳು ಪಡೆದಿದ್ದಾರೆ.

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆದು, ಅವರಲ್ಲಿರುವ ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಉನ್ನತಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.ಮಕ್ಕಳಲ್ಲಿ ಧೈರ್ಯವನ್ನು ತುಂಬಿ, ಆತ್ಮ ವಿಶ್ವಾಸವನ್ನು ಮೂಡಿಸಿ, ಸ್ಪರ್ದಾತ್ಮಕ ಮನೋಭಾವನೆಯನ್ನು ಬೆಳೆಸಿ, ಶ್ರದ್ಧಾ ಭಕ್ತಿಯಿಂದ ಶಿಸ್ತನ್ನು ಕಲಿಸಿ ನವೋಲ್ಲಾಸದಿಂದ ಕಲಿಯುವಂತಹ ವಾತಾವರಣವನ್ನು ಬೆಳೆಸಿರುವುದು ಶಾಲೆಯ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT