ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಘೋಷಗಳ ಮಧ್ಯೆ ಉಕ್ಕಿದ ಜೀವನದಿ ಕಾವೇರಿ

ತಲಕಾವೇರಿಗೆ ಹರಿದು ಬಂದ ಭಕ್ತಸಾಗರ
Last Updated 18 ಅಕ್ಟೋಬರ್ 2022, 8:00 IST
ಅಕ್ಷರ ಗಾತ್ರ

ಮಡಿಕೇರಿ: ಹಸಿರು ಹೊದ್ದ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಸೋಮವಾರ ಸೂರ್ಯ ಅಸ್ತಮಿಸುತ್ತಿದ್ದಂತೆ ಸಂಭ್ರಮ ಮೇಳೈಸಿತು. ಭಕ್ತರ ನಂಬುಗೆಯಂತೆ ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಮೈಕೊರೆಯುವ ಚಳಿಯ ನಡುವೆ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದಳು.

ದಟ್ಟವಾದ ಮಂಜಿನ ನಡುವೆ ಭಕ್ತರ ನೂಕುನುಗ್ಗಲಿನ ನಡುವೆ‌ ಸಂಜೆ 7.21ರಲ್ಲಿ ವಿವಿಧ ಪೂಜಾವಿಧಿಗಳನ್ನು ನೆರವೇರಿಸಿದ ಬಳಿಕ 7.22 ಕ್ಕೆ ತೀರ್ಥೋದ್ಭವವಾಯಿತು ಎಂದು ಅರ್ಚಕ ವೃಂದ ಘೋಷಿಸಿ ತೀರ್ಥವನ್ನು ಪ್ರೋಕ್ಷಿಸಿದರು. ಕಳೆದೆರಡು ವರ್ಷಗಳಿಂದ ಇದ್ದ ಕೋವಿಡ್‌ ನಿರ್ಬಂಧಗಳು ಈ ಬಾರಿ ಇಲ್ಲದ್ದರಿಂದ ಭಕ್ತಸಾಗರವೇ ಹರಿದು ಬಂದಿತ್ತು.

ತೀರ್ಥೋದ್ಭವದ ಬಳಿಕ ಬಿಂದಿಗೆ ಹಾಗೂ ಬಾಟಲಿಗಳಲ್ಲಿ ತೀರ್ಥವನ್ನು ತುಂಬಿಸಿಕೊಳ್ಳಲು ಸಾವಿರಾರು ಭಕ್ತರು ಮುಗಿಬಿದ್ದರು. ಇಳಿ ಹೊತ್ತಿನಲ್ಲಿ, ಮೈಕೊರೆಯುವ ಚಳಿಯ ಮಧ್ಯೆಯೂ ಬ್ರಹ್ಮಕುಂಡಿಕೆಯ ಸಮೀಪದ ಪುಷ್ಕರಿಣಿಯಲ್ಲಿ ನೂರಾರು ಮಂದಿ ಮಿಂದು ಭಕ್ತಿಭಾವ ಮೆರೆದರು.

ತೀರ್ಥೋದ್ಭವದ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ತಮಿಳುನಾಡು, ಕೇರಳಗಳಿಂದಲೂ ಅಪಾರ ಸಂಖ್ಯೆಯ ಜನರು ಇಲ್ಲಿಗೆ ಬಂದಿದ್ದರು. ಭಾಗಮಂಡಲದಿಂದ ತಲಕಾವೇರಿಯವರೆಗೆ ಕೊಡವರ ಸಾಂಪ್ರದಾಯಿಕ ಉಡುಗೆಯಲ್ಲಿ ನೂರಾರು ಮಂದಿ ಪಾದಯಾತ್ರೆಯಲ್ಲಿ ಬಂದಿದ್ದು ವಿಶೇಷವಾಗಿತ್ತು. ತಲಕಾವೇರಿಯಾದ್ಯಂತ ಜಗಮಗಿಸುವ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.

ಸಮೀಪದ ಭಾಗಮಂಡಲದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲೂ ಭಕ್ತರು ಪುಣ್ಯಸ್ನಾನ ಮಾಡಿದರು. ಪಿಂಡ ಪ್ರದಾನ ಮತ್ತಿತರ ಧಾರ್ಮಿಕ ಕಾರ್ಯ ನೆರವೇರಿಸಿದರು. ತಡರಾತ್ರಿಯವರೆಗೂ ಭಾಗಮಂಡಲ, ತಲಕಾವೇರಿಯಲ್ಲಿ ಜನಜಂಗುಳಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT