ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಗಡಿ ಭಾಗ| ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಉಳಿವಿಗೆ ಭಗೀರಥ ಪ್ರಯತ್ನ

ಬೇರೆ ಶಾಲೆಯಲ್ಲಿ ಮಾಡುವ ಪಾಠ ಆನ್‌ಲೈನ್‌ನಲ್ಲಿ ಆಲಿಸಲು ಅವಕಾಶ
Published 2 ನವೆಂಬರ್ 2023, 6:17 IST
Last Updated 2 ನವೆಂಬರ್ 2023, 6:17 IST
ಅಕ್ಷರ ಗಾತ್ರ

ಮಡಿಕೇರಿ: ಕೇರಳ ಗಡಿ ಭಾಗದಲ್ಲಿ ಏದುಸಿರು ಬಿಡುತ್ತಿರುವ ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಉಳಿಸಲು ಇಲ್ಲಿನ ಶಿಕ್ಷಣಾಧಿಕಾರಿ, ಸರ್ಕಾರೇತರ ಸಂಸ್ಥೆಗಳು ಹಾಗೂ ಕರಿಕೆ ಗ್ರಾಮ ಪಂಚಾಯಿತಿಯವರು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ.

ಈಗಾಗಲೇ 100 ಮಕ್ಕಳು ಕೇವಲ 4 ಕಿ.ಮೀ ದೂರದ ಕೇರಳದ ಶಾಲೆಗಳಿಗೆ ತೆರಳುತ್ತಿರುವುದು ಕನ್ನಡ ಶಾಲೆಯ ಉಳಿವಿನ ಕುರಿತು ಆತಂಕ ಎದುರಾಗಿದೆ.

ರಾಜ್ಯದ ಗಡಿಯೊಳಗಿನ ಕಟ್ಟಕಡೆಯ ಈ ಶಾಲೆಯಲ್ಲಿರುವ 70 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಸುಳ್ಯದ ಸ್ನೇಹಶಾಲೆ ಹಾಗೂ ಕರಿಕೆ ಗ್ರಾಮ ಪಂಚಾಯಿತಿ ಸಹಾಯಹಸ್ತ ಚಾಚಿವೆ.

ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಕಾಯಂ ಶಿಕ್ಷಕರು ಈಚೆಗೆ ವರ್ಗಾವಣೆಗೊಂಡರು. ಸದ್ಯ, ನಾಲ್ವರು ಅತಿಥಿ ಶಿಕ್ಷಕರಿದ್ದಾರೆ. ಆದರೆ, ವಿಜ್ಞಾನ ವಿಷಯಕ್ಕೆ ಅತಿಥಿ ಶಿಕ್ಷಕರು ಸಿಕ್ಕಿಲ್ಲ.

ಇಲ್ಲಿಂದ 35 ಕಿ.ಮೀ. ದೂರದ ಭಾಗಮಂಡಲದಲ್ಲಿ ಸರ್ಕಾರಿ ಅನುದಾನಿತ ಪ್ರೌಢಶಾಲೆ ಇದೆ. ಈ ನಡುವೆ ಒಂದೇ ಒಂದು ಕನ್ನಡ ಖಾಸಗಿ ಶಾಲೆಯೂ ಇಲ್ಲ. ಹಾಗಾಗಿ, ಗಡಿಭಾಗದ ಕೊನೆಯ ಶಾಲೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರೇತರ ಸಂಸ್ಥೆಗಳ ನೆರವು ಪಡೆದಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನವರು ಸಂಪನ್ಮೂಲ ಶಿಕ್ಷಕರನ್ನು ಕರೆತಂದು ದಸರೆ ರಜೆ ಅವಧಿಯಲ್ಲಿ ಬೋಧನೆ ಮಾಡಿಸಿದ್ದಾರೆ. ಆನ್‌ಲೈನ್‌ ತರಗತಿಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಸುಳ್ಯದ ಸ್ನೇಹಶಾಲೆಯ ಶಿಕ್ಷಕರು ಆನ್‌ಲೈನ್‌ ಮೂಲಕ ಈ ಶಾಲೆಯ ತರಗತಿಗಳನ್ನು ನಡೆಸುವ ಭರವಸೆ ನೀಡಿದ್ದಾರೆ. ಸ್ನೇಹಶಾಲೆಯಲ್ಲಿ ನಡೆಯುವ ಪಾಠವನ್ನು ಆನ್‌ಲೈನ್‌ ಮೂಲಕ ನೇರವಾಗಿ ಇಲ್ಲಿನ ಮಕ್ಕಳು ವೀಕ್ಷಿಸಬಹುದು.

ಇದಕ್ಕಾಗಿ ನೆರವಿಗೆ ನಿಂತಿರುವ ಕರಿಕೆ ಗ್ರಾಮ ಪಂಚಾಯಿತಿ ಶಾಲೆಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿದೆ. ಜತೆಗೆ, ಇಲ್ಲಿಗೆ ಸರ್ಕಾರೇತರ ಸಂಸ್ಥೆಗಳು ಕರೆ ತರುವ ಸಂಪನ್ಮೂಲ ಶಿಕ್ಷಕರು ತಂಗುವುದಕ್ಕೆ ಪಾಳುಬಿದ್ದಿದ್ದ ಅತಿಥಿ ಗೃಹವನ್ನೂ ದುರಸ್ತಿ ಮಾಡಿಸಿಕೊಟ್ಟಿದ್ದಾರೆ.

ಕರಿಕೆ ಕಾಲೊನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ 46 ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆಗೆ ಹೊಂದಿಕೊಂಡಂತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 56 ಮಕ್ಕಳು ಇದ್ದರೆ, ಇಲ್ಲಿಂದ 3 ಕಿ.ಮೀ ದೂರದ ಕರಿಕೆ ತೋಟದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ಮಕ್ಕಳಷ್ಟೆ ಇದ್ದಾರೆ.

ಇಲ್ಲಿಂದ ಮುಂದೆ 42 ಮಂದಿ ಮತದಾರರು ಇರುವ ಮುನ್ರೋಟ್‌ನಲ್ಲಿ ಕನ್ನಡ ಶಾಲೆಗಳಿಲ್ಲ. ಅಲ್ಲಿನ ಮಕ್ಕಳೆಲ್ಲ ಮಲಯಾಳಂ ಶಾಲೆಯಲ್ಲೇ ಕಲಿಯುತ್ತಿದ್ದಾರೆ.

ಕೇರಳದ ಗಡಿಭಾಗದಲ್ಲಿರುವ ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ
ಕೇರಳದ ಗಡಿಭಾಗದಲ್ಲಿರುವ ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ
ಸಂಪನ್ಮೂಲ ಶಿಕ್ಷಕರು ರಜೆ ಅವಧಿಯಲ್ಲಿ ಕರಿಕೆ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು
ಸಂಪನ್ಮೂಲ ಶಿಕ್ಷಕರು ರಜೆ ಅವಧಿಯಲ್ಲಿ ಕರಿಕೆ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು

ಕರಿಕೆ ಪ್ರೌಢಶಾಲೆ ಬಿಟ್ಟರೆ ಬೇರೆ ಶಾಲೆಗಳಿಲ್ಲ ಇಲ್ಲಿಗೆ ನಿಯೋಜನೆಯಾಗದ ಶಿಕ್ಷಕರು ಸದ್ಯ ಇರುವವರು ಒಬ್ಬರೇ ಕಾಯಂ ಶಿಕ್ಷಕರು

ಗಡಿಭಾಗದ ಶಾಲೆಗಳ ಉಳಿವಿಗೆ ವಿಶೇಷ ಆದ್ಯತೆ ನೀಡಿ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿ ಉತ್ತಮಗೊಳಿಸಲಾಗುತ್ತಿದೆ. ದಾನಿಗಳ ಮೂಲಕ ಸ್ಮಾರ್ಟ್‌ ಕ್ಲಾಸ್‌ ಒದಗಿಸಲು ಪ್ರಯತ್ನಿಸಲಾಗುತ್ತಿದೆ.
ಬಿ.ಸಿ.ದೊಡ್ಡೇಗೌಡ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ.
ಸಾಂಘಿಕ ಪ್ರಯತ್ನ ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಶಾಲೆಯ ಉಳಿವಿಗೆ ಪರ್ಯಾಯ ದಾರಿಗಳನ್ನು ಕಂಡುಕೊಳ್ಳಲಾಗುತ್ತಿದೆ. .
ಸೌಮ್ಯಾ ಪೊನ್ನಪ್ಪ ಪ್ರಭಾರ ಡಿಡಿಪಿಐ
ಸರ್ಕಾರ ಪ್ರತ್ಯೇಕ ನೀತಿ ನಿರೂಪಣೆ ಮಾಡುವುದೊಂದೇ ಗಡಿ ಭಾಗದ ಶಾಲೆಗಳನ್ನು ಉಳಿಸಲು ಇರುವ ಶಾಶ್ವತ ಪರಿಹಾರ.
ಪ್ರವೀಣ್‌ಕುಮಾರ್ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ.
ಶಾಲೆಗೆ ಉಚಿತವಾಗಿ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲಾಗಿದೆ. ಸಂಪನ್ಮೂಲ ಶಿಕ್ಷಕರು ತಂಗುವುದಕ್ಕೆ ಎಲ್ಲ ಬಗೆಯ ವ್ಯವಸ್ಥೆ ಮಾಡಿಕೊಡಲಾಗಿದೆ.
ಬಾಲಚಂದ್ರ ನಾಯರ್ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ.

ಗಡಿಭಾಗದ ಶಾಲೆಗಳಿಗೆ ಶಿಕ್ಷಕರಿಲ್ಲ! ಹೊಸ ಶಿಕ್ಷಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರ 2021ರ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ಶಾಲೆಗಳಿಗೆ ಶಿಕ್ಷಕರ ನಿಯೋಜನೆ ಮಾಡುತ್ತಿರುವುದರಿಂದ ಗಡಿಭಾಗದ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ತಲಕಾವೇರಿಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ 12 ಮಕ್ಕಳಿದ್ದಾರೆ. ಒಬ್ಬ ಅತಿಥಿ ಶಿಕ್ಷಕರಿದ್ದಾರೆ.  ಚೆಂಬು ಮತ್ತು ಪೆರಾಜೆ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಕನ್ನಡ ಶಾಲೆಗಳಿದ್ದು ಕೇವಲ ಒಬ್ಬಿಬ್ಬರು ಕಾಯಂ ಶಿಕ್ಷಕರಷ್ಟೇ ಇದ್ದಾರೆ. ಎಲ್ಲ ಕಡೆ ಅತಿಥಿ ಶಿಕ್ಷಕರೇ ಇದ್ದಾರೆ. ‘ಕಾಯಂ ಶಿಕ್ಷಕರು ಬೇಕು’ ಎಂಬುದು ಪೋಷಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT