ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತವಲ್ಲ, ಅದು ಉದ್ದೇಶಪೂರ್ವಕ ಕೃತ್ಯ; ಆರೋಪ

ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಬಿಜೆಪಿ ಪ್ರತಿಭಟನೆ
Published 21 ಏಪ್ರಿಲ್ 2024, 6:03 IST
Last Updated 21 ಏಪ್ರಿಲ್ 2024, 6:03 IST
ಅಕ್ಷರ ಗಾತ್ರ

ಮಡಿಕೇರಿ/ವಿರಾಜಪೇಟೆ: ಇಲ್ಲಿನ ವಾಲ್ನೂರು ಸಮೀಪ ಗುರುವಾರ ರಾತ್ರಿ ಕಾರೊಂದು ಬಿಜೆಪಿ ಕಾರ್ಯಕರ್ತರಿಗೆ ಡಿಕ್ಕಿ ಹೊಡೆದು ರಾಮಪ್ಪ ಎಂಬುವವರು ಮೃತಪಟ್ಟ ಘಟನೆ ಕುರಿತ ಬಿಜೆಪಿ ಆಕ್ರೋಶ ಶನಿವಾರವೂ ಮುಂದುವರೆಯಿತು.

ಇಲ್ಲಿನ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ತಳೂರು ಕಿಶೋರ್‌ಕುಮಾರ್, ‘ಇದು ಆಕಸ್ಮಿಕ ಘಟನೆಯಲ್ಲ. ಉದ್ದೇಶಪೂರ್ವಕ ಅಪಘಾತ’ ಎಂದು ದೂರಿದರು.

ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಲೆಂದೇ ಇಂತಹ ಕೃತ್ಯ ನಡೆಸಲಾಗುತ್ತಿದೆ. ಘಟನೆ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಅ‍ಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪಕ್ಷದ ವತಿಯಿಂದ ₹ 10 ಲಕ್ಷ ‌ಹಾಗೂ ಗಾಯಗೊಂಡವರಿಗೆ ₹ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ‘ಬಿಜೆಪಿ ಪರವಾದ ಅಲೆಯನ್ನು ನಾಶಮಾಡಿ ಮತದಾರರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಕಾಂಗ್ರೆಸ್‌ನದು’ ಎಂದರು.‌ ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಅನ್ಯಾಯವಾದರೂ ಸುಮ್ಮನಿರುತ್ತದೆ. ಮುಂದೊಂದು ದಿನ ಆ ಪಕ್ಷದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ಬರಬಹುದು ಎಂದು ಹೇಳಿದರು.

ಜಿಲ್ಲಾ ವಕ್ತಾರ ಬಿ.ಕೆ.ಅರುಣ್‌ಕುಮಾರ್ ಮಾತನಾಡಿ, ‘ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗುವುದಕ್ಕೆ ಮುನ್ನವೇ ಗೃಹಮಂತ್ರಿ ಇದು ಲವ್‌ಜಿಹಾದ್ ಅಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೂಡಲೇ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ‘ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ₹ 25 ಲಕ್ಷ ಪರಿಹಾರ ನೀಡಬೇಕು. ಸಂಚಿನಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಈಚೆಗೆ ನಾವು ಪೆರಾಜೆಯಲ್ಲಿ ಚಹಾ ಕುಡಿಯುವಾಗ ಕಾರೊಂದು ಅಂಗಡಿಗೆ ನುಗ್ಗಿದೆ. ಈಗ ನೋಡಿದರೆ ಕಾರೊಂದು ಕಾರ್ಯಕರ್ತರಿಗೆ ಡಿಕ್ಕಿ ಹೊಡೆದಿದೆ. ಎಲ್ಲೆಡೆ ಭಯದ ವಾತಾವರಣ ಮೂಡಿದೆ ಎಂದರು.

ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಹೆಣ್ಣಿನ ಕೊಲೆ ನಡೆದಾಗ ಸಚಿವರು ಸಾಂತ್ವನ ಹೇಳುವ ಬದಲು ಅದು ಆಕಸ್ಮಿಕ ಎನ್ನುತ್ತಾರೆ. ಸರ್ಕಾರ ಮೊದಲು ಮಹಿಳೆಯರಿಗೆ ಭದ್ರತೆ ಕೊಡಬೇಕು’ ಎಂದು ಒತ್ತಾಯಿಸಿದರು.

ಎಲ್ಲೆಡೆ ಪ್ರತಿಭಟನೆ: ಇದಕ್ಕೂ ಮುನ್ನ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮುಖಂಡರಾದ ರಾಬಿನ್ ದೇವಯ್ಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ವಿರಾಜಪೇಟೆಯ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಸುವಿನ್ ಗಣಪತಿ ಭಾಗವಹಿಸಿದ್ದರು. ತಹಶೀಲ್ದಾರ್ ಎಚ್.ಎನ್.ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿದರು.

ಪೊನ್ನಂಪೇಟೆ ಬಸ್ ನಿಲ್ದಾಣ, ಕುಶಾಲನಗರದ ನಾಡಕಚೇರಿ ಮುಂದೆ ಹಾಗೂ ಸೋಮವಾರಪೇಟೆಯ ಪುಟ್ಟಪ್ಪ ವೃತ್ತದಲ್ಲೂ ಪ್ರತಿಭಟನೆಗಳು ನಡೆದವು.

ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ರಕ್ಷಣೆ ನೀಡಲು ಒತ್ತಾಯ ಹಲವು ಮುಖಂಡರು ಭಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT