ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರಕ್ಕೆ ಸಿದ್ಧತೆ

4ರಂದು ಮನೆ ಹಸ್ತಾಂತರ: ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ ಭಾಗಿ
Last Updated 31 ಮೇ 2020, 14:50 IST
ಅಕ್ಷರ ಗಾತ್ರ

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಮತ್ತು ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮದ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಕಾರ್ಯವು ಜೂನ್ 4ರಂದು ನಡೆಯಲಿದೆ.

ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಮೇ 29ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬರುತ್ತಾರೆ ಎನ್ನುವ ಕಾರಣಕ್ಕೆ ಹಸ್ತಾಂತರ ಕಾರ್ಯಕ್ರಮವನ್ನು ಜೂನ್‌ ಮೊದಲ ವಾರಕ್ಕೆ ಮುಂದೂಡಲಾಗಿತ್ತು. ಆದರೆ, ಅವರು ಬರುವುದು ಅನುಮಾನ ಎಂದು ಮೂಲಗಳು ತಿಳಿಸಿವೆ. 

ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಂಬೂರು ಮತ್ತು ಮದೆ ಬಳಿ ನಿರ್ಮಿಸಿರುವ ಮನೆಗಳನ್ನು ಜೂನ್ 4ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಾಂತರಿಸಲಿದ್ದಾರೆ. ಕಂದಾಯ ಮತ್ತು ಗೃಹ ಸಚಿವರು ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮನೆ ಹಸ್ತಾಂತರ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಸಾಂಕೇತಿಕವಾಗಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಜೂನ್ 1ರಿಂದ ಮುಂಗಾರು ಪ್ರವೇಶವಾಗುವ ಹಿನ್ನೆಲೆ ಮನೆ ಹಸ್ತಾಂತರ ಕಾರ್ಯಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.

ಜಂಬೂರು-ಮಾದಾಪುರ ರಸ್ತೆ ಹಾಗೂ ಮದೆನಾಡು ರಸ್ತೆಯನ್ನು ಸರಿಪಡಿಸಬೇಕು. ಮನೆ ಪಟ್ಟಿಯನ್ನು ಕೂಡಲೇ ಒದಗಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರ ಮುದ್ರಿಸುವುದು ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು, ಮನೆ ಹಸ್ತಾಂತರ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು.

ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್, ಜಂಬೂರಿನಲ್ಲಿ 383, ಮದೆ ಗ್ರಾಮದಲ್ಲಿ 80 ಒಟ್ಟು 463 ಮನೆಗಳು ಹಸ್ತಾಂತರಕ್ಕೆ ಸಿದ್ಧವಾಗಿವೆ. ಮನೆ ಹಸ್ತಾಂತರ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್, ಜಿ.ಪಂ ಎಂಜಿನಿಯರ್ ಶ್ರೀಕಂಠಯ್ಯ, ಭೂದಾಖಲೆ ಉಪ ನಿರ್ದೇಶಕ ಶ್ರೀನಿವಾಸ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಡಾ.ಎಸ್.ಎಚ್.ಮಹೇಶ್, ಸಿ.ಜಗನ್ನಾಥ್, ತಾ.ಪಂ ಇಒ ಲಕ್ಷ್ಮಿ, ಸುನಿಲ್ ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್ ಮಹೇಶ್, ಗೋವಿಂದರಾಜು, ಪ.ಪಂ ಮುಖ್ಯಾಧಿಕಾರಿ ಸುಜಯ್, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಕೆ.ಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT