ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು | ನಿತ್ಯ ಮಳೆ: ಕ್ರೀಡಾಕೂಟಗಳಿಗೆ ಪೂರ್ಣ ವಿರಾಮ

Published 21 ಮೇ 2024, 6:21 IST
Last Updated 21 ಮೇ 2024, 6:21 IST
ಅಕ್ಷರ ಗಾತ್ರ

ನಾಪೋಕ್ಲು: ಮಳೆಗಾಲದ ಆರಂಭದವರೆಗೆ ನಾಲ್ಕು ನಾಡು ವ್ಯಾಪ್ತಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದ ವಿವಿಧ ಕ್ರೀಡಾಕೂಟಗಳನ್ನು ಮಳೆಯ ಕಾರಣದಿಂದ ಆಯೋಜಕರು ಸ್ಥಗಿತಗೊಳಿಸಿದ್ದು, ಕ್ರೀಡಾಪ್ರೇಮಿಗಳಿಗೆ ನಿರಾಸೆ ಉಂಟಾಗಿದೆ.

ಮಾರ್ಚ್ ತಿಂಗಳಿನಿಂದ ಆರಂಭಗೊಂಡು ಮೇ ತಿಂಗಳ ಅಂತ್ಯದವರೆಗೂ ನಾಲ್ಕುನಾಡು ವ್ಯಾಪ್ತಿಯಲ್ಲಿ ವಿವಿಧ ಜನಾಂಗದವರ ಕ್ರೀಡಾಕೂಟಗಳು ನಡೆಯಬೇಕಿತ್ತು. ಅದಕ್ಕಾಗಿ ಸಿದ್ಧತೆಗಳನ್ನೂ ಕೈಗೊಳ್ಳಲಾಗಿತ್ತು. ಆದರೆ ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಮಳೆ ಕ್ರೀಡಾಕೂಟಗಳಿಗೆ ಪೂರ್ಣವಿರಾಮ ಹಾಕಿದೆ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ- ಕುಂಡ್ಯೋಳಂಡ ಕಪ್ ಹಾಕಿ ಸಹಸ್ರಾರು ಕ್ರೀಡಾ ಪ್ರೇಮಿಗಳಿಗೆ ಭರಪೂರ ಮನೋರಂಜನೆ ನೀಡಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಕ್ರೀಡಾಂಗಣಕ್ಕೆ ಆಗಮಿಸಿದ ಕ್ರೀಡಾಪಟುಗಳು, ಕ್ರೀಡಾಸಕ್ತರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು.

ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲೂ ವಿವಿಧ ಕ್ರೀಡೆಗಳ ಕಲರವ ಮೂಡಿಬಂದಿತ್ತು. 2-3 ತಿಂಗಳು ಸುಡು ಬಿಸಿಲಿನಲ್ಲಿ ಕ್ರೀಡೆಗಳ ಹವಾ ಹಬ್ಬಿತ್ತು. ಇದರಿಂದ ಉತ್ತೇಜಿತರಾದ ಐರಿ, ಕಣಿಯ, ಮೇದ ಜನಾಂಗದವರೂ ತಮ್ಮದೇ ಸಮುದಾಯಗಳನ್ನು ಒಟ್ಟುಗೂಡಿಸಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಸಾಮರಸ್ಯ ಮೆರೆದಿದ್ದರು. ಇನ್ನೂ ಹಲವು ಕ್ರೀಡಾಕೂಟಗಳಿಗೆ ಆಟದ ಮೈದಾನಗಳು ಸಜ್ಜುಗೊಳ್ಳುತ್ತಿದ್ದಂತೆ ಮಳೆ ಆರಂಭವಾಗಿದ್ದು ಆಯೋಜಕರು ಕ್ರಿಡಾಕೂಟಗಳನ್ನು ಮುಂದೂಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಮೇ.22ರಿಂದ 27 ರವರೆಗೆ ಅಂತರ ಗ್ರಾಮ ನಾಲ್ನಾಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲು ಉದ್ದೇಶಿಸಿದ್ದು, ಮಳೆಯ ಕಾರಣದಿಂದ ಮುಂದೂಡಲಾಗಿದೆ. ಗ್ರಾಮದ ಆಟದ ಮೈದಾನದಲ್ಲಿ 2000 ದಿಂದ 2012 ರವರೆಗೆ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿತು. 10 ವರ್ಷಗಳ ಬಳಿಕ ಮರುಚಾಲನೆ ದೊರೆತ ಕ್ರೀಡಾಕೂಟದಲ್ಲಿ ನಾಲ್ಕು ನಾಡು ವ್ಯಾಪ್ತಿಯ ನಾಪೋಕ್ಲು, ಬಲ್ಲಮಾವಟಿ ಹಾಗೂ ಕಕ್ಕಬೆ, ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 11 ಗ್ರಾಮಗಳ ತಂಡಗಳು ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದವು. 14 ತಂಡಗಳು ನೋಂದಾಯಿಸಿದ್ದವು. ಈ ವರ್ಷ ಮೇ 15ರಿಂದ ಪಂದ್ಯಾಟ ಆರಂಭಗೊಳ್ಳಬೇಕಿತ್ತು. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೇ 22 ರಿಂದ 27ರವರೆಗೆ ಪಂದ್ಯಾಟವನ್ನು ಮುಂದೂಡಲಾಯಿತು.

ಹವಾಮಾನ ಇಲಾಖೆ ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ನೀಡಿದ್ದರಿಂದ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಅಕ್ಟೋಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದರು.

ಬಲ್ಲಮಾವಟಿ ಗ್ರಾಮದ ಬಜರಂಗಿ ಯೂತ್ ಕ್ಲಬ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಮೇ 31 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆ ಈ ಟೂರ್ನಿಯನ್ನೂ ಮುಂದೂಡುವಂತೆ ಮಾಡಿದೆ. ಗೊಲ್ಲ ಜನಾಂಗದವರು ಪ್ರತಿವರ್ಷ ಆಯೋಜಿಸುವ ವಾರ್ಷಿಕ ಕ್ರೀಡಾಕೂಟಕ್ಕೂ ಮಳೆ ಅಡ್ಡಿಯುಂಟುಮಾಡಿದೆ. ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಈ ತಿಂಗಳು ನಡೆಸಬೇಕಿದ್ದ ಕ್ರೀಡಾಕೂಟವನ್ನು ಅಕ್ಟೋಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಚೋಕಿರ ಬಾಬಿ ಭೀಮಯ್ಯ ಹೇಳಿದರು.

ನಾಲ್ಕುನಾಡು ವ್ಯಾಪ್ತಿಯ ಹತ್ತಾರು ಕ್ರೀಡಾಕೂಟಗಳಿಗೆ ಈ ವರ್ಷ ಮೇ ತಿಂಗಳಲ್ಲಿ ಸುರಿಯುತ್ತಿರುವ ಮಳೆ ಪೂರ್ಣ ವಿರಾಮ ನೀಡಿದ್ದು, ಬೇಸಿಗೆಯ ದಿನಗಳಲ್ಲಿ ನಿತ್ಯ ಕಲರವದಿಂದ ಕೂಡಿದ್ದ ಕ್ರೀಡಾಂಗಣಗಳು ಈಗ ಬಣಗುಡುತ್ತಿವೆ. ಮಳೆಗಾಲ ಮುಗಿದು ಸೂರ್ಯ ಕಿರಣಗಳು ಮೈದಾನ ಸ್ಪರ್ಶಿಸುವರೆಗೆ ನಾಲ್ಕುನಾಡಿನ ಕ್ರೀಡಾಂಗಣಗಳಿಗೆ ವಿರಾಮ ದೊರೆಯಲಿದೆ.

ನಾಲ್ನಾಡ್ ಕಪ್ ಹಾಕಿ ಟೂರ್ನಿಗೆ ಸಿದ್ಧಗೊಂಡಿದ್ದ ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಕ್ರೀಡಾಂಗಣದಲ್ಲಿ ನೀರು ಆವರಿಸಿದೆ
ನಾಲ್ನಾಡ್ ಕಪ್ ಹಾಕಿ ಟೂರ್ನಿಗೆ ಸಿದ್ಧಗೊಂಡಿದ್ದ ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ಕ್ರೀಡಾಂಗಣದಲ್ಲಿ ನೀರು ಆವರಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT