ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ತಂಡದಿಂದ ಕಟ್ಟೆಚ್ಚರ

ಗಡಿ ಸಮೀಪದ ವಯನಾಡು ಜಿಲ್ಲೆಯಲ್ಲಿ ಹೆಚ್ಚಿದ ನಕ್ಸಲರ ಚಟುವಟಿಕೆ
Published 7 ಮೇ 2023, 21:01 IST
Last Updated 7 ಮೇ 2023, 21:01 IST
ಅಕ್ಷರ ಗಾತ್ರ

ಮಡಿಕೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಡಗು ಜಿಲ್ಲೆಯ ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್‌ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇಲ್ಲಿನ ಬಿರುನಾಣಿ, ಪೂಕೊಳ, ಮಾಕುಟ್ಟ ಮೊದಲಾದ ಗಡಿಭಾಗದ ಪ್ರದೇಶಗಳ ಜೊತೆಗೆ ಕೇರಳದ ಭಾಗಗಳಲ್ಲೂ ನಿರಂತರ ನಿಗಾ ಇರಿಸಿದ್ದಾರೆ.

‘ಏಪ್ರಿಲ್ 27ರಂದು ಕೇರಳದ ವಯನಾಡು ಜಿಲ್ಲೆಯ ತಲಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ನಕ್ಸಲರು ಕಾಣಿಸಿಕೊಂಡಿದ್ದರು. ಇವರಲ್ಲಿ ಕರ್ನಾಟಕದ ನಕ್ಸಲ್‌ ವಿಕ್ರಂ ಗೌಡ ಅವರೂ ಇದ್ದರು’ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಇಲ್ಲಿನ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಎಚ್ಚೆತ್ತಿದ್ದು, ಗಡಿಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

‘ಕೇರಳದ ಕಾಡಿನಂಚಿನಲ್ಲಿರುವ ಅನೇಕರಿಗೆ ನಕ್ಸಲರ ಮೇಲೆ ಅನುಕಂಪ ಇದೆ. ನಕ್ಸಲರ ಚಟುವಟಿಕೆಗಳು ಹೆಚ್ಚಿದ್ದರೂ, ಮಾಹಿತಿ ಇದ್ದರೂ ಇವರು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ’ ಎನ್ನುತ್ತವೆ ಮೂಲಗಳು. 

‘ಗಡಿಭಾಗದ ಕುಟ್ಟ ಮತ್ತು ಆರ್ಜಿ ಗ್ರಾಮಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಎರಡು ಶಿಬಿರಗಳು ಇವೆ. ಇಲ್ಲಿ 60ಕ್ಕೂ ಅಧಿಕ ಮಂದಿ ಪೊಲೀಸರು ಸಕ್ರಿಯವಾಗಿದ್ದು, ನಿತ್ಯವೂ ಕಾಡಿನೊಳಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇರಳದಲ್ಲಿ ಸದ್ಯ ‘ಬಾಣಾಸುರ’, ‘ಕಬಿನಿ–1’, ‘ಕಬಿನಿ– 2’ ಎಂಬ ತಂಡಗಳು ಹೆಚ್ಚು ಸಕ್ರಿಯವಾಗಿವೆ. ಇವರಲ್ಲಿ 8 ಮಂದಿ ಕನ್ನಡಿಗರೂ ಸೇರಿದಂತೆ ಒಟ್ಟು 16 ಮಂದಿ ಇದ್ದಾರೆ ಎಂಬುದು ಖಚಿತವಾಗಿದೆ. ಇತ್ತೀಚೆಗೆ ಮತ್ತಿಬ್ಬರು ಈ ತಂಡಕ್ಕೆ ಸೇರ್ಪಡೆಯಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಈ ಎಲ್ಲ ತಂಡಗಳೂ ಒಂದಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ.

ಮಳೆ ಇಲ್ಲದೇ ಇರುವುದರಿಂದ ಕಾಡಿನೊಳಗೆ ಸುಲಭವಾಗಿ ಮತ್ತು ಸರಾಗವಾಗಿ ಓಡಾಡಬಹುದಾಗಿದೆ. ಇದರಿಂದ ಕಳೆದೆರಡು ತಿಂಗಳುಗಳಿಂದ ನಕ್ಸಲರ ಚಟುವಟಿಕೆಗಳು ಗಡಿಭಾಗಕ್ಕೆ ಹೊಂದಿಕೊಂಡ ಕೇರಳದಲ್ಲಿ ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.

ಫೆ.7ರಂದು ಕೇರಳದ ಆರಳಂನ ವಿಯಟ್ನಾಂ ಕಾಲೊನಿಯ ಮನೆಯೊಂದಕ್ಕೆ ಬಂದಿದ್ದ ಐವರು ಬಂದೂಕುಧಾರಿ ನಕ್ಸಲರು ಮೊಬೈಲ್‌ ಫೋನ್‌ ಚಾರ್ಜ್ ಮಾಡಿಕೊಂಡು, ಅಡುಗೆ ಮಾಡಿಸಿ, ಊಟ ಮಾಡಿಕೊಂಡು, ದಿನಸಿ ಪದಾರ್ಥಗಳನ್ನು ತೆಗೆದುಕೊಂಡು ಕಾಡಿಗೆ ತೆರಳಿತ್ತು. ಈ ತಂಡದಲ್ಲಿಯೂ ಕರ್ನಾಟಕದವರು ಇದ್ದರು ಎಂದು ಮೂಲಗಳು ತಿಳಿಸಿವೆ.

ನಂತರ, ಮಾರ್ಚ್ 15ರಂದು ವಯನಾಡು ಜಿಲ್ಲೆಯ ಅರಿಮಲ ಕಾಲೊನಿಗೆ ಬಂದಿದ್ದ ನಾಲ್ವರು ನಕ್ಸಲರ ತಂಡವು ಕರಪತ್ರ ಹಂಚಿ ಪರಾರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT