ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹ್ಯಾಟ್ರಿಕ್ ಸಾಧನೆಯತ್ತ ಕಡಗದಾಳು ಸರ್ಕಾರಿ ಪ್ರೌಢಶಾಲೆ

ನಾಪೋಕ್ಲು: ಕಡಗದಾಳು ಗ್ರಾಮದ ಶಾಲೆಗೆ ಸತತ 2 ಬಾರಿ ಶೇ 100 ಫಲಿತಾಂಶ ‍
Last Updated 29 ಜನವರಿ 2023, 1:50 IST
ಅಕ್ಷರ ಗಾತ್ರ

ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಪೈಕಿ ಕಡಗದಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈಗಾಗಲೇ 2 ಬಾರಿ ಶೇ 100ರಷ್ಟು ಫಲಿತಾಂಶ ಪಡೆದಿದ್ದು, ಹ್ಯಾಟ್ರಿಕ್ ಸಾಧನೆಯತ್ತ ಚಿತ್ತ ಹರಿಸಿದೆ.

ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ತರಲು ಇಲ್ಲಿನ ಶಿಕ್ಷಕವೃಂದ ಶ್ರಮಿಸುತ್ತಿದೆ. 2020-21 ಮತ್ತು 2021 22 ಸಾಲಿನಲ್ಲಿ ಸತತ ಎರಡು ವರ್ಷಗಳ ಕಾಲ ಈ ಸರ್ಕಾರಿ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ. ಶಿಕ್ಷಕವೃಂದವು ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ 10ನೇ ತರಗತಿಯಲ್ಲಿ ಶೇ 100 ಫಲಿತಾಂಶ ತರಲು ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷ 79 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 7 ಶಿಕ್ಷಕರು ಇದ್ದಾರೆ. ಶಾಲೆಯಲ್ಲಿ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತು ನೀಡಲಾಗುತ್ತಿದೆ. ಉತ್ತಮ ಫಲಿತಾಂಶದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಮುಂದಿದ್ದಾರೆ.

ವಿಭಿನ್ನ ಸಾಮಾಜಿಕ ಸ್ಥರದ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ಉತ್ತಮ ಫಲಿತಾಂಶವನ್ನು ತರುವುದು ಸುಲಭದ ಮಾತೇನಲ್ಲ. ಶಾಲೆಯಲ್ಲಿ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲ ವಿದ್ಯಾರ್ಥಗಳ ತೇರ್ಗಡೆಗೆ ಪ್ರಯತ್ನಿಸುತ್ತಿರುವ ಶಿಕ್ಷಕ ವೃಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೆಚ್ಚುಗೆಗೂ ಪಾತ್ರವಾಗಿದೆ.

ಇಲ್ಲಿನ ಮುಖ್ಯ ಶಿಕ್ಷಕಿ ಅನಿತಾ ಅವರು ಈ ಬಾರಿ ಶೇ 100 ಫಲಿತಾಂಶ ಪಡೆಯಲು ತಮ್ಮ ಶಾಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಈಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಂಡಿಸಿ ಎಲ್ಲರ ಗಮನ ಸೆಳೆದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ವಿನ್ಯಾಸವನ್ನು ಪರಿಚಯ ಮಾಡಿಕೊಡುವುದು, ಹಳೆಯ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಮಾಡಿಸುವುದು, ಪುನರಾವರ್ತನೆ ಮಾಡಿ ಅಭ್ಯಾಸ ಮಾಡಲು ಪ್ರೇರೇಪಿಸುವುದು, ಘಟಕ ಪರೀಕ್ಷೆಗಳನ್ನು ನಡೆಸುವುದು, ಪ್ರಶ್ನೆ ಕೋಠಿಯನ್ನು ತಯಾರಿಸಿ ಸಂಭವನೀಯ ಪ್ರಶ್ನೆಗಳ ಪರಿಚಯವನ್ನು ಮಾಡಿಸುವುದು, ತೆರೆದ ಪುಸ್ತಕದ ಪರೀಕ್ಷೆ, ಪ್ರತಿ ವಿಷಯಗಳಲ್ಲಿ ವಿದ್ಯಾರ್ಥಿಗಳೇ ಘಟಕವಾರು ಪ್ರಶ್ನೆಗಳನ್ನು ರಚಿಸಲು ಪ್ರೇರೇಪಿ ಸುವುದು, ಶಾಲಾ ಹಂತದಲ್ಲಿ ಅಣಕು ಪರೀಕ್ಷೆಗಳನ್ನು ನಡೆಸುವ ಯೋಜನೆಗಳನ್ನು ಅವರು ಮಂಡಿಸಿದರು.

ಶಾಲೆಯ ಗ್ರಂಥಾಲಯದಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ, ಪಠ್ಯಪುಸ್ತಕದ ಜೊತೆಗೆ ಪೂರಕ ಪುಸ್ತಕಗಳು, ಪಾಸಿಂಗ್ ಪ್ಯಾಕೇಜ್‌ಗಳು, ಪ್ರಶ್ನೆಪತ್ರಿಕೆಗಳ ಕೋಠಿಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಇರಿಸಲಾಗಿದೆ. ಸಾಮಾನ್ಯ ಜ್ಞಾನ ವೃದ್ಧಿಗಾಗಿ ದಿನಪತ್ರಿಕೆಗಳನ್ನು ಓದಲು ಪ್ರೇರೇಪಿಸಲಾಗುತ್ತಿದೆ.

‘ನೆಲದಲ್ಲಿ ಚಿತ್ರಗಳನ್ನು ಬಿಡಿಸುವುದು, ಭೂಪಟ ರಚನೆ, ವಿಜ್ಞಾನದ ಚಿತ್ರಗಳು, ಗಣಿತದ ಪ್ರಮೇಯಗಳನ್ನು, ಸೂತ್ರಗಳನ್ನು ಬಿಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 3 ವಿಷಯಗಳಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಗಣಿತದ ರಚನೆಗಳು, ವಿಜ್ಞಾನದ ಪ್ರಮುಖ ಚಿತ್ರಗಳು,ಭೂಪಟದ ರಚನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕಾಲಕಾಲಕ್ಕೆ ಹಮ್ಮಿಕೊಂಡು ಉತ್ತಮ ಫಲಿತಾಂಶ ದತ್ತ ಚಿತ್ತಹರಿಸಲಾಗಿದೆ’
ಎಂದು ಮುಖ್ಯ ಶಿಕ್ಷಕಿ ಅನಿತಾ ತಿಳಿಸಿದರು.

ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆ ಇದೆ. ಶಿಕ್ಷಕ ವೃಂದ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ತರುವತ್ತ ಚಿತ್ತಹರಿಸಲಾಗಿದೆ

-ಚೋಕಿರ ಅನಿತಾ, ಮುಖ್ಯ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಕಡಗದಾಳು

ಕಡಗದಾಳು ಸರ್ಕಾರಿ ಶಾಲೆ ಶೇ 100ರಷ್ಟು ಫಲಿತಾಂಶವನ್ನು ಸತತ 3ನೇ ಬಾರಿ ಪಡೆಯಲು ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ನಾವೂ ಶಿಕ್ಷಕರಿಗೆ ಅಗತ್ಯ ತರಬೇತಿ ಕಾರ್ಯಾಗಾರ ನಡೆಸಿದ್ದೇವೆ.

-ರಂಗಧಾಮಯ್ಯ, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT