ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಸುಗ್ಗಿ ಹಬ್ಬ ‘ಹುತ್ತರಿ’ಗೆ ಸಂಭ್ರಮದ ಸ್ವಾಗತ

ಕೊಡಗಿನ ಎಲ್ಲೆಡೆ ಮೊಳಗಿದ ಉದ್ಘೋಷ, ಸಂತಸ, ಸಡಗರದಿಂದ ಹಬ್ಬ ಆಚರಣೆ
Published 28 ನವೆಂಬರ್ 2023, 6:27 IST
Last Updated 28 ನವೆಂಬರ್ 2023, 6:27 IST
ಅಕ್ಷರ ಗಾತ್ರ

ಮಡಿಕೇರಿ: ಚುಮುಚುಮು ಚಳಿಯ ನಡುವೆ ‘ಪೊಲಿ ಪೊಲಿಯೇ ದೇವ’ ಎಂಬ ಉದ್ಘೋಷಗಳು ಮುಗಿಲು ಮುಟ್ಟುತ್ತಿದ್ದಂತೆ ಕೊಡಗು ಜಿಲ್ಲೆಯಲ್ಲಿ ಸುಗ್ಗಿ ಹಬ್ಬ ‘ಹುತ್ತರಿ’ ಆರಂಭಗೊಂಡಿತು.

ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ನೆರೆಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಹಬ್ಬಕ್ಕೊಂದು ಮುನ್ನುಡಿ ಬರೆದವು. ಇದರ ಬೆನ್ನಲ್ಲೇ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲೂ ತೆಪ್ಪೋತ್ಸವ, ಪಲ್ಲಕಿ ಉತ್ಸವ, ದಟ್ಟೋತ್ಸವಗಳು ನಡೆದು, ದೇವಾಲಯದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು.

ಅಬ್ಬರದ ಪಟಾಕಿ, ಬಾನಬಿರುಸುಗಳ ಸಿಡಿತಗಳೊಂದಿಗೆ ಕೋವಿಯಿಂದ ಹೊಮ್ಮಿದ ಕುಶಾಲತೋಪುಗಳು ಹಬ್ಬದ ಸಂಭ್ರಮಕ್ಕೆ ಕಳಸವನ್ನಿಟ್ಟವು. ಐನ್‌ಮನೆಗಳು, ದೇವಾಲಯಗಳು, ವಿವಿಧ ಸಮಾಜಗಳ ಸಭಾಂಗಣಗಳಲ್ಲಿ ಸಾಮೂಹಿಕ ಆಚರಣೆಗಳು ನಡೆದವು.

ಎಲ್ಲ ರೈತಾಪಿ ವರ್ಗದವರೂ ತಮ್ಮ ತಮ್ಮ ಮನೆಗಳಲ್ಲಿ ಹುತ್ತರಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಭತ್ತದ ಗದ್ದೆಗಳಿಗೆ ಅಲಂಕಾರ ಮಾಡಿ, ಕದಿರು ತೆಗೆದರು. ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಂಡರು.

ಎಲ್ಲೆಡೆ ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮಹಿಳೆಯರು ಹಾಗೂ ಪುರುಷರೆ ಕಂಡು ಬಂದರು. ದುಡಿಕೊಟ್ ಪಾಟ್, ವಾಲಗ ಸೇರಿದಂತೆ ಜನಪದ ವಾದ್ಯಗಳ ಶಬ್ದಗಳು ಅನುರಣಿಸಿದವು. ವಿವಿಧ ಬಗೆಯ ಜನಪದ ನೃತ್ಯಗಳೂ ಪ್ರದರ್ಶನಗೊಂಡವು. ವಿವಿಧ ಬಗೆಯ ಖಾದ್ಯಗಳು ನಾಲಿಗೆಯನ್ನು ತಣಿಸಿದವು.

ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆಯಂಡ, ಕಲಿಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ, ಸೇರಿದಂತೆ ಅಮ್ಮಂಗೇರಿಯ ವಿವಿಧ ಕುಟುಂಬದವರು ಪಾಲ್ಗೊಂಡಿದ್ದರು.

ಹುತ್ತರಿ ಹಬ್ಬದ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಸುಣ್ಣ, ಬಣ್ಣ, ಹೂವುಗಳಿಂದ ಅಲಂಕರಿಸಲಾಯಿತು. ಹಲವು ಕುಟುಂಬಗಳ ಐನ್ ಮನೆಗಳಲ್ಲಿ ಕುಟುಂಬಸ್ಥರು ಒಟ್ಟುಗೂಡಿ ಸಂಭ್ರಮೋಲ್ಲಾಸಗಳಿಂದ ಹಬ್ಬದ ಸಿದ್ಧತೆ ನಡೆಸಿದರು.

ಕೊಡಗಿನ ಸುಗ್ಗಿಹಬ್ಬ ಹುತ್ತರಿಯ ಅಂಗವಾಗಿ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಸೋಮವಾರ ರಾತ್ರಿ ಕದಿರು (ಭತ್ತದ ತೆನೆ) ತೆಗೆದ ದೃಶ್ಯವನ್ನು ಹಲವು ಮಂದಿ ವೀಕ್ಷಿಸಿದರು ಚಿತ್ರ: ರಂಗಸ್ವಾಮಿ
ಕೊಡಗಿನ ಸುಗ್ಗಿಹಬ್ಬ ಹುತ್ತರಿಯ ಅಂಗವಾಗಿ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಸೋಮವಾರ ರಾತ್ರಿ ಕದಿರು (ಭತ್ತದ ತೆನೆ) ತೆಗೆದ ದೃಶ್ಯವನ್ನು ಹಲವು ಮಂದಿ ವೀಕ್ಷಿಸಿದರು ಚಿತ್ರ: ರಂಗಸ್ವಾಮಿ

ಮಡಿಕೇರಿಯ ಓಂಕಾರೇಶ್ವರ ದೇಗುಲ, ಪಾಲೂರು ಮಹಾಲಿಂಗೇಶ್ವರ, ಮಕ್ಕಿಶಾಸ್ತಾವು, ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯ, ನಾಪೋಕ್ಲು ಹಾಗೂ ಕೊಡವ, ಗೌಡ ಸಮಾಜಗಳಲ್ಲೂ ವಿವಿಧ ಬಗೆಯ ಆಚರಣೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT