ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಅವ್ಯವಸ್ಥೆಯಲ್ಲೇ ಶುರುವಾದ ವಾರದ ಸಂತೆ

ಹೆಸರಿಗಷ್ಟೇ ಹೈಟೆಕ್ ಮಾರುಕಟ್ಟೆ: ಮೂಲ ಸೌಲಭ್ಯವೇ ಇಲ್ಲ– ದೂರು
Last Updated 3 ಆಗಸ್ಟ್ 2020, 13:35 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮೂರು ತಿಂಗಳ ನಂತರ ಸೋಮವಾರ ಆರಂಭವಾದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರದ ಸಂತೆ ಅವ್ಯವಸ್ಥೆಗಳಿಂದ ಕೂಡಿತ್ತು.

ಭಾನುವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಹೈಟೆಕ್ ಮಾರುಕಟ್ಟೆ ಹಲವು ಕಡೆಗಳಲ್ಲಿ ನೀರು ಸೋರುತ್ತಿತ್ತು. ಕೆಲವೆಡೆ ನಿಂತಿ ನೀರಲ್ಲಿ ಸಾಗಿ ಗ್ರಾಹಕರು ತರಕಾರಿ ಖರೀದಿಸಿದರು.

ಇನ್ನು ಕೆಲವರು ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ಬಿಡಾಡಿ ದನಗಳ ವಾಸ್ತವ್ಯದಿಂದಾಗಿ ಅಲ್ಲಲ್ಲಿ ಸಗಣಿ ಹಾಕಿದ್ದರಿಂದ ದುರ್ವಾಸನೆಯಿಂದ ಕೂಡಿತ್ತು. ಅಲ್ಲದೇ ಒಳಗೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದ ಹಲವು ಜನ ಸಗಣಿ ತುಳಿದು ಪಂಚಾಯಿತಿಯವರನ್ನು ಶಪಿಸುತ್ತಾ ಮುಂದೆ ಸಾಗಿದರು

‘ಒಂದು ಅಂಗಡಿಗೆ ₹ 70 ರಿಂದ ₹ 100ರವರೆಗೆ ಸುಂಕ ವಸೂಲಿ ಮಾಡುತ್ತಾರೆ. ಆದರೆ, ವ್ಯಾಪಾರಿಗಳಿಗೆ ಬೇಕಾದ ಯಾವುದೇ ಅನುಕೂಲ ಇಲ್ಲಿ ಇಲ್ಲ. ಹೈಟೆಕ್ ಮಾರುಕಟ್ಟೆ ಹೆಸರಿನಲ್ಲಿ ಜನರ ಸುಲಿಗೆಯಾಗುತ್ತಿದೆ. ಕತ್ತಲಿನಲ್ಲಿ ವ್ಯಾಪಾರ ಮಾಡಬೇಕಿದೆ. ಕುಡಿಯಲು ನೀರಿನ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ಥೆಯಾಗಲಿ ಪಂಚಾಯಿತಿ ಕಲ್ಪಿಸಿಲ್ಲ’ ಎಂದು ವ್ಯಾಪಾರಸ್ಥ ಮಧೂಸೂದನ್ ದೂರಿದರು.

‘ಈ ಹೈಟೆಕ್ ಮಾರುಕಟ್ಟೆ ಪಟ್ಟಣ ಪಂಚಾಯಿತಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಇಲ್ಲಿನ ಸಮಸ್ಯೆ ಪರಿಹಾರಕ್ಕೆಂದು ವಾರ್ಷಿಕ ಲಕ್ಷಾಂತರ ವೆಚ್ಚ ಮಾಡುತ್ತಿದ್ದಾರೆ. ಆದರೆ, ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಕನಿಷ್ಠ ಸೌಲಭ್ಯವನ್ನಾದರೂ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಒದಗಿಸಲಿ’ ವ್ಯಾಪಾರಿ ಸರೋಜಮ್ಮ ಆಗ್ರಹಿಸಿದರು.

‘ಕೇವಲ ಸಮಸ್ಯೆ ಪರಿಹಾರದ ಭರವಸೆಗಳನ್ನು ನೀಡುವ ಪಂಚಾಯಿತಿ ಆಡಳಿತ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು’ ಎಂದು ನಾಗರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT